ಹುಬ್ಬಳ್ಳಿ: ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉಪಹಾರ-ಊಟ ನೀಡಿಕೆ ಉದ್ದೇಶದೊಂದಿಗೆ ಆರಂಭವಾದ ಇಂದಿರಾ ಕ್ಯಾಂಟೀನ್‌ಗಳು ಅನುದಾನ ಕೊರತೆಯಿಂದಾಗಿ ಹುಬ್ಬಳ್ಳಿಯಲ್ಲಿ ಒಂದೊಂದೇ ಕಣ್ಣು ಮುಚ್ಚತೊಡಗಿವೆ. ಈಗಾಗಲೇ ಮೂರು ಕ್ಯಾಂಟೀನ್‌ಗಳು ಬಂದ್ ಆಗಿದ್ದು, ಇನ್ನಷ್ಟು ಕ್ಯಾಂಟೀನ್ ಗಳು ಮುಚ್ಚುವ ಕಡೆ ಮುಖ ಮಾಡಿವೆ.
ನಗರದಲ್ಲಿ ಆರಂಭಗೊಂಡ ಒಂಭತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆರಂಭದಲ್ಲಿ ಉತ್ತಮ ಸ್ಪಂದನೆ ಸಿಕ್ಕಿತ್ತು. ಮೊದಲ ಹಂತದಲ್ಲಿ ಮೂರು ತದನಂತರ ಆರು ಇಂದಿರಾ ಕ್ಯಾಂಟೀನ್‌ಗಳು ತಲೆ ಎತ್ತಿದ್ದವು. ಆದರೆ ಇಂದು ಒಂಭತ್ತರಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳು ಕದ ಮುಚ್ಚಿವೆ.
ಇಂದಿರಾ ಕ್ಯಾಂಟೀನ್ ನಿರ್ವಹಿಸುವ ಸಂಸ್ಥೆಗೆ ಬಾಕಿ ಹಣ ಪಾವತಿ ಆಗದ್ದರಿಂದ, ಕೈಸುಟ್ಟುಕೊಂಡ ಸ್ಥಿತಿಗೆ ತಲುಪಿದ ಗುತ್ತಿಗೆ ಪಡೆದ ಸಂಸ್ಥೆ ಇದರ ಸಹವಾಸವೇ ಬೇಡ ಎಂದು ಕ್ಯಾಂಟೀನ್ ಮುಚ್ಚಲು ಮುಂದಾಗಿದೆ. ಈ ಹಿಂದೆಯೂ ಕ್ಯಾಂಟೀನ್‌ಗಳು ಮುಚ್ಚುವ ಸ್ಥಿತಿಗೆ ಬಂದಾಗ, ಜಿಲ್ಲಾಡಳಿತ 70 ಲಕ್ಷ ರೂ. ಬಿಡುಗಡೆ ಮಾಡಿ ಅರೆಜೀವಾವಸ್ಥೆಯಲ್ಲಿರುವಂತೆ ಮಾಡಿತ್ತು. ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಪಡೆದ ಆದಿತ್ಯಾ ಮಯೂರ ರೆಸಾರ್ಟ್‌ನವರು ಅನುದಾನಕ್ಕಾಗಿ ಕಾಯ್ದು ಕುಳಿತಿದ್ದರೂ ಅವರ ನಿರೀಕ್ಷೆ ಹುಸಿಯಾಗುತ್ತಲೇ ಸಾಗುತ್ತಿದೆ. ವರ್ಷದ ಹಿಂದೆ ಹಣ ಬಿಡುಗಡೆಯಾಗಿದ್ದು ಬಿಟ್ಟರೆ ಮತ್ತೆ ಹಣ ಬಂದಿಲ್ಲ.
ಜಿಲ್ಲಾಡಳಿತದಿಂದ ಸುಮಾರು 36 ಲಕ್ಷ ರೂ., ಹು-ಧಾ ಮಹಾನಗರ
ಪಾಲಿಕೆಯಿಂದ 1.76 ಕೋಟಿ ರೂ. ಬಾಕಿ ಹಣ ಬರಬೇಕಾಗಿದೆ ಎನ್ನಲಾಗಿದೆ.
ಎಲ್ಲೆಲ್ಲಿ ಬಂದ್?: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಒಂಭತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸದ್ಯ ಮೂರು ಕ್ಯಾಂಟೀನ್‌ಗಳು ಬಿಲ್ ಬಾಕಿ ಹಾಗೂ ಸಿಬ್ಬಂದಿ ಕೊರತೆಯಿಂದ ಜ. 1ರಿಂದ ಬಂದ್ ಆಗಿವೆ. ಎಸ್. ಎಂ. ಕೃಷ್ಣಾ ನಗರ, ಸೋನಿಯಾ ಗಾಂಧಿ ನಗರ ಹಾಗೂ ಬೆಂಗೇರಿ ಕಿಚನ್ ಪಕ್ಕದಲ್ಲಿರುವ ಕ್ಯಾಂಟೀನ್ ಗಳು ಬಂದ್ ಆಗಿವೆ. ಈ ಮೂರು ಕಡೆ ಸಿಬ್ಬಂದಿ ಕೊರತೆ ಎದುರಾಗಿದ್ದು, ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಉಳಿದಿರುವುದು ಹಾಗೂ ಜನರ ನಿರಾಸಕ್ತಿಯಿಂದ ಕ್ಯಾಂಟೀನ್ ಬಂದ್ ಮಾಡಲಾಗಿದೆ.
ಒಂದು ವರ್ಷದಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಸುಮಾರು ಎರಡು ಕೋಟಿಗೂ ಅಧಿಕ ಬಾಕಿ ಹಣ ಬರಬೇಕಾಗಿದೆ. ಇದರಿಂದ ಇಂದಿರಾ ಕ್ಯಾಂಟೀನ್ ನಡೆಸುವುದು ಕಷ್ಟವಾಗಿದ್ದು, ಡಿಸಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೇ ಜಿಲ್ಲೆಗಳಲ್ಲೂ ಹಣ ಬಾಕಿ ಇಟ್ಟುಕೊಂಡಿಲ್ಲ, ನಮ್ಮಲ್ಲಿ ಮಾತ್ರ ಬಾಕಿ ಉಳಿಸಿಕೊಂಡಿದ್ದು ಯಾಕೆಂದು ತಿಳಿಯುತ್ತಿಲ್ಲ. ಎರಡ್ಮೂರು ದಿನಗಳಿಂದ ಸಿಬ್ಬಂದಿ ಕೊರತೆಯಿಂದ ಹಾಗೂ ಆರ್ಥಿಕ ಸಮಸ್ಯೆಯಿಂದ ಮೂರು ಕ್ಯಾಂಟೀನ್‌ಗಳು ಬಂದ್ ಆಗಿದ್ದು, ಕೂಡಲೇ ಈ ಕುರಿತು ಗಮನ ಹರಿಸಲಾಗುವುದು.
ಹೇಮಲ ದೇಸಾಯಿ, ಸಿಇಒ,
ಮಯೂರ ಆದಿತ್ಯಾ ರೆಸಾರ್ಟ್
ಸ್ಪಂದನೆ ಅಷ್ಟಕಷ್ಟೇ
ಆರಂಭದಲ್ಲಿದ್ದಂತೆ ಎಲ್ಲ ಕ್ಯಾಂಟೀನ್‌ಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಹಿಂದೆ 300-400 ಪ್ಲೇಟ್ ಊಟ ಸರಬರಾಜಾಗುತ್ತಿತ್ತು. ಇದೀಗ ಸಂಖ್ಯೆ ಇಳಿಮುಖವಾಗಿದೆ. ರಾತ್ರಿ ಹೊತ್ತು ತೀರಾ ಕಡಿಮೆಯಾಗಿದೆ. ಬೆಳಗಿನ ಉಪಹಾರ ಉತ್ತಮವಾಗಿದ್ದು, ಮಧ್ಯಾಹ್ನದ ಊಟದಲ್ಲಿ ಗಣನೀಯ ಇಳಿಕೆಯಾಗಿದೆ.
ಬಸವರಾಜ ಹೂಗಾರ