ಹುಬ್ಬಳ್ಳಿ: ನಿನ್ನೆ ಮೊನ್ನೆಯಷ್ಟೇ ತೀವ್ರ ಬೆಲೆ ಕುಸಿತದಿಂದ ರೈತರಿಗೆ ಕಣ್ಣೀರು ತರಿಸಿದ್ದ ಉಳ್ಳಾಗಡ್ಡಿ, ಇದೀಗ ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಉಳ್ಳಾಗಡ್ಡಿ ಎಂದರೆ ಸಾಕು ಒಂದು ರೈತರಿಗೆ, ಇಲ್ಲವೇ ಗ್ರಾಹಕರಿಗೆ ಕಣ್ಣೀರು ತರಿಸದೇ ಇರದು. ಉಳ್ಳಾಗಡ್ಡಿಗೆ ಉತ್ತಮ ದರ ದೊರೆಯುತ್ತಿಲ್ಲವೆಂದು ರೈತರು ಬೀದಿಗಿಳಿದು ಹೋರಾಟ ಮಾಡಿದ್ದಾರಾದರೂ, ಇದೀಗ ದರ ಕೇಳಿದರೆ ಗಾಬರಿಪಡುವಷ್ಟು ಎತ್ತರಕ್ಕೇರಿದೆ. ಕೆಲ ಮಾರುಕಟ್ಟೆಗಳಲ್ಲಿ ಉಳ್ಳಾಗಡ್ಡಿ ದರ ದಿನಕ್ಕಲ್ಲ, ಗಂಟೆಗಳ ಲೆಕ್ಕದಲ್ಲಿ ಹೆಚ್ಚಳವಾಗತೊಡಗಿದೆ. ಎಪಿಎಂಸಿಯ ಅಂಗಡಿಗಳಲ್ಲೇ ಒಂದು ಕೆಜಿ ಉಳ್ಳಾಗಡ್ಡಿಗೆ 60 ರೂ. ದರ ಇದ್ದರೆ, ಮಾರುಕಟ್ಟೆಯಲ್ಲಿ 80ರಿಂದ 100 ರೂ.ಗೆ ಮಾರಾಟವಾಗತೊಡಗಿದೆ.
Advertisement
ಕೆಜಿಗಟ್ಟಲೇ ಉಳ್ಳಾಗಡ್ಡಿ ತರುವವರು ದರ ಕಂಡು ದಂಗಾಗಿದ್ದು, ಗ್ರಾಂ ಲೆಕ್ಕದಲ್ಲಿ ತರುವಂತಾಗಿದೆ. ದರ ಹೆಚ್ಚಳ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. 10 ಕೆಜಿ ಉಳ್ಳಾಗಡ್ಡಿ ತಂದರೆ ಬಳಸುವುದರೊಳಗೆ ಸುಮಾರು 2 ಕೆಜಿಯಷ್ಟು ಉಳ್ಳಾಗಡ್ಡಿ ಕೊಳೆತು ಹೋಗಿರುತ್ತದೆ.