ಹುಬ್ಬಳ್ಳಿ: ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಶಿಖರವೇರುತ್ತಿರುವ ಯುವತಿ ಇದೀಗ ಜಪಾನ್ ಟೋಕಿಯೋದಲ್ಲಿ ನಡೆಯುತ್ತಿರುವ ಜಪಾನ್ ಫಾರ್ ಏಷಿಯನ್ ಇಂಟರ್‌ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾಳೆ. ಇಲ್ಲಿನ ನೀಲಿಜಿನ್ ರಸ್ತೆ ಶಿಂಧೆ ಕಾಂಪ್ಲೆಕ್ಸ್ ನಲ್ಲಿರುವ ಮಹೇಂದ್ರಕುಮಾರ ಬಾಫಣಾ ಹಾಗೂ ಸಂಗೀತಾದೇವಿ ಬಾಫಣಾ ಅವರ ಪುತ್ರಿ ಖುಷ್ಬೂ ಜೈನ್ ಈ ಸಾಧನೆ ಮಾಡುತ್ತಿರುವ ಯುವತಿ. ತನ್ನ 9ನೇ ವಯಸ್ಸಿನಲ್ಲಿ ಕರಾಟೆ ತರಬೇತಿ ಪಡೆಯಲು ಆರಂಭಿಸಿದ್ದು, ಹಂತ ಹಂತವಾಗಿ ಸಾಧನೆ ಶಿಖರ ಏರುತ್ತಿದ್ದಾಳೆ.
2008-09ರಲ್ಲಿ ಕರಾಟೆ ತರಬೇತಿ ಆರಂಭಿಸಿದ್ದು, ಇಲ್ಲಿಯವರೆಗೆ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ. 20 ರಾಷ್ಟ್ರೀಯ ಹಾಗೂ 4 ಅಂತಾರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ. 2018ರಲ್ಲಿ ಮಲೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕ, ಬ್ಯಾಂಕಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 1 ಚಿನ್ನದ ಪದಕ, ಶಿವಮೊಗ್ಗದಲ್ಲಿ ನಡೆದ ಸ್ಪರ್ಧೆಯಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ ಪದಕ, ಸಿಂಧನೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದುಕೊಂಡಿದ್ದು, ಚಿನ್ನದ ಸಾಧಕಿಯಾಗಿ ಹೊರಹೊಮ್ಮುತ್ತಿದ್ದಾಳೆ. ಕರಾಟೆ ಗುರು ವಿನೋದ ಭಾಂಡಗೆ ಅವರಲ್ಲಿ ತರಬೇತಿ ಪಡೆದಿದ್ದು, ಅಣ್ಣಪ್ಪ ಮರಕಲ್ಲ ಅವರ ತಂಡದಲ್ಲಿ ತರಬೇತಿ ಪಡೆದು ಬ್ಲ್ಯಾಕ್ ಬೆಲ್ಟ್ ಪೂರ್ಣಗೊಳಿಸಿದ್ದಾಳೆ. ಕರಾಟೆಯಲ್ಲಿ ಅಪಾರ ಸಾಧನೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.
ಶಿಕ್ಷಣ: ಕರಾಟೆಯಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಸಾಧಕಿ ಖುಷ್ಬೂ ಬಿಕಾಂ ಪದವಿ ಮುಗಿಸಿದ್ದು, ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುವತಿಯರಿಗೆ ತರಬೇತಿ: ತಾನು ಪಡೆದಿರುವ ಕರಾಟೆ ಶಿಕ್ಷಣ ಸಾಧನೆಗೆ ಮಾತ್ರ ಸೀಮಿತಗೊಳಿಸದೆ ಮತ್ತೂಬ್ಬರಿಗೆ ಸಹಕಾರಿಯಾಗಲಿ ಎಂದು ಹಲವು ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಗಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಮಹಿಳಾ ಮಹಾವಿದ್ಯಾಲಯ, ಮಹೇಶ ಪಿಯು ಕಾಲೇಜು, ಕೆಎಲ್‌ಇ ಕಾಲೇಜು, ಸಮರ್ಥ ಪಿಯು ಕಾಲೇಜು, ಜೈನ್ ಪಿಯು ಕಾಲೇಜು, ಸರಕಾರಿ ಪಾಲಿಟೆಕ್ನಿಕ್, ಜೆಎಸ್‌ಎಸ್ ಶಾಲೆ ಹುಬ್ಬಳ್ಳಿ ಹಾಗೂ ಧಾರವಾಡ ವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದಾರೆ.
ಕೆಎಐಗೆ ಸ್ಪರ್ಧೆ: ಈಗಾಗಲೇ ಕರಾಟೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಖುಷ್ಬೂ ಜೈನ್, ಕರ್ನಾಟಕ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸುತ್ತಿರುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ನ. 1ರಂದು ಜಪಾನ್ ಟೋಕಿಯೋದಲ್ಲಿ ನಡೆಯುತ್ತಿರುವ ಜಪಾನ್ ಫಾರ್ ಏಷಿಯನ್ ಇಂಟರ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಅಲ್ಲಿ ಪ್ರತಿಭೆ ಪ್ರದರ್ಶನದಿಂದ ಪ್ರಶಸ್ತಿ ಪಡೆಯುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಲಿ ಎಂಬುದು ಹಾರೈಕೆಯಾಗಿದೆ.