Advertisement

ಹುಬ್ಬಳ್ಳಿ: ಜಿ.ಬಿ.ಜೋಶಿ ಮೆಮೋರಿಯಲ್‌ ಟ್ರಸ್ಟ್‌- 23ರಿಂದ ನಾದ ಲಹರಿ ಸಂಗೀತೋತ್ಸವ

03:36 PM Feb 21, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಪಂ|ಕುಮಾರ ಗಂಧರ್ವರ ಜನ್ಮಶತಾಬ್ದಿ ನಿಮಿತ್ತ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಫೆ.23 ರಿಂದ 25 ರವರೆಗೆ “ನಾದ ಲಹರಿ’ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಂಗೀತ
ಕಲಾವಿದರು ಪಾಲ್ಗೊಳ್ಳಲಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಅವರು, ಪ್ರಸ್ತುತ ವರ್ಷವನ್ನು ಅವರ ಜನ್ಮಶತಾಬ್ದಿ ವರ್ಷವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಯಿಂದ ಸಂಗೀತೋತ್ಸವ ಆಯೋಜಿಸಲಾಗಿದೆ. ಕಳೆದ ತಿಂಗಳು ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದೀಗ ನಗರದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಫೆ.23ರಂದು ಸಂಜೆ 5:30ಕ್ಕೆ ಸಂಗೀತೋತ್ಸವ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಎಲ್‌ ಐಸಿ ದಕ್ಷಿಣ ಮಧ್ಯ ವಿಭಾಗದ ವಲಯ ಪ್ರಬಂಧಕ ಎಲ್‌.ಕೆ. ಶ್ಯಾಮಸುಂದರ, ಪದ್ಮಶ್ರೀ ಪುರಸ್ಕೃತ ಹಿರಿಯ ನೇತ್ರತಜ್ಞ ಡಾ|ಎಂ.ಎಂ. ಜೋಶಿ ಆಗಮಿಸಲಿದ್ದಾರೆ.

ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ನ ಚೇರಮನ್‌ ಡಾ| ರಮಾಕಾಂತ ಜೋಶಿ ಉಪಸ್ಥಿತರಿರುವರು.

Advertisement

ಸಂಜೆ 6:30ಕ್ಕೆ ಜೈಪುರ-ಅತೌಲಿ ಘರಾಣೆಯ ಗಾಯಕಿ ಪುಣೆಯ ಯಶಸ್ವಿ ಸರಪೋತದಾರ ಅವರ ಗಾಯನ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8:00 ಗಂಟೆಗೆ ಕಿರಾನಾ ಘರಾಣೆಯ ಸ್ಥಳೀಯ ಮೇರು ಕಲಾವಿದ ಜಯತೀರ್ಥ ಮೇವುಂಡಿ ಪ್ರಸ್ತುತಿ ಪಡಿಸುವರು. ಫೆ.24 ರಂದು ಸಂಜೆ 5.30ಕ್ಕೆ ಕಿರಾನಾ ಘರಾಣೆಯ ಕೋಲ್ಕತ್ತಾದ ವಿ|ಮನಾಲಿ ಬೋಸ್‌, ಸಂಜೆ 7:00 ಗಂಟೆಗೆ ಕಲಾವಿದೆ ವಿ|ಕಲಾ ರಾಮನಾಥ ಅವರ ವಯೋಲಿನ್‌ ತಂತುಗಳ ನಿನಾದ ಝೇಂಕರಿಸಲಿದೆ.

ಫೆ.25ರಂದು ಸಂಜೆ 7:00 ಗಂಟೆಗೆ ನವದೆಹಲಿಯ ಲಕ್ಷé ಮೋಹನ ಹಾಗೂ ಆಯುಷ ಮೋಹನ ಸಹೋದರರ ಸಿತಾರ-ಸರೋದ ವಾದನಗಳ ಜುಗಲ್‌ ಬಂದಿಯೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ. ಸಹಕಲಾವಿದರಾಗಿ ಪಂ| ರಾಜೇಂದ್ರ ನಾಕೋಡ, ಡಾ| ರವಿಕಿರಣ ನಾಕೋಡ, ಪಂ|ಭೂಷಣ ಪರಚುರೆ, ಮಯಾಂಕ ಬೇಡೆಕರ, ರೂಪಕ ಕಲ್ಲೂರಕರ ತಬಲಾ ಸಾಥ್‌ ನೀಡಲಿದ್ದು, ಡಾ|ರವೀಂದ್ರ ಕಾತೋಟಿ, ಸತೀಶ ಭಟ್ಟ ಹೆಗ್ಗಾರ ಸಂವಾದಿನಿಯೊಂದಿಗೆ ಪಾಲ್ಗೊಳ್ಳಲಿದ್ದಾರೆ.

ಫೆ.25ರಂದು ಸಂಜೆ 5:30ಕ್ಕೆ ಸಂಗೀತೋತ್ಸವ ಸಮಾರೋಪ ಜರುಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಎಲ್‌ಐಸಿ ಧಾರವಾಡದ ಹಿರಿಯ ವಿಭಾಗೀಯ ಪ್ರಬಂಧಕ ಕೆ. ವೆಂಕಟರಮಣ ಆಗಮಿಸಲಿದ್ದಾರೆ. ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌ನ ಚೇರಮನ್‌ ಡಾ| ರಮಾಕಾಂತ ಜೋಶಿ ಉಪಸ್ಥಿತರಿರುವರು.

ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದರಾದ ಪಂ|ಬಿ.ಎಸ್‌. ಮಠ, ವಿದುಷಿ ಅಕ್ಕಮಹಾದೇವಿ ಮಠ, ಹಿರಿಯ ತಬಲಾ ವಾದಕ ಪಂ| ರಘುನಾಥ ನಾಕೋಡ, ಗಾನವಿದುಷಿ ರೇಣುಕಾ ನಾಕೋಡ, ಧಾರವಾಡ ಘರಾಣೆಯ ಹಿರಿಯ ಸಿತಾರ ವಾದಕ ಪಂ| ಶ್ರೀನಿವಾಸ ಜೋಶಿ, ಹಿರಿಯ ಸಂಗೀತ ತಜ್ಞ-ಗುರು ಪಂ| ಕೃಷ್ಣರಾವ ಇನಾಮದಾರ ಅವರನ್ನು ಸನ್ಮಾನಿಸಲಾಗುವುದು.

ತಾಲೂಕು ಕೇಂದ್ರಗಳಲ್ಲಿ ಕರಿನೀರ ವೀರ ಪ್ರದರ್ಶನ ಕೊಡಗಿನ ರಂಗಭೂಮಿ ಟ್ರಸ್ಟ್‌ ಹಾಗೂ ಕ್ಷಮತಾ ಸೇವಾ ಸಂಸ್ಥೆಯಿಂದ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ ಕರಿನೀರ ವೀರ ನಾಟಕ ಪ್ರದರ್ಶನ ನಡೆಯಲಿದೆ. ಫೆ.24ರಂದು ಧಾರವಾಡದಲ್ಲಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಫೆ.24 ಧಾರವಾಡದ ಸನ್ನಿಧಿ ಕಲಾಕ್ಷೇತ್ರ, ಫೆ.25ರಂದು ಅಳ್ನಾವರದ
ಉಮಾ ಭವನ, ಫೆ.27ರಂದು ಕಲಘಟಗಿ ಬಸವೇಶ್ವರ ಭವನ, ಫೆ.29 ರಂದು ಶಿಗ್ಗಾವಿ ಬೊಮ್ಮಾಯಿ ನಿವಾಸ, ಮಾ.2ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್‌, ಮಾ.3 ಕುಂದಗೋಳದ ಸವಾಯಿ ಗಂಧರ್ವ ಭವನ, ಮಾ.5 ಅಣ್ಣಿಗೇರಿ ಪಂಪ ಭವನದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next