Advertisement

ಹಣ್ಣುಗಳ ಬೆಳೆದವರು ಹಣ್ಣಾದರು..

11:36 AM Apr 11, 2020 | Naveen |

ಹುಬ್ಬಳ್ಳಿ: “ಏಳು ಎಕರೆಯಲ್ಲಿ ಪಪ್ಪಾಯಿ ಬೆಳೆದು ನಿಂತಿದೆ. 115-120ಟನ್‌ ಪಪ್ಪಾಯಿ ಬಂದ ಖುಷಿಯ ಬೆನ್ನಿಗೆ ಮಾರುಕಟ್ಟೆ ಇಲ್ಲದ ಬರಸಿಡಿಲು ಎರಗಿದೆ. ಉತ್ತಮ ಫ‌ಸಲು, ಒಳ್ಳೆ ದರ ನಿರೀಕ್ಷೆಯೊಂದಿಗೆ, ಬಾವಿ- ಕೊಳವೆಬಾವಿ ತೋಡಿಸಲು, ಬೆಳೆಗೆಂದು ಮಾಡಿರುವ 15ಲಕ್ಷ ರೂ.ನಷ್ಟು ವೆಚ್ಚ-ಸಾಲಕ್ಕೆ ಮುಂದೇನೆಂಬ ಚಿಂತೆ ರೈತನನ್ನು ಕಾಡತೊಡಗಿದೆ…’
-ಇದು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಟೋಕಾಪುರದ ರೈತ ಹನುಮಂತರಾಯ ದೊರೆ ಅವರ ಕಥೆ. ಇದು ಒಬ್ಬರ ಕಥೆಯಷ್ಟೇ ಅಲ್ಲ. ಉತ್ತರ ಕರ್ನಾಟಕದ ಹಣ್ಣುಗಳ ಬೆಳೆದ ಬಹುತೇಕ ರೈತರ ಕಥೆ-ವ್ಯಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ವಿಶೇಷವಾಗಿ ದ್ರಾಕ್ಷಿ, ಕಲ್ಲಂಗಡಿ, ಕರಬೂಜ, ಪಪ್ಪಾಯಿ ಬೆಳೆದವರ ಸ್ಥಿತಿ ಹೆಚ್ಚಿನ ಸಂಕಷ್ಟದ್ದಾಗಿದೆ.

Advertisement

ಕಲ್ಲಂಗಡಿ ಮಾರಾಟ ಸಾಧ್ಯವಾಗದೆ ರೈತರು ಕುರಿ ಬಿಟ್ಟು ಬೆಳೆ ಮೇಯಿಸುವ ಸ್ಥಿತಿಗೆ ತಲುಪಿದ್ದಾರೆ. ಸಾಲದ ಚಿಂತೆ: ಟೋಕಾಪುರದ ಹನುಮಂತರಾಯ ದೊರೆ ತಮ್ಮ ಸುಮಾರು ಏಳು ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಬೆಳೆಗೆ ನೀರೊದಗಿಸಲು ಸುಮಾರು 25 ಅಡಿ ಆಳದ ಬಾವಿ ತೋಡಿಸಿದ್ದರು. ಅದರಲ್ಲೂ ನಿರೀಕ್ಷಿತ ನೀರು ಬರಲಿಲ್ಲ. ಏಳು ಕೊಳವೆಬಾವಿ ಕೊರೆಸಿದ್ದರು, ಎರಡರಲ್ಲಿ ಮಾತ್ರ ನೀರು ಬಂದಿದೆ. ಬಾವಿ, ಬೆಳೆಗೆಂದು ಸುಮಾರು 15 ಲಕ್ಷ ರೂ.ನಷ್ಟು ವೆಚ್ಚ ಮಾಡಿದ್ದಾರೆ. ಪಪ್ಪಾಯಿ ಹಣ್ಣು ಖರೀದಿಗಾಗಿ ಹೈದರಾಬಾದ್‌, ಮುಂಬಯಿ, ಗುಜರಾತ್‌, ಗೋವಾ, ದೆಹಲಿ ಇನ್ನಿತರ ಕಡೆಯ ಕಾರ್ಖಾನೆಯವರು ಒಂದು ಕೆ.ಜಿ. ಪಪ್ಪಾಯಿಯನ್ನು 22-23 ರೂ.ನಂತೆ ಖರೀದಿಸುವುದಾಗಿ ಹೇಳಿದ್ದರು. ಸಾಗಣೆ ವೆಚ್ಚವನ್ನು ತಾವೇ ಭರಿಸುವುದಾಗಿಯೂ ಹೇಳಿದ್ದರು. ಯಾವಾಗ ಕೊರೊನಾ ಹೊಡೆತ ಬಿದ್ದಿತೋ ಖರೀದಿಗೆ ಕೇಳಿದವರೆಲ್ಲರೂ ಮೌನ ವಾಗಿದ್ದಾರೆ. ಮಾರುಕಟ್ಟೆ ಹಾಗೂ ಕಾರ್ಖಾನೆ ಸೇರಬೇಕಾಗಿದ್ದ ಪಪ್ಪಾಯಿ ಹೊಲದಲ್ಲಿಯೇ ಕೊಳೆಯುವಂತಾಗಿದೆ.

“ಸದ್ಯಕ್ಕೆ ಹೈದರಾಬಾದ್‌ಗೆ ಮಾತ್ರ ಪಪ್ಪಾಯಿ ಕಳುಹಿಸಬಹುದಾಗಿದೆ. ಅಲ್ಲಿ ಕೆ.ಜಿ.ಗೆ 2-4 ರೂ.ವರೆಗೆ ಕೇಳುತ್ತಿದ್ದಾರೆ. ಆ ದರಕ್ಕೆ ನೀಡಿದರೆ ಅರ್ಧಕ್ಕಿಂತ ಹೆಚ್ಚು ಹಣ ವಾಹನ ಬಾಡಿಗೆಗೆ ಹೋಗುತ್ತದೆ. ಇನ್ನು ಬೆಳೆಗೆ ಮಾಡಿದ ವೆಚ್ಚ, ಪ್ಯಾಕಿಂಗ್‌ ಇತ್ಯಾದಿ ವೆಚ್ಚಕ್ಕೆ ಏನು ಮಾಡಬೇಕು. 15 ಟನ್‌ ಪಪ್ಪಾಯಿ ಕಳುಹಿಸಿದ್ದೇನೆ. ಇನ್ನು 100 ಟನ್‌ನಷ್ಟು ಪಪ್ಪಾಯಿ ಕೊಯ್ಲಿಗೆ ಬಂದಿದೆ. ಏನು ಮಾಡುವುದು ಎಂಬ ಚಿಂತೆ ಆವರಿಸಿದೆ’ ಎಂಬುದು ಹನುಮಂತರಾಯ ದೊರೆ ಅವರ ಅಳಲು.

ಕುರಿ ಮೇಯಿಸಿದರು: ಬಳ್ಳಾರಿ ಜಿಲ್ಲೆ ಸಿರುಗುಪ್ಪಾ ತಾಲೂಕಿನ ಕೊಂಚಗೇರಿಯ ರೈತ ಎನ್‌.ಹೊನ್ನೂರಪ್ಪ ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಉತ್ತಮ ದರಕ್ಕೆ ಮಾರಾಟ ಮಾಡಿದ್ದರು. ಈ ವರ್ಷ ಮಾರುಕಟ್ಟೆ ಇಲ್ಲವಾಗಿದೆ. ಹಳ್ಳಿಗಳಿಗೆ ನೇರವಾಗಿ ಮಾರಾಟಕ್ಕೆ ತೆಗೆದುಕೊಂಡು ಹೋದರೆ 6-8 ಕೆ.ಜಿ. ತೂಕದ ಕಲ್ಲಂಗಡಿಯನ್ನು 20-30ರೂ.ಗೆ ಕೇಳುತ್ತಿದ್ದಾರೆ. ಹಳ್ಳಿಗಳಿಗೆ ಹೋದರೆ ರಸ್ತೆಯಲ್ಲಿ ಪೊಲೀಸರು ನಿಲ್ಲಿಸುತ್ತಿದ್ದಾರೆ. ಹೀಗಾಗಿ ಹೊಲದಲ್ಲಿ ಕುರಿಗಳನ್ನು ಬಿಟ್ಟು ಕಲ್ಲಂಗಡಿ ಬೆಳೆ ಮೇಯಿಸಿದ್ದೇವೆ ಎಂಬುದು ಹೊನ್ನೂರಪ್ಪ ಅವರ ನೋವು.

ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 800 ಟನ್‌ನಷ್ಟು ಕಲ್ಲಂಗಡಿ ಬೆಳೆದಿದ್ದರೆ, 100 ಟನ್‌ನಷ್ಟು ಪೇರಲ, 1,300 ಟನ್‌ನಷ್ಟು ಬಾಳೆಹಣ್ಣು ಬೆಳೆಯಲಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೆಬಾಳದಲ್ಲಿ ನಾಗರಾಜಗೌಡ ಎಂಬ ರೈತ ಸಾವಯವ ಪದ್ಧತಿಯಲ್ಲಿ ಎರಡು ಎಕರೆ ಕಲ್ಲಂಗಡಿ ಬೆಳೆದಿದ್ದಾರೆ. ಸುಮಾರು 20-25 ಟನ್‌ನಷ್ಟು ಫ‌ಸಲು ಬರುತ್ತಿದ್ದು, 3 ರೂ.ಗೆ ಕೆ.ಜಿಯಂತೆ ಕೇಳುತ್ತಿದ್ದಾರೆ. ಕಳೆದ ವರ್ಷ 7ರಿಂದ 11ರೂ.ವರೆಗೆ ಮಾರಾಟ ಮಾಡಿದ್ದೆ ಎನ್ನುತ್ತಾರೆ ಅವರು.

Advertisement

ರಾಯಚೂರು ಜಿಲ್ಲೆಯಲ್ಲಿ ಅಂಜೂರ, ಕಲ್ಲಂಗಡಿ, ಪಪ್ಪಾಯಿ, ಕಿತ್ತಳೆ ಬೆಳೆಯಲಾಗಿದೆ. ಮಾರಾಟ ವ್ಯವಸ್ಥೆ ಇಲ್ಲದ್ದರಿಂದ ರೈತ ಉತ್ಪಾದಕ ಕಂಪೆನಿ ಮೂಲಕ ಸುಮಾರು ಆರೇಳು ವಾಹನಗಳಲ್ಲಿ ಹಣ್ಣುಗಳನ್ನು ಹಳ್ಳಿಗಳಿಗೆ ತೆರಳಿ ಮಾರಾಟ ಮಾಡಲಾಗುತ್ತಿದೆ. ಸಗಟು ರೂಪದಲ್ಲಿ ನೀಡಿದ್ದರೆ ಸಿಗುವ ಹಣಕ್ಕಿಂತ ಹೆಚ್ಚಿನ ಹಣ ಸಿಗುತ್ತಿದೆಯಾದರೂ, ರೈತರು ಹಳ್ಳಿಗಳಿಗೆ ಹೋಗಬೇಕಾಗಿದೆ. ಇನ್ನು ಅನೇಕರಿಗೆ ಮಾರಾಟಕ್ಕೆ ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಬೈಚವಳ್ಳಿ ರೈತ ಚಂದ್ರಪ್ಪ ಕೋಟಿ ಒಂದೂವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾರ್ಖಾನೆಯೊಂದಕ್ಕೆ ಕೆ.ಜಿ.ಗೆ 18 ರೂ.ನಂತೆ ಒಪ್ಪಂದಡಿ ಕಲ್ಲಂಗಡಿ ಕಳುಹಿಸುತ್ತಿದ್ದರು. ಕೊರೊನಾದಿಂದ ಕಾರ್ಖಾನೆ ಬಂದ್‌ ಆಗಿದ್ದು, ಇದೀಗ 15 ದಿನಕ್ಕೆ ಸುಮಾರು ಎರಡು ಟನ್‌ ನಷ್ಟು ಹಣ್ಣು ಬರುತ್ತಿದೆ. ಕಡಿಮೆ ದರಕ್ಕೆ ನೀಡಲು ಸಿದ್ಧವಿದ್ದರೂ ಖರೀದಿ ಮಾಡುವವರೇ ಇಲ್ಲ ಎಂಬುದು ರೈತನ ಅನಿಸಿಕೆ.

ಬೆಳಗಾವಿ, ಗದಗ, ವಿಜಯಪುರ, ಬಾಗಲಕೋಟೆ ಹೀಗೆ ವಿವಿಧ ಜಿಲ್ಲೆಗಳಲ್ಲಿ ರೈತರು ಬೆಳೆದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪ್ಪಾಯಿ, ಚಿಕ್ಕು, ಪೇರಲ ಹಣ್ಣುಗಳ ಸ್ಥಿತಿ ಇದೇ ರೀತಿಯದ್ದಾಗಿದೆ. ಸರಕಾರ ಹಣ್ಣು ಬೆಳೆಗಾರರ ಬಗ್ಗೆ ಕಾಳಜಿ ತೋರುತ್ತಿಲ್ಲ. ಇತರೆ ಬೆಳೆಗಳು ಹಾನಿಗೀಡಾದಾಗ ಪರಿಹಾರ ನೀಡಲಾಗುತ್ತಿದೆ. ಹಣ್ಣುಗಳಿಗೆ ಪರಿಹಾರ ಸಿಗುತ್ತಿಲ್ಲ. ವಿಮೆ ವ್ಯಾಪ್ತಿಗೂ ಹಣ್ಣುಗಳನ್ನು ತಂದಿಲ್ಲ. ಹಣ್ಣುಗಳನ್ನು ಬೆಳೆಯುವವರ ಗೋಳು ಕೇಳುವವರು ಯಾರು ಎಂಬುದು ಅನೇಕ ರೈತರ ಪ್ರಶ್ನೆಯಾಗಿದೆ.

ಗೊಂದಲಮಯ ಸ್ಥಿತಿ
ರೈತರ ಕೃಷಿ ಉತ್ಪನ್ನಗಳು, ಹಣ್ಣುಗಳ ವಿಚಾರದಲ್ಲಿ ಸರಕಾರ ಗೊಂದಲಮಯ ಸ್ಥಿತಿ ಸೃಷ್ಟಿಸುತ್ತಿದೆ. ಖರೀದಿ, ಪರಿಹಾರ ಎಲ್ಲವೂ ಗೊಂದಲದ ಗೂಡಾಗಿದೆ. ಸರಕಾರಿ ನೌಕರರಿಗೆ ವೇತನ ನೀಡುವುದಕ್ಕೆ ಹಣವಿಲ್ಲವೆಂದು ಹೇಳುವ ಸರಕಾರ ರೈತರಿಗೆ ಪರಿಹಾರ ಹೇಗೆ ನೀಡಲಿದೆ. ಪರಿಹಾರ ನೀಡುತ್ತೇವೆ ಎಂಬುದು ರೈತರನ್ನು ನಂಬಿಸುವ ಯತ್ನವೇ?
.ಭಾಸ್ಕರರಾವ್‌ ಮೂಡಬೂಳ,
ರೈತ ಮುಖಂಡ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next