Advertisement
ಸುಪಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆಯಾದ ಕೇಶ್ವಾಪುರ ಕುಸುಗಲ್ಲ ರಸ್ತೆ ಅರಿಹಂತನಗರದ ಅಖಿಲ ಮಹಾಜನಶೇಠ (26) ಈತನ ತಂದೆ, ಕಟ್ಟಡ ಸಲಕರಣೆಗಳ ವ್ಯಾಪಾರಿ ಭರತ ಮಹಾಜನಶೇಠ, ಮಧ್ಯವರ್ತಿಗಳಾದ ವೀರಾಪುರ ಓಣಿಯ ಮಹಾದೇವ ನಾಲವಾಡ, ಹಳೇಹುಬ್ಬಳ್ಳಿ ನೂರಾನಿ ಪ್ಲಾಟ್ ನ ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ಅವರನ್ನು ಬಂಧಿಸಿದ್ದಾರೆ.
Related Articles
Advertisement
ಮಗನನ್ನು ಮುಗಿಸಲು ಭರತ ಅವರು ಸಂಚು ರೂಪಿಸಿ ಮಹಾದೇವ ಮುಖಾಂತರ ಸಲೀಂ ನನ್ನು ಪರಿಚಯಿಸಿಕೊಂಡು 10ಲಕ್ಷ ರೂ. ಸುಪಾರಿ ಕೊಟ್ಟಿದ್ದಾರೆ. ಡಿ. 1ರಂದು ಅರಿಹಂತ ನಗರದ ಮನೆಯಿಂದಲೇ ಎಲ್ಲರೂ ಸೇರಿ ಅಖಿಲನನ್ನು ಅವನ ಕಾರಿನಲ್ಲಿ ಅಪಹರಿಸಿಕೊಂಡು ಕಲಘಟಗಿಯಿಂದ 2-3ಕಿ.ಮೀ ದೂರ ಕರೆದೊಯ್ದು ಶೆಡ್ ವೊಂದರಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಪಾರಿ ಕೊಟ್ಟು ಮಗನ ಕೊಲೆ ಮಾಡಿಸಿದ್ದ ಭರತ ಅವರು ಮನೆಯಲ್ಲಿ ಅಖಿಲ ಸ್ನೇಹಿತರೊಂದಿಗೆ ಉಳಿದುಕೊಂಡಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ. ಘಟನೆಯಾದ ಮೂರು ದಿನಗಳ ಬಳಿಕ ಡಿ. 3ರಂದು ಸಂಜೆ ಅಖಿಲ ತನಗೆ ವಿಡಿಯೋ ಕರೆ ಮಾಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಈ ವೇಳೆ ಆತ ಎತ್ತರವಾದ ಜಾಗದಿಂದ ಜಿಗಿಯುವಂತೆ ಕಂಡುಬಂದಿತ್ತೆಂದು ಆತ್ಮಹತ್ಯೆಯ ಬಣ್ಣ ಕಟ್ಟಲು ಯತ್ನಿಸಿದ್ದಾರೆ. ಮಗ ಕಾಣೆಯಾಗಿದ್ದಾನೆ ಎಂದು ಸಹೋದರನ ಮೂಲಕ ಕೇಶ್ವಾಪುರ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ. ಅಲ್ಲದೆ ಮಗನನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದು ನಾಟಕವಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಪತ್ತೆಯಾಗದ ಅಖಿಲ ಶವ:
ಅಖಿಲ ನಾಪತ್ತೆಯಾದ ಪ್ರಕರಣ ದಾಖಲಾದ ಬಳಿಕ ಪೊಲೀಸರು ಆತನ ತಂದೆಯ ಮೇಲೆ ಅನುಮಾನಗೊಂಡು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಅವರು ನೀಡಿದ ಮಾಹಿತಿ ಮೇರೆಗೆ ಮೂವರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಅವರ ಹೇಳಿಕೆ ಆಧರಿಸಿ ಪೊಲೀಸರ ಐದು ತಂಡಗಳು ಅಖಿಲನ ಶವಕ್ಕಾಗಿ ಕಲಘಟಗಿ, ದೇವರ ಗುಡಿಹಾಳದ ತೋಟದ ಮನೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡಸಿದ್ದಾರೆ. ಆದರೆ ಇದುವರೆಗೂ ಅಖಿಲನ ಶವವಾಗಲಿ. ಹಂತಕರಾಗಲಿ ಪೊಲೀಸರಿಗೆ ಸಿಕ್ಕಿಲ್ಲ.
ಒಂದು ಮೂಲದ ಪ್ರಕಾರ ಹಂತಕರು ಕೊಲೆಯಾದ ಸ್ಥಳದಿಂದ ಶವವನ್ನು ಬೇರೆಡೆ ಸ್ಥಳಾಂತರಿಸಿರಬಹುದು ಇಲ್ಲವೇ ನದಿಯಲ್ಲಿ ಬಿಸಾಕಿರಬಹುದು ಎಂದು ಶಂಕೆ ವ್ಯಕ್ತಪಡಿಸಿವೆ.