Advertisement

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

12:45 PM Jul 20, 2024 | Team Udayavani |

ಹುಬ್ಬಳ್ಳಿ: ರಾಜ್ಯದ ಹಲವೆಡೆ ಅತಿವೃಷ್ಟಿಯಿಂದಾಗಿ ಹಲವರು ಸಾವನ್ನಪ್ಪಿದ್ದಾರೆ. ಅನೇಕರು ಮನೆ ಕಳೆದು ಕೊಂಡಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ತೆರಳಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಿತ್ತು. ‌ಆದರೆ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅನಾಹುತದಿಂದ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡ್ಡ ಕುಸಿದು ಏಳಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಸರ್ಕಾರದ ಸಿಎಂ ಹಾಗೂ ಯಾವ ಸಚಿವರು ಅಲ್ಲಿಗೆ ಭೇಟಿ ನೀಡಿಲ್ಲ. ನಾನು ಮೂರು ದಿನಗಳ ಹಿಂದೆಯೇ ಅಲ್ಲಿಗೆ ಭೇಟಿ ಕೊಡಲು ಯೋಜಿಸಿದ್ದೆ. ಆದರೆ ದೆಹಲಿಯಲ್ಲಿ ಇಲಾಖೆಯ ನಿಗದಿತ ಕಾರ್ಯಕ್ರಮದ ನಿಮಿತ್ತ ಬರಲಾಗಲಿಲ್ಲ. ಇಂದು ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಮಾಡುತ್ತಿದ್ದೇನೆ. ರವಿವಾರ ಸಕಲೇಶಪುರಕ್ಕೆ ಭೇಟಿ ಕೊಡುತ್ತಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸುವೆ ಎಂದರು.

ಮಳೆಯಿಂದಾಗಿ ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಮನೆಗಳಿಗೆ ನೀರು ನುಗ್ಗಿದೆ. ಆದರೆ ಕಂದಾಯ ಸಚಿವರು ಜಿಲ್ಲಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಡುತ್ತಿದ್ದಾರೆ. ಏನಾದರೂ ಕೇಳಿದರೆ ಪಿಡಿ ಖಾತೆಯಲ್ಲಿ ಹಣವಿದೆ ಎನ್ನುತ್ತಿದ್ದಾರೆ. ಹಣ ಇಟ್ಟರೆ ಸಾಲದು. ಸ್ಥಳಕ್ಕೆ ತೆರಳಿ ಪರಿಶೀಲಿಸಿ ಜನರಿಗೆ ಧೈರ್ಯ ತುಂಬುವ,‌ ಸಾಂತ್ವನ ಹೇಳುವ ಕಾರ್ಯ ಮಾಡಬೇಕಿತ್ತು. ಇವರ ಈ ನಡೆಯಿಂದ ಸರ್ಕಾರಕ್ಕೆ ಜನರ ಮೇಲಿರುವ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಕುಟುಕಿದರು.

ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಏನೇ ಇರಲಿ. ಜನ ಸಂಕಷ್ಟ ಅನುಭವಿಸುತ್ತಿರು ಈ ಸಂದರ್ಭದಲ್ಲೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸದಿರುವುದು ದುರ್ದೈವದ ಸಂಗತಿ. ಈ ಸರ್ಕಾರ ಆಡಳಿತ ಹೇಗೆ ನಡೆಸಬೇಕೆಂಬುದು ಮರೆತು ಹೋಗಿದೆ ಎಂದರು.

ಮುಡಾದಲ್ಲಿ ಸಿಎಂ ನೇರ ಕೈವಾಡ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ನೇರ ಕೈವಾಡವಿದೆ. 1992ರಲ್ಲಿ ಆರಂಭಿಕವಾಗಿ ನೋಟಿಫಿಕೇಶನ್ ಆಗಿದೆ. 1993ರಲ್ಲಿ ಮೃತರ ಮಗನ ಹೆಸರಲ್ಲಿ ಖಾತೆ ಆಗಿದೆ. 1998ರಲ್ಲಿ ಮೃತರ ಹೆಸರಲ್ಲಿ ಡಿನೋಟಿಫಿಕೇಶನ್ ಆಗಿದೆ. ಇದನ್ನು ಮಾಡಿಸಿದವರು ಯಾರು?. ಈಗ ಸಿದ್ದರಾಮಯ್ಯ ವಿಪಕ್ಷಗಳಿಗೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ. 2012ರಲ್ಲಿ ಬಿಜೆಪಿ ಆಡಳಿತದಲ್ಲಿನ 21 ಹಗರಣಗಳ ಬಗ್ಗೆ ಮಾತನಾಡುವವರು ಐದು ವರ್ಷಗಳ ಹಿಂದೆ ತಮ್ಮ ಹಾಗೂ‌ ಈಗಿನ‌ ಒಂದು ವರ್ಷದ ಆಡಳಿತದಲ್ಲಿ ಈ ಬಗ್ಗೆ ಏಕೆ ಸುಮ್ಮನಿದ್ದರು. ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿಪಕ್ಷಗಳ ಮೇಲೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಹರಿಹಾಯ್ದರು.

Advertisement

ಮುಡಾದಲ್ಲಿ ಅಕ್ರಮ ಆಗಲು ಕಾರಣವೇನು? ಅಧಿಕಾರಿಗಳು ಅಕ್ರಮ ಮಾಡಿದರೂ ಅದಕ್ಕೆ ಸರ್ಕಾರವೇ ಹೊಣೆ. ಇವರ ದೌರ್ಬಲ್ಯಗಳಿಂದ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ನಿಗಮದ ಅಧಿಕಾರಿ ಬರೆದ ಡೆತ್‌ ನೋಟ್‌ ನಲ್ಲಿ ಮಂತ್ರಿಗಳು ಮೌಖಿಕವಾಗಿ ಆದೇಶ ಮಾಡಿದ್ದರೆಂದು ಹೇಳಿದ್ದಾರೆ. ಇದರ ಬಗ್ಗೆ ಮಂತ್ರಿಗಳಿಗೆ ಗೊತ್ತಿರಲಿಲ್ಲವೇ? ಸಿಎಂ ಈ ರೀತಿ ಉಡಾಫೆ ಉತ್ತರ ಕೊಡುವುದು ಸರಿಯಲ್ಲ. ವಿಧಾನಸಭೆ ಕಲಾಪದಲ್ಲಿ ಯಾರೋ ಬರೆದು ಕೊಟ್ಟದ್ದನ್ನು ಓದಿದ್ದಾರೆ.‌ ನಮ್ಮ ರಾಜ್ಯದಲ್ಲಿ ಈ ರೀತಿಯ ಆಡಳಿತ ನಿರೀಕ್ಷಿಸಿರಲಿಲ್ಲ ಎಂದರು.

ಇಡಿಯವರು ಸಿಎಂ ಹೆಸರು ಹೇಳುವಂತೆ ಬಂಧಿತರ‌ ಮೇಲೆ‌ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಅವರಿಗೆ ಎಲ್ಲಿಂದ ಬಂತು? ಇ.ಡಿಯವರ ತನಿಖೆ ವಿಚಾರಗಳು ಸಿಎಂ ಹೇಗೆ ಗೊತ್ತಾಯಿತು? ಅವರು ಏನೂ ತಪ್ಪು ಮಾಡದಿದ್ದರೆ, ಪ್ರಕರಣದಲ್ಲಿ ಭಾಗಿಯಾಗಿರದಿದ್ದರೆ ಅವರು ಏಕೆ ಊಹೆ ಮಾಡಿಕೊಂಡು ನಾಲ್ಕು‌ ಸಚಿವರ ಕೈಯಿಂದ ಉತ್ತರ ಕೊಡಿಸಿದ್ದು? ಅವರಿಗೆ ಇಂತಹ ಪರಿಸ್ಥಿತಿ ಏಕೆ ಬಂತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next