Advertisement

ಹುಬ್ಬಳ್ಳಿ ಈದ್ಗಾ ಮೈದಾನ: ಧಾರ್ಮಿಕ ಕಾರ್ಯಕ್ರಮಗಳಿಗೆ ಷರತ್ತು ವಿಧಿಸಿ ಅನುಮತಿ

09:33 PM Nov 09, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ವಿವಾದಿತ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ಅರ್ಜಿ ಸಲ್ಲಿಸುವ ಎಲ್ಲಾ ಮಹಾಪುರುಷರ ಜಯಂತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಷರತ್ತು ವಿಧಿಸಿ ಅನುಮತಿ ನೀಡುವ ಬಗ್ಗೆ ಹು-ಧಾ ಮಹಾನಗರ ಪಾಲಿಕೆ ನಿರ್ಧರಿಸಿದೆ.

Advertisement

ಪಾಲಿಕೆ ಮಹಾಪೌರರ ಕಚೇರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಹಾಪೌರ ಈರೇಶ ಅಂಚಟಗೇರಿ ಅವರು, ಟಿಪ್ಪು ಸುಲ್ತಾನ್ ಜಯಂತಿ ಸೇರಿದಂತೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇದು ಸಾರ್ವಜನಿಕ ಆಸ್ತಿಯಾಗಿದ್ದು, ಈಗಾಗಲೇ ಗಣೇಶ ಮೂರ್ತಿ ಪ್ರತಿಷ್ಠಾನಪನೆಗೆ ಅವಕಾಶ ನೀಡಲಾಗಿತ್ತು. ಎಲ್ಲಾ ಸಮಾಜ ಹಾಗೂ ಧರ್ಮಗಳಿಗೆ ಮುಕ್ತ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೇ ಅರ್ಜಿ ಸಲ್ಲಿಸಿದರೂ ಪರಿಶೀಲಿಸಿ ಷರತ್ತು ವಿಽಸಿ ಅವಕಾಶ ಕಲ್ಪಿಸಲಾಗುತ್ತದೆ. ನ.10 ರಂದು ನಡೆಯುವ ಟಿಪ್ಪು ಜಯಂತಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ವಿಪಕ್ಷಗಳ ವಿರೋಧ
ವಿಪಕ್ಷ ಹಾಗೂ ಕಾಂಗ್ರೆಸ್ ಸದಸ್ಯ ದೊರಾಜ ಮಣಿಕುಂಟ್ಲಾ ಹಾಗೂ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಮಹಾಪೌರ ಘೋಷಣೆಗೆ ಸುದ್ದಿಗೋಷ್ಠಿಯಲ್ಲೇ ವಿರೋಧ ವ್ಯಕ್ತಪಡಿಸಿದರು. ಈದ್ಗಾ ಮೈದಾನ ಪವಿತ್ರ ಸ್ಥಳವಾಗಿದ್ದು, ಜಯಂತಿ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ. ಈ ಮೈದಾನದ ವಿವಾದಿಂದ ಮಹಾನಗರದ ಜನತೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಹಿಂದೆ ಆದಂತಹ ಅನಾಹುತಗಳಿಗೆ ಅವಕಾಶ ನೀಡುವುದು ಬೇಡ. ಹೀಗಾಗಿ ಯಾವುದೇ ಆಚರಣೆಗೂ ಅವಕಾಶ ನೀಡಬಾರದು ಎಂದು ಮಹಾಪೌರರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next