Advertisement

ಹುಬ್ಬಳ್ಳಿ:ನಿಮಗೂ ಬಿತ್ತಾ ಲಕ್ಕಿ ಡ್ರಾ ಟೋಪಿ? ಹೆಚ್ಚುತ್ತಿದೆ ಆನ್‌ಲೈನ್‌ ವಂಚನೆ

04:35 PM Mar 03, 2023 | Team Udayavani |

ಹುಬ್ಬಳ್ಳಿ: ವಾರ್ಷಿಕೋತ್ಸವ ಅಂಗವಾಗಿ ನಿಮಗೆ ಲಕ್ಕಿ ಡ್ರಾ ಬಂದಿದೆ. ಅದನ್ನು ಪಡೆಯಲು “ಹೀಗೆ ಮಾಡಿ’ ಎಂಬ ಸಂದೇಶ ಇಲ್ಲವೇ ಲೆಟರ್‌ ಬಂದಿದಿಯೇ? ಹಾಗಾದರೆ ಎಚ್ಚರಿಕೆಯಿಂದಿರಿ. ಸ್ವಲ್ಪ ಯಾಮಾರಿದರೂ ನಿಮ್ಮ “ಖಾತೆ ಖಾಲಿ’ ಆಗುತ್ತದೆ!

Advertisement

ಹೌದು, ಶುಭ ಸಂದೇಶಗಳ ನೆಪದಲ್ಲಿ “ವಿಶೇಷ ಬಹುಮಾನ’ಗಳ ಸಂದೇಶವುಳ್ಳ ವಿವಿಧ ಕಂಪನಿಯ ಹೆಸರಿನ ಪತ್ರಗಳು ಇತ್ತೀಚಿನ ದಿನಗಳಲ್ಲಿ ಮನೆ ಮನೆಗೆ ರಿಜಿಸ್ಟರ್‌ ಪೋಸ್ಟ್‌ನಲ್ಲಿ ಬರುತ್ತಿವೆ. ಇದಕ್ಕೆ ಮನಸೋತ ಎಷ್ಟೋ ಜನರು ಸಂಬಂಧಪಟ್ಟ ಸಂಖ್ಯೆಗೆ ಸಂಪರ್ಕಿಸಿ ಹಣ ಕಳೆದುಕೊಂಡು ಕೈಕೈ ಹಿಸುಕಿಕೊಳ್ಳುವಂತಾಗಿದೆ.ಇಂತಹ ಅನಾಮಧೇಯ ಪತ್ರ ಹಾಗೂ ಲಕ್ಕಿ ಡ್ರಾ ಕೂಪನ್‌ಗಳ ಬಗ್ಗೆ ಜಾಗೃತರಾಗಿರಿ ಎನ್ನುತ್ತಾರೆ ಸೈಬರ್‌ ಕ್ರೈಂ ಪೊಲೀಸ್‌ ಅಧಿಕಾರಿಗಳು.

ಹೇಗೆ ಸಂಪರ್ಕಿಸುತ್ತಾರೆ?: ನೀವು ಪ್ರತಿಷ್ಠಿತ ಕಂಪನಿಯ ಆನ್‌ಲೈನ್‌ ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸಿದ್ದರೆ ಅದರ ಜಾಡು ಹಿಡಿದುಕೊಂಡು ವಂಚಕರ ತಂಡವೊಂದು ನಿಮ್ಮ ವಿಳಾಸಕ್ಕೆ ರಿಜಿಸ್ಟರ್‌ ಪೋಸ್‌ rನಲ್ಲಿ ಪ್ರತಿಷ್ಠಿತ ಕಂಪನಿಯ ಆನ್‌ಲೈನ್‌ ಶಾಪಿಂಗ್‌ನ 6ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿರುವ ನೋಂದಾಯಿತ ಗ್ರಾಹಕರಿಗೆ ರ್‍ಯಾಂಡಮ್‌ ಲಕ್ಕಿ ಡ್ರಾ ಸ್ಪರ್ಧೆಯ ಬಹುಮಾನ ಗೆಲ್ಲಿ ಎಂಬ ಸ್ಕ್ರ್ಯಾಚ್‌ ಕಾರ್ಡ್ ನ ಲೆಟರ್‌ ಕಳುಹಿಸುತ್ತದೆ. ಅದರಲ್ಲಿ ಆ ಕಂಪನಿಯ
ಹೆಸರುಳ್ಳ ಸ್ಕ್ರ್ಯಾಚ್‌ ಆ್ಯಂಡ್‌ ವಿನ್‌-2023 ಎಂಬ ಕೂಪನ್‌ ಸಹ ಇಟ್ಟಿರುತ್ತಾರೆ.

ಅದನ್ನು ನಂಬಿ ನೀವು ಕೂಪನ್‌ ಕಾರ್ಡ್‌ ಅನ್ನು ಸ್ಕ್ರ್ಯಾಚ್‌ ಮಾಡಿದಾಗ ಬಹುಮಾನಿತ ವಸ್ತುವಿನ ಎಸ್‌ಎಸ್‌ಎಂ ಕೋಡ್‌ನೊಂದಿಗೆ ಅತ್ಯಾರ್ಷಕ ಬಹುಮಾನವು ನಿಮ್ಮದಾಗಿರುತ್ತದೆ. ಆಗ ನೀವು ಇನ್ನಿಲ್ಲದ ಭಾಗ್ಯ ನಮ್ಮದಾಯಿತು ಎಂದು ಇನ್ನಷ್ಟು ಖುಷಿಪಟ್ಟು ಪತ್ರದಲ್ಲಿ ಸೂಚಿಸಿದ ಸಹಾಯವಾಣಿ ಸಂಖ್ಯೆಗೆ ತಕ್ಷಣ ಸಂಪರ್ಕಿಸುತ್ತೀರಿ. ಆಗ ನಯವಂಚಕರಿಗೆ ಇಷ್ಟೇ ಸಾಕು ನಿಮ್ಮನ್ನು ಮೋಸಗೊಳಿಸಲು. ನಿಮ್ಮಿಂದ ಹಣ ಕಿತ್ತುಕೊಳ್ಳಲು.

ಅನಾಮಧೇಯರು ನಿಮಗೆ ಕಳುಹಿಸಿದ ಲೆಟರ್‌ ನೋಡಿದ ತಕ್ಷಣ ನಿಮಗೆ ಅದು ವಂಚನೆ ಮಾಡುವ ತಂಡದಿಂದ ಬಂದಿದ್ದು ಎಂಬ ಸಂಶಯವೇ ಬರುವುದಿಲ್ಲ. ಆ ರೀತಿ ಅವರು ಸಹ ಕಂಪನಿಯವರು ಕಳುಹಿಸುವ ಲೆಟರ್‌ ಪ್ರಕಾರವೇ ಹಲವು ಕರಾರು ಮತ್ತು ಷರತ್ತುಗಳುಳ್ಳ ಪತ್ರ ಕಳುಹಿಸಿರುತ್ತಾರೆ.

Advertisement

ಸ್ಕ್ರ್ಯಾಚ್‌ ಕಾರ್ಡ್‌ನಲ್ಲಿ ಅತ್ಯಾಕರ್ಷಕ ಬಹುಮಾನಗಳ ಆಮಿಷವೊಡ್ಡಿರುತ್ತಾರೆ. ಬಹುಮಾನ ಪಡೆಯಲು ಇಂತಹುದೆ ಸಂಖ್ಯೆಗೆ ಕರೆ ಮಾಡಿ ಹಾಗೂ ಸೂಚಿಸಿದ ವಾಟ್ಸ್‌ಆ್ಯಪ್‌ ಸಂಖ್ಯೆಗೆ ನಿಮ್ಮ ದಾಖಲೆಗಳನ್ನು ಕಳುಹಿಸಿ ಎಂದು ನಮೂದಿಸಿರುತ್ತಾರೆ.

ದಾಖಲೆ ಏನೇನು ಕೇಳುತ್ತಾರೆ?: ಕಂಪನಿಯ ಹೆಸರಿನಲ್ಲಿ ಅನಾಮಧೇಯರು ಕಳುಹಿಸಿದ ಪತ್ರದಲ್ಲಿ ಸೂಚಿಸಿದ ಮೊಬೈಲ್‌ ಸಂಖ್ಯೆಗೆ ನೀವು ಕರೆ ಮಾಡಿದರೆ, ಮೊದಲು ಅವರು ಹಲೋ ಮೀಶೋ ಎಂದೇ ಹಿಂದಿಯಲ್ಲಿ ಸಂಭೋಧನೆ ಮಾಡುತ್ತಾರೆ. ನಂತರ ನೀವು ಯಾವ ಭಾಷೆಯಲ್ಲಿ ಮಾತನಾಡುತ್ತಿರೋ ಅದೇ ಭಾಷೆಯಲ್ಲಿ ಮಾತನಾಡುತ್ತ, ಹೌದು ನಿಮಗೆ ನಮ್ಮ ಕಂಪನಿಯಿಂದ ಇಂತಹುದೆ ಬಹುಮಾನ ಪ್ರಾಪ್ತವಾಗಿದೆ.

ಅದನ್ನು ಪಡೆಯಲು ನೀವು ಮೊದಲು ನಿಮ್ಮ ಆಧಾರ ಕಾರ್ಡ್‌ ಹಾಗೂ ಮತದಾರರ ಗುರುತಿನ ಚೀಟಿಯ ಫೋಟೋ ಕಳುಹಿಸಿ. ಜತೆಗೆ ಭದ್ರತೆಗಾಗಿ ಶೇ.1ರಷ್ಟು ಹಣ ಪಾವತಿಸಿ. ನಂತರ ಬಹುಮಾನ ಪಡೆದ ಮೇಲೆ ಶೇ.3ರಷ್ಟು ತೆರಿಗೆ ಕಟ್ಟಬೇಕು. ಎಲ್ಲ ತೆರಿಗೆಯನ್ನು ಮುಂಗಡವಾಗಿ ಸಂಗ್ರಹಿಸಲಾಗುತ್ತದೆ. ಅದನ್ನು ಬಹುಮಾನಿತ ಹಣಕ್ಕೆ ಹೊಂದಾಣಿಕೆ ಮಾಡಲ್ಲ. 24 ತಾಸಿನೊಳಗೆ ಈ ಪ್ರಕ್ರಿಯೆ ಮಾಡದಿದ್ದರೆ ನಿಮಗೆ ದೊರೆತ ಬಹುಮಾನ ರದ್ದುಪಡಿಸಲಾಗುವುದು ಎಂದು ಹೇಳಿ ನಿಮ್ಮನ್ನು ನಂಬುಗೆ ಬರುವಂತೆ ಮಾಡುತ್ತಾರೆ.

ವಂಚನೆ ಹೇಗೆ?
ನೀವು ಅವರ ಮಾತಿಗೆ ಮರುಳಾಗಿ ಹಾಗೂ ಬಹುಮಾನದ ಆಸೆಗೆ ಬಿದ್ದು ಅವರು ಹೇಳಿದಂತೆ ಮಾಡಿದರೆ ಮುಗಿಯಿತು. ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣ ಹೋಯಿತೆಂದೆ ಅರ್ಥ. ಅವರು ಹೇಳಿದ ಹಾಗೆ ನಿಮ್ಮ ಆಧಾರ ಕಾರ್ಡ್‌ ಮತ್ತು ಮತದಾರರ ಗುರುತಿನ ಚೀಟಿ ಕಳುಹಿಸಿದರೆ ಸಾಕು. ಅದನ್ನು ದುರುಪಯೋಗ ಪಡಿಸಿಕೊಂಡು ಅದರ ಆಧಾರ ಮೇಲೆ ನಿಮ್ಮ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಾರೆ. ಅದಕ್ಕೆ ತಮ್ಮದೆಯಾದ ಮೊಬೈಲ್‌ ಸಂಖ್ಯೆ ಕೊಟ್ಟು ಜನರನ್ನು ಆ ಮೂಲಕ ವಂಚಿಸುತ್ತಾರೆ. ಅವರು ನಿಮ್ಮ ಹೆಸರಿನಲ್ಲಿ ಬೇರೆಯವರಿಗೆ ಮೋಸ ಎಸಗುತ್ತಿರುವ ಬಗ್ಗೆ ನಿಮಗೆ ತಿಳಿಯುವುದೇ ಇಲ್ಲ. ಆ ಖಾತೆಯ ನಿರ್ವಹಣೆಯನ್ನು ನಿಮಗೆ ಗೊತ್ತಾಗದಂತೆ ಅವರು ಮಾಡುತ್ತಾರೆ. ಹೀಗಾಗಿ ಇಂತಹ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು. ಯಾವುದೇ ಆಸೆ-ಆಮಿಷ ಹಾಗೂ ಬಹುಮಾನಗಳಿಗೆ ಮರುಳಾಗಬಾರದು ಎನ್ನುತ್ತಾರೆ ಸೈಬರ್‌ ಕ್ರೈಂ ಪೊಲೀಸರು.

ಪೊಲೀಸರು ನೀಡುವ ಎಚ್ಚರಿಕೆ ಏನು?
ಬಹುಮಾನಗಳು ಯಾವುದೇ ಕಾರಣಕ್ಕೂ ಸುಮ್ಮನೆ ಬರಲ್ಲ. ನೌಕರಿ ಸಿಕ್ಕಿದೆ, ವಾರ್ಷಿಕೋತ್ಸವದ ಹೆಸರಲ್ಲಿ ಬಹುಮಾನ ಕೊಡಲಾಗುವುದು, ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗುತ್ತದೆ. ಬಹುಮಾನ ಬಂದಿದೆ ಎಂಬುದೆಲ್ಲ ನೂರಕ್ಕೆ ನೂರು ಮೋಸವಾಗಿದೆ. ಯಾವುದೇ ಕಾರಣಕ್ಕೂ ಇಂತಹ ಆಮಿಷಗಳಿಗೆ ಯಾರೂ ಮರುಳಾಗಬಾರದು. ಇಂತಹ ಸಂದೇಶಗಳು ನಿಮ್ಮ ಮೊಬೈಲ್‌ಗೆ ಬಂದರೆ ತಕ್ಷಣ ಅದನ್ನು ಡಿಲಿಟ್‌ ಮಾಡಬೇಕು. ಇಂತಹ ಆಮಿಷಗಳ ಬಗ್ಗೆ ನಿಮ್ಮ ವಿಳಾಸಕ್ಕೆ
ಲೆಟರ್‌ಗಳು ಬಂದರೆ ಸಮೀಪದ ಪೊಲೀಸ್‌ ಠಾಣೆ ಗಮನಕ್ಕೆ ತಂದರೆ ಅದರ ಬಗ್ಗೆ ಅವರು ಗಮನಹರಿಸುತ್ತಾರೆ.
ರಮನ್‌ ಗುಪ್ತಾ,
ಹು-ಧಾ ಪೊಲೀಸ್‌ ಆಯುಕ್ತ

ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next