Advertisement
ಹುಬ್ಬಳ್ಳಿ-ಧಾರವಾಡ ನಡುವೆ ತ್ವರಿತ ಸಾರಿಗೆ ನೀಡಬೇಕು ಎನ್ನುವ ಹಿನ್ನೆಲೆಯಲ್ಲಿ ಹೊಸೂರಿನಿಂದ ಧಾರವಾಡ ಜ್ಯುಬ್ಲಿ ವೃತ್ತದವರೆಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ. ಚಿಗರಿ ಬಸ್ ಹೊರತುಪಡಿಸಿ ತುರ್ತು ಸೇವೆಯ ವಾಹನಗಳಿಗೆ ಮಾತ್ರ ಕಾರಿಡಾರ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಕುರಿತು ಅಧಿಕೃತವಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಒಮ್ಮೆ ನಿಯಮ ಉಲ್ಲಂಘಿಸಿದರೆ 500 ದಂಡ ಕಟ್ಟಬೇಕಾಗುತ್ತದೆ. ಇನ್ನೂ ಕಾರಿಡಾರ್‌ನಲ್ಲಿ ಏನಾದರೂ ಅಪಘಾತಗಳಾದರೆ ಅದಕ್ಕೆ ಖಾಸಗಿ ವಾಹನ ಸವಾರರೇ ನೇರ ಹೊಣೆಯಾಗಿದೆ. ನಿಯಮ ಉಲ್ಲಂಘನೆ ತಡೆ ಹಾಗೂ ಪತ್ತೆಗಾಗಿ ಅತ್ಯಾಧುನಿಕ ಸ್ವಯಂಚಾಲಿತವಾಗಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ ವಿಶೇಷ ಕ್ಯಾಮರಾಗಳನ್ನು ಅಳವಡಿಸಿ ಕಾರಿಡಾರ್ ಪ್ರವೇಶಿಸಿದ ವಾಹನಗಳ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.
Related Articles
Advertisement
ಕಾರಿಡಾರ್ ಉದ್ದಕ್ಕೂ ವಿವಿಧ ಮಾದರಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 47 ಪಿಟಿಝೆಡ್ ಕ್ಯಾಮರಾ, 128 ಡೋಮ್ ಕ್ಯಾಮರಾ, ಅನಗತ್ಯ ವಾಹನಗಳ ಪತ್ತೆಗಾಗಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ 20 ಎಎನ್‌ಪಿಆರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವು ಸುಮಾರು ಒಂದು ಕಿಮೀ ದೂರದ ವಾಹನಗಳ ನೋಂದಣಿ ಸಂಖ್ಯೆ-ವಾಹನ ಸವಾರರ ಭಾವಚಿತ್ರ ಸೆರೆಹಿಡಿಯುತ್ತವೆ. ಇದು ಕ್ಲಿಕ್ಕಿಸಿದ ಫೋಟೋ ನೇರವಾಗಿ ಬಿಆರ್‌ಟಿಎಸ್ ಕಂಟ್ರೋಲ್ ಕೊಠಡಿಗೆ ರವಾನೆಯಾಗುತ್ತದೆ. ಇಲ್ಲಿರುವ ಸಾಫ್ಟ್‌ವೇರ್ ನೋಂದಣಿ ಸಂಖ್ಯೆಯನ್ನು ಪ್ರತ್ಯೇಕಿಸುತ್ತದೆ. ಈ ಮಾಹಿತಿಗಳನ್ನು ಉಪನಗರ ಠಾಣೆ ಮೇಲಿರುವ ಪೊಲೀಸ್ ಇಲಾಖೆಯ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಈ ಫೋಟೋಗಳ ಆಧಾರದ ಮೇಲೆ ವಾಹನ ಮಾಲೀಕರ ವಿಳಾಸಕ್ಕೆ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ.
ಕಾನೂನು ಪಾಲಕರಿಂದಲೇ ನಿಯಮ ಬ್ರೇಕ್
ಅಧಿಸೂಚನೆ ಪ್ರಕಾರ ಜಿಲ್ಲಾಧಿಕಾರಿ, ಮಹಾನಗರ ಪೊಲೀಸ್ ಆಯುಕ್ತರು ಮಾತ್ರ ಈ ಕಾರಿಡಾರ್‌ನಲ್ಲಿ ಸಂಚರಿಸಬಹುದು. ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿ ಅನುಮತಿ ನೀಡುವರು. ವಿಪರ್ಯಾಸವೆಂದರೆ ಖಾಸಗಿ ವಾಹನಗಳಿಗಿಂತ ಹೆಚ್ಚಿನ ಸರಕಾರಿ ವಾಹನಗಳು, ಅದರಲ್ಲೂ ಪೊಲೀಸರ ವಾಹನಗಳು ಹೆಚ್ಚಿಗೆ ಓಡಾಡುತ್ತವೆ. ಕಾನೂನು ಪಾಲಕರೇ ಇಲ್ಲಿ ನಿಯಮ ಉಲ್ಲಂಘಿಸುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವವರಾರು ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಸ್ವಯಂ ಚಾಲಿತ ಬೂಂ ಬ್ಯಾರಿಕೇಡ್ ಇದ್ದರೂ ತಾಂತ್ರಿಕ ದೋಷವಿದ್ದಾಗ ಮಾನವ ಸಹಿತ ನಿರ್ವಹಣೆಗೆ ಅವಕಾಶ ಕಲ್ಪಿಸಿದ್ದರಿಂದ ಪಾಸ್ ಆಪರೇಟರ್ ಮೂಲಕ ಬ್ಯಾರಿಕೇಡ್ ತೆಗಿಸಿಕೊಂಡು ಸರಕಾರಿ ವಾಹನಗಳು ಓಡಾಡುತ್ತಿವೆ. ಅಧಿಸೂಚನೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾದರೆ ಮೊದಲು ಸರಕಾರಿ ವಾಹನಗಳಿಗೂ ಕಡಿವಾಣ ಹೇರಬೇಕು, ಅವರಿಗೂ ದಂಡ ವಿಧಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.
ಮಾಸಿಕ ಸರಾಸರಿ 2,000 ವಾಹನ ಉಲ್ಲಂಘನೆ
ಬೂಂ ಬ್ಯಾರಿಕೇಡ್, ಭದ್ರತಾ ಸಿಬ್ಬಂದಿ, ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದ್ದರೂ ಭಂಡ ಧೈರ್ಯ ಎಂಬಂತೆ ಕಾರಿಡಾರ್‌ನಲ್ಲಿ ಅಡ್ಡಾದಿಡ್ಡಿ ಓಡಾಟವಿದೆ. ಆರಂಭಕ್ಕೆ ಹೋಲಿಸಿದರೆ ಇದೀಗ ಒಂದಿಷ್ಟು ಕಡಿಮೆಯಾಗಿದ್ದರೂ ತಿಂಗಳಿಗೆ ಸರಾಸರಿ 2000 ವಾಹನಗಳು ನಿಯಮ ಉಲ್ಲಂಘಿಸುತ್ತಿವೆ. ಇದಕ್ಕಾಗಿಯೇ ಪ್ರತ್ಯೇಕ ಸಂಚಾರ ಠಾಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ತಾತ್ಕಾಲಿಕವಾಗಿ ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಲಾಗಿತ್ತು. ಕೋವಿಡ್ ನಂತರದಲ್ಲಿ ಇದು ಕೂಡ ಕೈಬಿಟ್ಟಿದೆ.
ತ್ವರಿತ ಸಾರಿಗೆ ಸೇವೆಗಾಗಿ ಪ್ರತ್ಯೇಕ ಕಾರಿಡಾರ್‌ನಲ್ಲಿ ಅನಗತ್ಯ ವಾಹನಗಳ ಪ್ರವೇಶಕ್ಕೆ ನಿಷೇಧಿಸಲಾಗಿದ್ದು, ಬೂಂ ಬ್ಯಾರಿಕೇಡ್ ಅಳವಡಿಸುವ ಮೂಲಕ ಅನಗತ್ಯ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಆದರೂ ಕೆಲವೊಂದು ಕಡೆ ನಿಯಮ ಉಲ್ಲಂಘನೆಯಾಗುತ್ತಿದೆ. ಇವುಗಳನ್ನು ಪತ್ತೆ ಹಚ್ಚಲು ಎಎನ್‌ಪಿಆರ್ ಕ್ಯಾಮರಾಗಳು ಕಾರ್ಯನಿವಹಿಸುತ್ತಿವೆ. ಸಾರ್ವಜನಿಕರು ತಮ್ಮ ಹಿತದೃಷ್ಟಿಯಿಂದ ಪ್ರತ್ಯೇಕ ಕಾರಿಡಾರ್ ಪ್ರವೇಶಿಸಬಾರದು. –ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್
ಇತರೆ ಸಂಚಾರ ನಿಯಮ ಉಲ್ಲಂಘನೆಯ ದಂಡ ಸಂಗ್ರಹಿಸುವಂತೆ ಬಿಆರ್‌ಟಿಎಸ್ ಕಾರಿಡಾರ್ ನಿಯಮ ಉಲ್ಲಂಘಿಸುವರಿಂದಲೂ ದಂಡ ಸಂಗ್ರಹಿಸಲಾಗುತ್ತದೆ. ಕರ್ತವ್ಯನಿರತ ಅಧಿಕಾರಿಗಳು ವಾಹನಗಳ ತಡೆದು ಹಿಂದೆ ದಾಖಲಾದ ಪ್ರಕರಣಗಳ ಬಗ್ಗೆ ಪರಿಶೀಲಿಸಿ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ದಂಡ ವಸೂಲಿ ಮಾಡಲಾಗುತ್ತದೆ. -ಗೋಪಾಲ ಬ್ಯಾಕೋಡ್, ಡಿಸಿಪಿ
-ಹೇಮರಡ್ಡಿ ಸೈದಾಪುರ