ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಪಾದಚಾರಿ ಮಾರ್ಗ ತೆರವು , ಸ್ವಚ್ಛತೆ ಹಾಗೂ ಡಿಜಿಟಲ್ ಜಾಹೀರಾತಿಗೆ ಕ್ರಮಕ್ಕೆ 30 ದಿನಗಳ ಗಡುವು ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ನ್ಯಾ.ಸುಭಾಸ ಆಡಿ ಸೂಚಿಸಿದರು.
ಘನತ್ಯಾಜ್ಯ,ಕಟ್ಟಡ ತ್ಯಾಜ್ಯ ನಿರ್ವಹಣೆ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛತೆ ಕುರಿತು ಜಾಗೃತಿ ಅಗತ್ಯವಾಗಿದೆ. ಪ್ರಸ್ತುತ ಅವಳಿನಗರದಲ್ಲಿ ಶೇ.70 ರಷ್ಟು ತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿ ಆಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ತ್ಯಾಜ್ಯ ವಿಲೇವಾರಿ, ಸ್ವಚ್ಛತೆಗೆ ಇನ್ನಷ್ಟು ಒತ್ತು ನೀಡಲು, ಯಾವುದೇ ಕಾರಣ ನೀಡದೆ ಪಾದಚಾರಿ ಮಾರ್ಗ ತೆರವು, ಸ್ವಚ್ಛತೆಗೆ 30 ದಿನಗಳಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಅದೇ ರೀತಿ ಕಂಡ, ಕಡೆ ಪೋಸ್ಟರ್ ಅಂಟಿಸುವುದಕ್ಕೆ ತಡೆ ಹಾಗೂ ಡಿಜಿಟಲ್ ಪೋಸ್ಟರ್ ಗೆ ಹೆಚ್ಚಳಕ್ಕೆ ಸೂಚಿಸಲಾಗಿದೆ ಎಂದರು.
ವಾಯವ್ಯ ಸಾರಿಗೆ ಸಂಸ್ಥೆ ಬಸ್ ಗಳು, ಬಿಆರ್ ಟಿಎಸ್ ಬಸ್ ತ್ಯಾಜ್ಯ ಬಸ್ ಒಳಗಡೆ ,ಹೊರಗಡೆ ಎಸೆಯುವುದನ್ನು ತಡೆಗೆ ಬಸ್ ಗಳಲ್ಲಿ ಎರಡು ತ್ಯಾಜ್ಯ ಸಂಗ್ರಹ ಡಬ್ಬಿಗಳನ್ನು 30 ದಿನದೊಳಗೆ ಇರಿಸಲು ತಿಳಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ರೈಲುಗಳಲ್ಲಿಯೂ ಇದೇ ತರಹದ ಡಬ್ಬಿಗಳನ್ನು ಇರಿಸಿ ಸ್ವಚ್ಛತೆ ಕಾಪಾಡಲು ನಿಯಮ ಉಲ್ಲಘಿಸಿದವರ ವಿರುದ್ಧ ದಂಡ ವಿಧಿಸಲು ಸೂಚಿಸಲಾಗಿದೆ.
ರೈಲು, ಬಸ್ ನಿಲ್ದಾಣ ಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಕ್ಕೆ, ರೈಲು ನಿಲ್ದಾಣಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಗೆ ಸೂಚಿಸಲಾಗಿದೆ ಎಂದರು.
ಹೊಟೇಲ್ , ವರ್ತಕರ ಸಂಘದವರು ಸಭೆಗೆ ಆಗಮಿಸಿದ್ದರು, ಅವರು ಸಹ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.