ಹುಬ್ಬಳ್ಳಿ: ಎಲ್ಲ ಕ್ಷೇತ್ರಗಳಲ್ಲಿಯೂ ಗಣಿತಶಾಸ್ತ್ರದ ಬಳಕೆಯಾಗುತ್ತಿದ್ದು, ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳುವ
ಮೂಲಕ ಹೊಸ ಹೊಸ ಸಂಶೋಧನೆಗೆ ಶ್ರಮಿಸಬೇಕು ಎಂದು ಕೆಎಲ್‌ಇ ತಾಂತ್ರಿಕ ವಿವಿಯ ಕಂಪ್ಯೂಟರ್ ವಿಜ್ಞಾನ ವಿಭಾಗದ
ಮುಖ್ಯಸ್ಥ ಡಾ| ಪಿ.ಎಸ್. ಹಿರೇಮಠ ಹೇಳಿದರು.
ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಗಣಿತಶಾಸ್ತ್ರ (ಸ್ನಾತಕೋತ್ತರ) ವಿಭಾಗ ಐಕ್ಯುಎಸಿ ಆಶ್ರಯದಲ್ಲಿ ನಡೆದ “ಗಣಿತಶಾಸ್ತ್ರದಲ್ಲಿ ಸಂಶೋಧನಾ ವಿಧಾನ’ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ಗಣಿತವೆಂದರೆ ಕೇವಲ ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗಿದ್ದು, ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಗಣಿತಶಾಸ್ತ್ರದ ಅಗತ್ಯವಿದೆ. ಇತ್ತೀಚೆಗೆ ಡೇಟಾ ಸೈನ್ಸ್ ಮತ್ತು ಡೇಟಾ ಅನಾಲಿಸಿಸ್ ಮುಂತಾದ ಕ್ಷೇತ್ರಗಳಲ್ಲಿ ಗಣಿತ ಸ್ನಾತಕೋತ್ತರ ಪದವೀಧರರಿಗೆ ಒಳ್ಳೆಯ ಅವಕಾಶ ಮತ್ತು ಬೇಡಿಕೆ ಇದೆ. ಮೇಲಾಗಿ ಎನ್‌ಇಪಿ 4ನೇ ಸೆಮಿಸ್ಟರ್‌ನಲ್ಲಿ ಸಂಶೋಧನಾ ವಿಧಾನವೆಂಬ ವಿಷಯವಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಸಂಶೋಧನೆಯತ್ತ ಗಮನ ಹರಿಸಬೇಕೆಂದರು.
ಕುವೆಂಪು ವಿವಿ ಗಣಿತ ವಿಭಾಗದ ಪ್ರಾಧ್ಯಾಪಕ ಡಾ| ಬಿ.ಜೆ. ಗಿರೀಶ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಇಂದು ಗಣಿತಶಾಸ್ತ್ರವು ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿಕೊಂಡಿದೆ. ಗಣಿತ ದೇವರಿದ್ದಂತೆ. ದೇವರನ್ನು ನೋಡಲು ಸಾಧ್ಯವಿಲ್ಲ, ಆದರೆ ಎಲ್ಲೆಡೆಯೂ ದೇವರಿದ್ದಾನೆ. ಗಣಿತವು ಇಂದು ಜಾಗತಿಕ ಭಾಷೆಯಾಗಿದೆ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಉಮಾ ನೇರ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣಿತ ವಿಭಾಗದ ಮುಖ್ಯಸ್ಥೆ ಡಾ| ಪ್ರಭಾವತಿ ಮಂಡಲಗೇರಿ ಸ್ವಾಗತಿಸಿದರು. ಗಣಿತ ಉಪನ್ಯಾಸಕಿ ಡಾ| ಎಂ.ಅರ್ಚನಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಗಣಿತ ಸ್ನಾತಕೋತ್ತರ ವಿಭಾಗದ ಹಿರಿಯ ಉಪನ್ಯಾಸಕಿ ಡಾ| ಎಸ್. ಜಾನಕಿ ವಂದಿಸಿದರು.