ಹುಬ್ಬಳ್ಳಿ: ಟಿಪ್ಪು ಸುಲ್ತಾನ್ ಜಯಂತಿ ರದ್ದುಗೊಳಿಸಿದ ರಾಜ್ಯ ಸರಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯರ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಭಾವಚಿತ್ರಗಳನ್ನು ದಹನ ಮಾಡಿ ಪ್ರತಿಭಟಿಸಿದರು.
ಬುಧವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಅಧಿಕಾರವಧಿಯಲ್ಲಿ ಟಿಪ್ಪು ಜಯಂತಿ ಸೇರಿದಂತೆ ಮುಸ್ಲಿಂ ಸಮಾಜದ ಕಾರ್ಯಕ್ರಮಗಳಲ್ಲಿ ಟೋಪಿ ಧರಿಸಿದ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಹಿಡಿದು ಅಧಿಕಾರದಲ್ಲಿದ್ದಾಗ ವೋಟ್ ಬ್ಯಾಂಕ್‌ಗಾಗಿ ಇಂತಹ ಗಿಮಿಕ್ ಮಾಡಿದ ಬಿಜೆಪಿ ನಾಯಕರು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ಮುಸ್ಲಿಂ ರಾಜ ಎನ್ನುವ ಕಾರಣಕ್ಕೆ ಜಯಂತಿ ರದ್ದು ಪಡಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರ್ಮ, ಜಾತಿ ರಾಜಕಾರಣ ಆರಂಭಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ರದ್ದತಿ ಕ್ರಮವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವಕ್ತಾರ ವೇದವ್ಯಾಸ ಕೌಲಗಿ ಮಾತನಾಡಿ, ಅಧಿಕಾರ ವಹಿಸಿಕೊಂಡ ಎಂಟು ಗಂಟೆಗಳಲ್ಲಿ ಟಿಪ್ಪು ಜಯಂತಿ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಕೋಮುವಾದಿ ಎಂಬುವುದನ್ನು ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಮೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾಗಿಲ್ಲ. ಟಿಪ್ಪು ಅಭಿಮಾನಿಗಳು ಅದ್ಧೂರಿಯಾಗಿ ಜಯಂತಿ ಆಚರಿಸುತ್ತೇವೆ. ಧೈರ್ಯವಿದ್ದರೆ ತಡೆಯುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಮುಸ್ಲಿಂ ದೊರೆ ಎನ್ನುವ ಒಂದೇ ಒಂದು ಕಾರಣಕ್ಕೆ ಬಿಜೆಪಿ ಸರಕಾರ ಈ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ಧರ್ಮ ಹಾಗೂ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವ ಕೋಮುವಾದಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ರದ್ದು ಮಾಡಿರುವ ಕ್ರಮ ಹಿಂಪಡೆಯದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಮುಖಂಡರಾದ ಸದಾನಂದ ಡಂಗನವರ, ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ, ಸಿದ್ದು ತೇಜಿ ಮಾತನಾಡಿದರು. ವಿನೋದ ಅಸೂಟಿ, ಅಲ್ತಾಫ್ ಕಿತ್ತೂರ, ಮೋಹನ ಅಸುಂಡಿ, ರಫೀಕ್ ದರ್ಗದ, ಮಹೇಂದ್ರ ಸಿಂಘಿ ಇನ್ನಿತರರಿದ್ದರು.