ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಹುಬ್ಬಳ್ಳಿ ಚಿಂತನ-ಮಂಥನ ವೇದಿಕೆ ಪೂರಕವಾಗಿ ಕೆಲಸ ಮಾಡುವಂತಾಗಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಹುಬ್ಬಳ್ಳಿ ಚಿಂತನ-ಮಂಥನ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿರುವ ಜಲ್ವಂತ ಸಮಸ್ಯೆಗಳ ಕುರಿತು ಗಮನ ಹರಿಸಿ ಅದರ ಪರಿಹಾರಕ್ಕೆ ಮಾರ್ಗಸೂಚಿ ಸೂಚಿಸುವ ಮೂಲಕ ಈ ವೇದಿಕೆ ಉತ್ತಮ ಕಾರ್ಯ ಮಾಡುವಂತಾಗಲಿ ಎಂದು ಹಾರೈಸಿದರು. ಈ ಹಿಂದೆ ತಾವು ಸಚಿವರಾಗಿದ್ದಾಗ ಅವಳಿನಗರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು.
ಆದರೆ ಸಮನ್ವಯ ಕೊರತೆಯಿಂದ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿರುವುದು ನಾವುಗಳು ಇಂದಿಗೂ ನೋಡುತ್ತಿದ್ದೇವೆ. ಅಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ಇದ್ದಾಗ ಅವಳಿ ನಗರದ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಎಂದು 30 ಕೋಟಿ ರೂ. ಬಿಡುಗಡೆ ಮಾಡಿಸಲಾಗಿತ್ತು.
ಅದಕ್ಕೆ ಕೇವಲ 30 ದಿನಗಳ ಅವಧಿ ನಿಗದಿ ಪಡಿಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಲಾಗಿದೆ. ಅಂದು ಮಾಡಿದ ರಸ್ತೆಗಳು ಇಂದಿಗೂ ಉತ್ತಮ ರಸ್ತೆಗಳಾಗಿರುವುದು ನಾವುಗಳು ನೋಡುತ್ತಿದ್ದೇವೆ ಎಂದರು. ಹೋರಾಟ ಎಂದ ಕೂಡಲೇ ಮೊದಲಿಗೆ ಬರುವುದೇ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಸ್ಥೆ ಹಲವಾರು ಹೋರಾಟ ನಡೆಸಿದೆ.
ಅದರಲ್ಲಿ ನೈರುತ್ಯ ರೈಲ್ವೆ ವಲಯ, ಹೈಕೋರ್ಟ್ ಪೀಠ ಸೇರಿದಂತೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಸ್ಥೆಯ ನೀಡಿರುವ ಕೊಡುಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಸಿರು ಕರಪತ್ರಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರೊ| ಸಿ.ಸಿ. ದೀಕ್ಷಿತ, ಡಾ| ಪಾಂಡುರಂಗ ಪಾಟೀಲ, ಎನ್.ಜಿ. ಸಾಣಿಕೊಪ್ಪ, ಎಂ.ಎಚ್.ಎ.ಶೇಖ್, ಶಿವಪ್ಪ ಅಂಗಡಿ, ರಮೇಶ ಶೆಟ್ಟಿ ಇದ್ದರು. ಎಚ್.ಪಿ. ಮಧುಕರ ಸ್ವಾಗತಿಸಿದರು. ಸಿದ್ದು ಮೊಗಲಿಶೆಟ್ಟರ ನಿರೂಪಿಸಿದರು.