ಹುಬ್ಬಳ್ಳಿ: ರಾಜ್ಯದಲ್ಲಿ ಕಟ್ಟಡ ನಿರ್ಮಾತೃಗಳಿಂದ 8,000 ಕೋಟಿ ರೂ. ಕಟ್ಟಡ ಕಾರ್ಮಿಕರ ಉಪಕರ ಸಂಗ್ರಹವಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಡಳಿ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಈ ನಿಧಿ ಬಳಸಲಾಗುವುದು ಎಂದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಬುಧವಾರ ನಿರ್ಮಾತೃಗಳು ಹಾಗೂ ಗುತ್ತಿಗೆದಾರರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ಕಾರ್ಮಿಕ ಉಪಕರ ಸಂಗ್ರಹವಾಗಿದೆ. ಸುಪ್ರಿಂಕೋರ್ಟ್ ನಿರ್ದೇಶನದಂತೆ ಸಂಗ್ರಹವಾದ ಉಪಕರವನ್ನು ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು. ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದು, ಇದೂವರೆಗೆ ಮಂಡಳಿಯಿಂದ 500 ಕೋಟಿ ರೂ.ಗಳನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗಿದೆ. ರಾಜ್ಯಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಕಾರ್ಮಿಕರು ಇದರ ಸದುಪಯೋಗ ಪಡೆದಿದ್ದಾರೆ ಎಂದರು.
ಬಹುತೇಕ ಅಸಂಘಟಿತ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ನಿರ್ಮಾತೃಗಳು ಹಾಗೂ ಗುತ್ತಿಗೆದಾರರು ತಮ್ಮ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ತಪ್ಪದೇ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ 21,19,399 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಒಂದು ವರ್ಷದಲ್ಲಿ 90 ದಿನಗಳ ಕಾಲ ಕಟ್ಟಡ ಕಾರ್ಮಿಕ ಕೆಲಸದಲ್ಲಿ ತೊಡಗಿರುವವರು ಸೇವಾ ಸಿಂಧು ಅಂತರ್ಜಾಲ ಮೂಲಕ, ಫಾರ್ಮ್ ನಂ.5ರಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಒಮ್ಮೆ ನೋಂದಣಿ ಮಾಡಿದರೆ 3 ವರ್ಷಗಳ ಕಾಲ ನೋಂದಣಿ ಅಸ್ತಿತ್ವದಲ್ಲಿ ಇರುತ್ತದೆ. ನಂತರ ನೋಂದಣಿ ನವೀಕರಿಸಬೇಕು. ಪ್ರತಿವರ್ಷ 25 ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.
ಮಂಡಳಿಯ ಕೆಲವು ನಿಯಮಾವಳಿಗೆ ತಿದ್ದುಪಡಿ ತರಲಾಗಿದ್ದು, ಕಾರ್ಮಿಕರು ನಿರ್ಮಾಣ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ.ಗಳ ಪರಿಹಾರಧನ ನೀಡಲಾಗುವುದು. ಮಂಡಳಿಯಲ್ಲಿ ಶೈಕ್ಷಣಿಕ, ಮದುವೆ, ಅಂತ್ಯಸಂಸ್ಕಾರ, ವೈದ್ಯಕೀಯ, ಅಪಘಾತ, ಹೆರಿಗೆ, ಉಪಕರಣ ಖರೀದಿ ಸಾಲ, ಪಿಂಚಣಿ, ಅನಿಲ ಭಾಗ್ಯ ಸೇರಿದಂತೆ 15 ಸಾಮಾಜಿಕ ಕಲ್ಯಾಣ ಹಾಗೂ ಭದ್ರತಾ ಯೋಜನೆಗಳಿವೆ. ಮಂಡಳಿ ವತಿಯಿಂದ ಕಾರ್ಮಿಕರ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ 5 ಲಕ್ಷ ರೂ.ಗಳ ಯೋಜನೆ ರದ್ದು ಪಡಿಸಲಾಗಿದೆ. ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 2022ರ ವೇಳೆಗೆ ಸರ್ವರಿಗೂ ಸೂರು ಯೋಜನೆ ಅನುಷ್ಠಾನಗೊಳಿಸಿರುವುದರಿಂದ ಈ ಯೋಜನೆ ಕೈಬಿಡಲಾಗಿದೆ. ಜತೆಗೆ ಸರಕಾರದ ಕೆಲ ಯೋಜನೆಗಳನ್ನು ಹೊರತುಪಡಿಸಿ ಮಂಡಳಿಯು ಕಾರ್ಮಿಕರ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಕಾರ್ಮಿಕ ಇಲಾಖೆಯಿಂದ ಮಂಡಳಿ ಬೇರ್ಪಡಿಸಲಾಗಿದೆ. ಇದರಿಂದ ಹೆಚ್ಚಿನ ಕಲ್ಯಾಣ ಕಾರ್ಯಕ್ರಮ ಕೈಗೊಳ್ಳಬಹುದು ಎಂದರು.
ಪರಿಹಾರ ಧನ ಚೆಕ್ ವಿತರಣೆ: ಧಾರವಾಡದ ಕುಮಾರೇಶ್ವರ ನಗರದಲ್ಲಿ ಮಾರ್ಚ್ 19ರಂದು ಸಂಭವಿಸಿದ ಬಹುಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಅಸುನೀಗಿದ ಕಟ್ಟಡ ಕಾರ್ಮಿಕರಾದ ಸಲೀಂಶಾ ಎಂ. ಮಕಾಂದಾರ, ಮಹಬೂಬಸಾಬ ಜಿ. ದೇಸಾಯಿ, ಮಹಬೂಬಸಾಬ್ ಬಡೇಸಾಬ್ ರಾಯಚೂರು, ವಾಘು ವಿಠuಲ ರೋಖೆ, ಜಹಾಂಗೀರಸಾಬ ಹರಿಹರ, ನವಲುದಾಡು ಅವರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರ ಧನ ಚೆಕ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನಿರ್ಮಾತೃಗಳು ಹಾಗೂ ಕಟ್ಟಡ ಕಾರ್ಮಿಕರು ತಮ್ಮ ಕೆಲ ಸಮಸ್ಯೆಗಳನ್ನು ಹೇಳಿದರು. ಸಂವಾದದಲ್ಲಿ ಕ್ರಡೈ ಅಧ್ಯಕ್ಷ ಸುರೇಶ ಶೇಜವಾಡಕರ, ಬೆಳಗಾವಿ ವಲಯದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ, ಸಹಾಯಕ ಕಾರ್ಮಿಕ ಆಯುಕ್ತರಾದ ಮೀನಾ ಪಾಟೀಲ, ಅನುರಾಧ, ಗೋವಿಂದರಾಜ ಕುಲಕರ್ಣಿ, ರಾಮ ಮೋಹನ್ ಅಯ್ಯರ್ ಸೇರಿದಂತೆ ಇತರೆ ನಿರ್ಮಾತೃಗಳು ಹಾಗೂ ಗುತ್ತಿಗೆದಾರರು ಪಾಲ್ಗೊಂಡಿದ್ದರು.