Advertisement

ಹುಬ್ಬಳ್ಳಿ ಹುಡುಗನ ಅಕ್ವಾ ಸೇವರ್‌ ಸಾಧನೆ

10:20 AM Nov 26, 2019 | Suhan S |

ಹುಬ್ಬಳ್ಳಿ: ಹುಬ್ಬಳ್ಳಿ ಹುಡುಗನೊಬ್ಬ ನೂತನ ಆವಿಷ್ಕಾರದಿಂದ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಇಲ್ಲಿನ ನೆಹರು ನಗರದ ಸೇಂಟ್‌ ಪೌಲ್ಸ್‌ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿರುವ ರಾಯಸ್ಟನ್‌ ವೇದಮುತ್ತು ನೀರು ಉಳಿಸುವ ಯಂತ್ರ ಆವಿಷ್ಕಾರ ಮಾಡುವ ಮೂಲಕ ನೀತಿ ಆಯೋಗ ಆಯ್ಕೆ ಮಾಡಿದ ಯುವ ವಿಜ್ಞಾನಿ ಅಗ್ರ 25ರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾನೆ. ಈ ಸಾಧನೆ ಮಾಡಿದ ಉತ್ತರ ಕರ್ನಾಟಕದ ಏಕೈಕ ವಿದ್ಯಾರ್ಥಿ ಎಂಬುದು ಈತನ ಹೆಗ್ಗಳಿಕೆ.

Advertisement

ಜಲಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಕೃಷಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಶುದ್ಧ ಇಂಧನ, ಆರ್ಕಿಟೆಕ್ಚರ್‌ ಮತ್ತು ವಿನ್ಯಾಸ, ಸ್ಮಾರ್ಟ್‌ ಮೊಬಿಲಿಟಿ, ತ್ಯಾಜ್ಯ ನಿರ್ವಹಣೆ ವಿಷಯಗಳ ಕುರಿತು ಆವಿಷ್ಕಾರ ಮಾಡಲು ನೀತಿ ಆಯೋಗ ತಿಳಿಸಿತ್ತು. ಜಲ ಸಂರಕ್ಷಣೆ ವಿಭಾಗದಲ್ಲಿ ರಾಯಸ್ಟನ್‌ರ ಅಕ್ವಾ ಸೇವರ್‌ ಆಯ್ಕೆಯಾಗಿದೆ. ರಾಯಸ್ಟನ್‌ನ ವಿನೂತನ ಆವಿಷ್ಕಾರ ಮಾಡಿದ್ದಕ್ಕಾಗಿ ಕೇಂದ್ರ ಸರಕಾರದ ಅಟಲ್‌ ಇನ್ನೊವೇಶನ್‌ ಮಿಷನ್‌ (ಎಐಎಂ) ರಷ್ಯಾ ಪ್ರವಾಸಕ್ಕೆ ಆಯ್ಕೆ ಮಾಡಿದೆ. ರಷ್ಯಾದಲ್ಲಿ ಎಸ್‌ಐಆರ್‌ಯುಎಸ್‌ ಡೀಪ್‌ ಟೆಕ್ನಾಲಜಿ ಲರ್ನಿಂಗ್‌ ಆ್ಯಂಡ್‌ ಇನ್ನೊವೇಶನ್‌ ವಿಶೇಷ ಅಧ್ಯಯನಕ್ಕಾಗಿ ನ.29ರಿಂದ ಡಿಸೆಂಬರ್‌ 7ರವರೆಗೆ ರಷ್ಯಾದ ಸೋಚಿಗೆ ಪ್ರವಾಸ ಕೈಗೊಳ್ಳಲಿರುವ ರಾಯಸ್ಟನ್‌ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದಾನೆ. ಅಲ್ಲದೇ ಅಲ್ಲಿನ ತಜ್ಞರಿಂದ ನೂತನ ಸಂಶೋಧನೆ ಕುರಿತು ಜ್ಞಾನಾರ್ಜನೆ ಮಾಡಿಕೊಳ್ಳಲಿದ್ದಾನೆ.

ಸೇಂಟ್‌ ಪೌಲ್ಸ್‌ ಶಾಲೆಯ ಅಟಲ್‌ ಟಿಂಕರಿಂಗ್‌ ಲ್ಯಾಬೊರೇಟರಿ (ಎಟಿಎಲ್‌) ಮೆಂಟರ್‌ ಅಮಿತ್‌ ಕುಲಕರ್ಣಿ ಹಾಗೂ ಲ್ಯಾಬ್‌ ಉಸ್ತುವಾರಿ ನೋಡಿಕೊಳ್ಳುವ ವೇಮರೆಡ್ಡಿ ಅವರು ರಾಯಸ್ಟನ್‌ ಗೆ ಪೂರಕ ಮಾರ್ಗದರ್ಶನ ನೀಡಿ ಸಾಧನೆಗೆ ನೆರವಾಗಿದ್ದಾರೆ. ವಿಶಿಷ್ಟ ಆವಿಷ್ಕಾರ, ಇಂಟೆಲ್‌ ಹಾಗೂ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ಸ್‌ ಇಲಾಖೆ ಆಯೋಜಿಸುವ ಐಡಿಯೇಟ್‌ ಫಾರ್‌ ಇಂಡಿಯಾ 3ನೇ ಫೇಸ್‌ನಲ್ಲಿ ದೇಶದ ಅಗ್ರ 50 ಆವಿಷ್ಕಾರಗಳಲ್ಲಿ ಆಯ್ಕೆಯಾಗಿರುವುದು ಹರ್ಷ ಹೆಚ್ಚಾಗಲು ಮತ್ತೂಂದು ಕಾರಣವಾಗಿದೆ.

ಐಡಿಯಾ ಬಂದಿದ್ದು ಹೇಗೆ?: ಒಮ್ಮೆ ತಂದೆ ಜೋಯೆಲ್‌ ವೇದಮುತ್ತು ಅವರೊಂದಿಗೆ ರಾಯಸ್ಟನ್‌ ಬೇರೆ ಊರಿಗೆ ಹೋಗಿದ್ದರು. ಅಲ್ಲಿ ಲಾಡ್ಜಿಂಗ್ ನಲ್ಲಿ ಉಳಿದುಕೊಂಡ ಸಂದರ್ಭದಲ್ಲಿ ಸ್ನಾನ ಮಾಡುವಾಗ ಬಿಸಿನೀರು ಬರುವ ಮುಂಚೆ ನಲ್ಲಿಯಲ್ಲಿ 2 ಬಕೆಟ್‌ ತಣ್ಣೀರು ಬಂತು. ಅದನ್ನು ಬಾತ್‌ರೂಮ್‌ಗೆ ಸುರಿಯದೇ ವಿಧಿ ಇರಲಿಲ್ಲ. ಎರಡು ಬಕೆಟ್‌ ನೀರು ವ್ಯರ್ಥ ಮಾಡಿದ್ದರ ಬಗ್ಗೆ ಮನಸಿಗೆ ವ್ಯಥೆಯಾಯಿತು. ಇದರ ಬಗ್ಗೆ ತಂದೆಯೊಂದಿಗೆ ಚರ್ಚಿಸಿದರು.

ಜೋಯೆಲ್‌ ವೇದಮುತ್ತು ಅವರು ಪುತ್ರನಿಗೆ ನೀರು ರಕ್ಷಿಸುವ ದಿಸೆಯಲ್ಲಿ ಏನಾದರೂ ಆವಿಷ್ಕಾರ ಮಾಡು ಎಂದು ಸಲಹೆ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಯಸ್ಟನ್‌ ಅಕ್ವಾ ಸೇವರ್‌ ಸಿಸ್ಟಮ್‌ ರೂಪಿಸಿದರು.

Advertisement

ಏನಿದು ಅಕ್ವಾ ಸೇವರ್‌ ಸಿಸ್ಟಂ: ಲಾಡ್ಜಿಂಗ್, ಹಾಸ್ಟೆಲ್‌ ಗಳಲ್ಲಿ ಇಂಧನ ಉಳಿಸುವ ದಿಸೆಯಲ್ಲಿ ಸೋಲಾರ್‌ ವಾಟರ್‌ ಹೀಟರ್‌ ಅಳವಡಿಸಿರುತ್ತಾರೆ. ಸೌರ ಶಕ್ತಿ ಆಧಾರಿತ ವ್ಯವಸ್ಥೆಯಲ್ಲಿ ಬಿಸಿನೀರು ಬರುವ ಮುಂಚೆ ಬರುವ ಸುಮಾರು 2 ಬಕೆಟ್‌ ತಣ್ಣೀರನ್ನು ಬಚ್ಚಲಿಗೆ ಸುರಿಯುವುದೇ ಹೆಚ್ಚು. ಇದನ್ನು ತಪ್ಪಿಸಲು ಅಕ್ವಾ ಸೇವರ್‌ ಸಿಸ್ಟಂ ಅಳವಡಿಸಲಾಗುವುದು. ತಣ್ಣೀರು ಹರಿದು ಅಂಡರ್‌ಗ್ರೌಂಡ್‌ ನೀರಿನ ಟ್ಯಾಂಕ್‌ಗೆ ಸೇರುವಂತೆ ಮಾಡಲಾಗುವುದು. ಇದಕ್ಕೆ ಮೈಕ್ರೊ ಕಂಟ್ರೋಲರ್‌, ವಾಲ್ಟ್ ಜೋಡಿಸಲಾಗುತ್ತದೆ. ಟೆಂಪರೇಚರ್‌ ಸೆನ್ಸಾರ್‌ ಸಹಾಯದಿಂದ ಪೈಪ್‌ ನಲ್ಲಿ ಬಿಸಿನೀರು ಬರುವವರೆಗೆ ನೀರು ಟ್ಯಾಂಕ್‌ಗೆ

ಹೋಗುತ್ತದೆ. ಹೊಟೇಲ್‌ಗ‌ಳು, ಲಾಡ್ಜಿಂಗ್, ಹಾಸ್ಟೆಲ್‌ ಗಳಿಗೆ ಉಪಕರಣ ಅಳವಡಿಸುವುದರಿಂದ ಅಗಾಧ ಪ್ರಮಾಣದ ನೀರು ಉಳಿಸಲು ಸಾಧ್ಯವಾಗುತ್ತದೆ. ನಗರದ ಸ್ವರ್ಣಾ ಪ್ಯಾರಡೈಸ್‌ ಹೊಟೇಲ್‌ ವಿನೂತನಉಪಕರಣದ ಮಹತ್ವ ಅರಿತು ರೂಮ್‌ಗಳಿಗೆ ಅಳವಡಿಸಿಕೊಳ್ಳಲು ಮುಂದಾಗಿರುವುದು ವಿಶೇಷ.

ಪ್ರಾಡಕ್ಟ್ ರೂಪ ಪಡೆಯುತ್ತಿರುವ ಪ್ರಾಜೆಕ್ಟ್: 2017-18ನೇ ಸಾಲಿನಲ್ಲಿ ರಾಯಸ್ಟನ್‌ ಆನ್ವೇಷಣೆ ಮಾಡಿದ “ಎಕ್ಸ್‌ ಎನ್‌ಆರ್‌ ಪಾವರ್‌ ಜನರೇಟಿಂಗ್‌ ಶೂಸ್‌’ ಸ್ಮಾರ್ಟ್‌ ಮೊಬಿಲಿಟಿ ವಿಭಾಗದಲ್ಲಿ ಅಗ್ರ 15 ಆನ್ವೇಷಣೆ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಶೂಸ್‌ ಹಾಕಿಕೊಂಡು ನಾವು ಅಡ್ಡಾಡಿದರೆ ವಿದ್ಯುತ್‌ ಉತ್ಪಾದನೆಯಾಗಿ ಶೂಸ್‌ ಮುಂಭಾಗದಲ್ಲಿ ದೀಪ ಉರಿಯುವ ತಂತ್ರಜ್ಞಾನ ಇದಾಗಿದೆ. ಅಲ್ಲದೇ ಪಾವರ್‌ ಬ್ಯಾಂಕ್‌ನಲ್ಲಿ ಉತ್ಪಾದನೆಗೊಂಡ ವಿದ್ಯುತ್‌ ಸಂಗ್ರಹಗೊಳ್ಳಲಿದ್ದು, ಅದನ್ನು ಮೊಬೈಲ್‌ ಚಾರ್ಜ್‌ ಮಾಡಲು ಕೂಡ ಬಳಸಬಹುದಾಗಿದೆ. ಈ ವಿಶೇಷ ಪ್ರಾಜೆಕ್ಟ್ ಅನ್ನು ಪ್ರಾಡಕ್ಟ್ ಮಾಡಲು ರಾಯಸ್ಟನ್‌ ಮುಂದಾಗಿದ್ದಾರೆ. ಕೆಲ ಕಂಪನಿಗಳು ಕೂಡ ಆಸಕ್ತಿ ತೋರಿವೆ. ಈ ದಿಸೆಯಲ್ಲಿ ಅಗ್ರ ಶೂಸ್‌ ಉತ್ಪಾದನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ.

ನಮ್ಮ ಶಾಲೆಯ ವಿದ್ಯಾರ್ಥಿ ರಾಯಸ್ಟನ್‌ ಸಾಧನೆ ನಮಗೆಲ್ಲ ಖುಷಿ ತಂದಿದೆ. ಅವನು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಸತತ 2ನೇ ವರ್ಷ ಅವನ ಆವಿಷ್ಕಾರ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ವಿದ್ಯಾರ್ಥಿ ಸಾಧನೆಯಿಂದ ಉತ್ತೇಜಿತರಾಗಿ ನೂತನ ಆವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು. -ರೆವರೆಂಡ್‌ ಫಾದರ್‌ ಜೋಸೆಫ್‌ ವೇದಮುತ್ತು, ಸೇಂಟ್‌ ಪೌಲ್ಸ್‌ ಶಾಲೆಯ ಚೇರಮನ್‌

Advertisement

Udayavani is now on Telegram. Click here to join our channel and stay updated with the latest news.

Next