ಅಂಕೋಲಾ : ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶದಂತೆ ನೇಮಕಗೊಂಡಿರುವ ತಜ್ಞರ ಸಮಿತಿಗೆ ಯೋಜನಾ ಪರ ಅಭಿಪ್ರಾಯ ದಾಖಲಿಸಲು ಮತ್ತು ವಿವಿಧ ಸಂಘ ಸಂಸ್ಥೆಗಳಿಗೂ ಈ ಕುರಿತಾಗಿ ಮನವಿ ಮಾಡಿಕೊಳ್ಳಲು ಹುಬ್ಬಳ್ಳಿ- ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ನಿರ್ಧಾರ ಮಾಡಿದೆ.
ಭಾನುವಾರ ನಡೆದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತಲ್ಲದೇ ರೈಲು ಯೋಜನೆ ಕುರಿತು ಪರಿಶೀಲನೆಗೆ ಆಗಮಿಸುವ ಕೇಂದ್ರ ತಂಡದ ಪ್ರಕಟಣೆಯಂತೆ ಸೆ. 21 ರೊಳಗೆ ಮನವಿಯನ್ನು ಮೇಲ್ ಮೂಲಕ ಕಳುಹಿಸಲು ಮತ್ತು ಎಲ್ಲರೂ ವೈಯಕ್ತಿಕವಾಗಿ ಮನವಿಯನ್ನು ಸಲ್ಲಿಸಲು ತಿರ್ಮಾನಿಸಲಾಯಿತು.ಜೊತೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಮತ್ತೆ ಹೋರಾಟದ ದಾರಿಯನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ರಮಾನಂದ ನಾಯಕ ಕಳೆದ 19 ವರ್ಷಗಳಿಂದ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಮುಖ್ಯಮಂತ್ರಿಗಳಿಂದ ಹಿಡಿದು ಪ್ರಧಾನಿಯವರೆಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಇರುವ ಅನೇಕ ತೊಂದರೆ ತೊಡಕುಗಳು ನಿವಾರಣೆ ಆಗಿದ್ದು ಮುಂದಿನ ದಿನದಲ್ಲಿ ಪರಿಸರ ಸ್ನೇಹಿ ಯೋಜನೆ ಜಾರಿ ಆಗಿ ಕರಾವಳಿ ಮತ್ತು ಬಯಲುಸೀಮೆಯನ್ನು ಬೆಸೆಯುವುದರಲ್ಲಿ ಎರಡು ಮಾತಿಲ್ಲ. ಯೋಜನೆ ಜಾರಿಯ ತನಕ ಸಂಘಟಿತ ಹೋರಾಟಕ್ಕೆ ಅಣಿಯಾಗೋಣ ಎಂದರು.
ಈ ಸಂದರ್ಭದಲ್ಲಿ ಅಂಕೋಲಾ ಹುಬ್ಬಳ್ಳಿ ರೈಲ್ವೇ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ಭಾಸ್ಕರ ನಾರ್ವೇಕರ, ಕಾರ್ಯದರ್ಶಿ ವಿಠ್ಠಲದಾಸ ಕಾಮತ್ , ಸಂಚಾಲಕ ಉಮೇಶ ನಾಯ್ಕ, ಪ್ರಮುಖರಾದ ಆರ್.ಟಿ.ಮಿರಾಶಿ, ಕೆ.ಎಚ್.ಗೌಡ, ಕೆ.ವಿ.ಶೆಟ್ಟಿ, ನಾಗಾನಂದ ಬಂಟ, ಅರುಣ ನಾಡಕರ್ಣಿ, ರಾಜೆಂದ್ರ ಶೆಟ್ಟಿ, ಸಂಜಯ ನಾಯ್ಕ, ಗೋಪಾಲಕೃಷ್ಣ ನಾಯಕ, ಭೈರವ ನಾಯ್ಕ, ನಾಗೇಂದ್ರ ನಾಯ್ಕ, ರವೀಂದ್ರ ಕೇಣಿ, ಅರುಣ ಶೆಟ್ಟಿ, ಅನುರಾಧಾ ನಾಯ್ಕ, ಮೋಹನ ಹಬ್ಬು, ಗೋವಿಂದರಾಯ ನಾಯ್ಕ, ಮಂಜುನಾಥ ನಾಯ್ಕ ,ಉಮೇಶ ನಾಯ್ಕ ಮತ್ತಿತರರು ಇದ್ದರು.