ಹುಬ್ಬಳ್ಳಿ: ನಗರದ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜೂ. 15ರಂದು ಚುನಾವಣೆ ನಡೆಯಲಿದ್ದು, 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಧಾರವಾಡ ಉಪ ವಿಭಾಗಾಧಿಕಾರಿ ಮೊಹಮ್ಮದ ಜುಬೇರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಕಾರ್ಯದರ್ಶಿ, ಶಿಕ್ಷಣ ಸಂಸ್ಥೆ ಮಂಡಳಿಯ ನಾಲ್ಕು ಸದಸ್ಯರು, ಆಸ್ಪತ್ರೆ ಮಂಡಳಿಯ ಏಳು ಸದಸ್ಯರು, ಕಾರ್ಯಕಾರಿ ಹಾಗೂ ಪೋಷಕ ಮಂಡಳಿಗೆ 35 ಸದಸ್ಯರು ಸೇರಿ ಒಟ್ಟು 52 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಮತದಾರರ ಯಾದಿ ಸಿದ್ಧಪಡಿಸಲಾಗಿದೆ. ಒಟ್ಟು 11,513 ಮತದಾರರು ಇದ್ದು, ಮೇ 25ರಂದು ಯಾದಿ ಪ್ರಕಟಿಸಲಾಗುವುದು. ಮೇ 27ರಿಂದ 29ರ ವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಅಜುಂಮನ್-ಏ-ಇಸ್ಲಾಂ ಸಂಸ್ಥೆಯ ನೆಹರು ಕಾಲೇಜಿನ ಗ್ರಂಥಾಲಯ ಕಟ್ಟದಲ್ಲಿ ವಿವಿಧ ಸ್ಥಾನಗಳಿಗೆ ನಾಮಪತ್ರಗಳನ್ನು ವಿತರಿಸಲಾಗುವುದು ಹಾಗೂ ಸ್ವೀಕರಿಸಲಾಗುವುದು. ಮೇ 30ರಂದು ಬೆಳಗ್ಗೆ 11 ಗಂಟೆ ನಂತರ ನಾಮಪತ್ರಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಪ್ರಕಟಿಸಲಾಗುವುದು. ಮೇ 31ರ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿರಲಿದೆ. ನಂತರ ಅಭ್ಯರ್ಥಿಗಳಿಗೆ ಚಿಹ್ನೆ ಹಾಗೂ ಅಂತಿಮಪಟ್ಟಿ ಬಿಡುಗಡೆ ಮಾಡಲಾಗುವುದು. ಜೂ. 15ರಂದು ಬೆಳಗ್ಗೆ 8ರಿಂದ ಸಂಜೆ 5:30 ಗಂಟೆ ವರೆಗೆ ಮತದಾನ ನಡೆಯಲಿದ್ದು, ಜೂ. 16ರಂದು ಬೆಳಗ್ಗೆ 8 ಗಂಟೆಯಿಂದ ಮತಗಳ ಏಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಕೂಡ ಘೋಷಣೆಯಾಗಲಿದೆ ಎಂದರು.
ನಗರದ ಘಂಟಿಕೇರಿಯ ನೆಹರು ಕಾಲೇಜು, ಆಂಗ್ಲೋ ಉರ್ದು ಪ್ರೌಢಶಾಲೆ, ನ್ಯಾಷನಲ್ ಪ್ರೌಢಶಾಲೆ, ಸರಕಾರಿ ಕನ್ನಡ ಮಾದರಿ ಬಾಲಕರ ಶಾಲೆ ನಂ.5, ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕನ್ನಡ ಸರಸ್ವತಿ ವಿದ್ಯಾಲಯ ನಂ.1ರಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಸೂಕ್ತ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಬಹುದು. ಪ್ರತಿ ನಾಲ್ಕು ಕೋಣೆಗೆ ಒಂದು ಮತಗಟ್ಟೆ ಸ್ಥಾಪಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಮೊಹಮ್ಮದ ಜುಬೇರ ತಿಳಿಸಿದರು.
Advertisement
ಅಂಜುಮನ್-ಏ-ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿ ಚುನಾವಣೆಗೆ ಧಾರವಾಡ ಉಪ ವಿಭಾಗಾಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಿ, ವೇಳಾಪಟ್ಟಿ ಪ್ರಕಟಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ ಎಂದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳು ಇದ್ದರು.