ಹೇಮರೆಡ್ಡಿ ಸೈದಾಪೂರ
ಹುಬ್ಬಳ್ಳಿ: ಈ ಊರಿನ ಕುಡಿಯುವ ನೀರಿನ ಒದಗಿಸುವ ಕೆರೆಯೊಂದು ಇಡೀ ಗ್ರಾಮದ ಜನರ ನಿದ್ದೆಗೆಡಿಸಿದೆ. ದೊಡ್ಡ ಮಳೆಯಲ್ಲ, ಸಣ್ಣ ಮಳೆ ಬಿದ್ದರೆ ಸಾಕು ಜನರು ಇಡೀ ರಾತ್ರಿ ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು. ಕುಂದಗೋಳ ತಾಲೂಕಿನ ಕೊನೆಯ ಗ್ರಾಮ ಅಲ್ಲಾಪುರ ಗ್ರಾಮದಲ್ಲಿ ಕೆರೆಗೆ ಕೋಡಿ ವ್ಯವಸ್ಥೆ ಕಲ್ಪಿಸದಿರುವುದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದ ಸುಮಾರು 6 ಎಕರೆ ವಿಸ್ತೀರ್ಣದ ಕೆರೆ ತುಂಬಿದೆ. ಇದು ಒಮ್ಮೆ ತುಂಬಿದರೆ ಮೂರು ವರ್ಷಗಳ ಕಾಲ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದು. ಮಲಪ್ರಭಾ ನೀರು ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಕುಡಿಯಲು ಹಾಗೂ ಬಳಕೆಗೆ ಈ ಕೆರೆ ಮೇಲೆ ಜನ ಅವಲಂಬಿತರಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆ ನೀರು ಗ್ರಾಮದೊಳಗೆ ನುಗ್ಗಿದ್ದು, ಗ್ರಾಮಸ್ಥರೊಬ್ಬರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಮಳೆಗಾಲ ಮಧ್ಯೆಯೇ ಕೆರೆ ತುಂಬಿದ್ದು, ಇನ್ನೂ ಮಳೆಗಳಿದ್ದು ಇನ್ನಷ್ಟು ತುಂಬಿ ಒಡೆದರೆ ಮುಂದೇನು ಎಂಬ ಆತಂಕ ಜನರಲ್ಲಿ ಮೂಡಿದೆ.
ಕೋಡಿ ವ್ಯವಸ್ಥೆಯಿಲ್ಲ: ಕೆರೆ ತುಂಬಿದ ನಂತರ ಹರಿದು ಬರುವ ಹೆಚ್ಚುವರಿ ನೀರು ಹೋಗಲು ಕೆರೆಗೆ ವ್ಯವಸ್ಥೆಯಿಲ್ಲದಿರುವುದು ಗ್ರಾಮಸ್ಥರ ಆತಂಕ್ಕೆ ಕಾರಣವಾಗಿದೆ. ಪ್ರತಿ ಮಳೆಗಾಲಕ್ಕೂ ಮುಂಚೆ ಕೆರೆಗೆ ಕೋಡಿ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳೆದ ಆರು ತಿಂಗಳ ಹಿಂದೆ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಕೋಡಿ ವ್ಯವಸ್ಥೆ ಮಾಡಿಕೊಡಿ ಇಲ್ಲದಿದ್ದರೆ ಗ್ರಾಮಕ್ಕೆ ಸಂಚಕಾರ ತಪ್ಪಿದ್ದಲ್ಲ ಎಂದು ಕೋರಿದ್ದರು. ಆದರೂ ಪ್ರಯೋಜನವಾಗಿಲ್ಲ. ಇಂತಹ ಅವ್ಯವಸ್ಥೆಯಿಂದ ಬೆಚ್ಚಿಬಿದ್ದಿರುವ ಜನ ಎರಡ್ಮೂರು ದಿನಗಳಿಂದ ಮಳೆಯಿರದಿದ್ದರೂ ಮನೆ ಬಾಗಿಲಿಗೆ ಹಾಕಿರುವ ತಗಡಿನ ಶೀಟುಗಳನ್ನು ತೆಗೆದಿಲ್ಲ.
ಕ್ರಿಮಿನಾಶಕ ಕೆರೆ ಸೇರುವ ಆತಂಕ: ಕೊಂಚ ಮಳೆ ತಗ್ಗಿರುವುದರಿಂದ ಕೆರೆಯ ಜಲಾನಯನ ಪ್ರದೇಶದಲ್ಲಿರುವ ಬೆಳೆಗಳಿಗೆ ಇದೀಗ ಕಳೆನಾಶಕ ಸಿಂಪರಿಸುತ್ತಿದ್ದು, ಆಗಾಗ ಬೀಳುತ್ತಿರುವ ಮಳೆಗೆ ಸಿಂಪರಿಸಿರುವ ಕ್ರಿಮಿನಾಶಕ ಕೆರೆ ಸೇರುತ್ತಿದೆ. ಇದೇ ನೀರನ್ನು ಗ್ರಾಮದ ಜನರು ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಆರೋಗ್ಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕವೂ ಗ್ರಾಮಸ್ಥರಲ್ಲಿದೆ.
ಇದ್ದರೂ ಇಲ್ಲದಂತಾಗಿದೆ: ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ, ಮಲಪ್ರಭಾ ನದಿಯಿಂದ ನೀರಿನ ಸೌಲಭ್ಯ ಇದ್ದರೂ ಇಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದ ಮಲಪ್ರಭಾ ನೀರು ಬರುತ್ತಿಲ್ಲ. ಇರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 20 ದಿನಗಳಿಂದ ದುರಸ್ತಿಯಲ್ಲಿದೆ. ಹೀಗಾಗಿ ಕೆರೆಯ ರಾಡಿ ನೀರು ಗ್ರಾಮದ ಜನರಿಗೆ ಅನಿವಾರ್ಯವಾಗಿ ಬಿಟ್ಟಿದೆ. ರಾಡಿ ನೀರು ಕುಡಿಯುತ್ತಿರುವುದರಿಂದ ಜನರಲ್ಲಿ ಸಣ್ಣಪುಟ್ಟ ಕಾಯಿಲೆಗಳು ಶುರುವಾಗಿವೆ. ಕುಡಿಯುವ ನೀರಿನ ಕುರಿತು ಸಾಕಷ್ಟು ಬಾರಿ ಪಿಡಿಒ, ತಹಶೀಲ್ದಾರ್ ಕಚೇರಿಗೆ ಗ್ರಾಪಂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಕಡೆಯ ಗ್ರಾಮ ಎನ್ನುವ ತಾತ್ಸಾರ ಅಧಿಕಾರಿಗಳಲ್ಲಿ ಮೂಡಿದೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಇತ್ತ ತಲೆಯೂ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.