ಧಾರವಾಡ : ಮದ್ಯ ಶೋಧನೆಗೆ ಹೋದವರಿಗೆ ಧಾರವಾಡದ ಅಪಾರ್ಟಮೆಂಟ್‌ವೊಂದರಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಎಣಿಕೆ ಕಾರ್ಯ ಮುಗಿದಿದ್ದು, ಅದನ್ನು ಹುಬ್ಬಳ್ಳಿಯ ಕೇಶ್ವಾಪೂರ ಎಸ್‌ಬಿಐ ಬ್ಯಾಂಕ್‌ನಲ್ಲಿ ಅಧಿಕಾರಿಗಳು ಜಮೆ ಮಾಡಿದ್ದಾರೆ.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದ ವರೆಗೂ ಹಣದ ಎಣಿಕೆ ಮಾಡಿದ ಹಣವನ್ನು ಅಧಿಕಾರಿಗಳು 18 ಕ್ಕೂ ಅಧಿಕ ಬ್ಯಾಗುಗಳಲ್ಲಿ ತುಂಬಿಕೊಂಡು ಇನ್ನೊವಾ ಕಾರಿನಲ್ಲಿಟ್ಟುಕೊಂಡು ಹುಬ್ಬಳ್ಳಿಗೆ ಕೊಂಡೊಯ್ದರು. ಆದರೆ ಈ ಹಣದ ಕುರಿತು ಧಾರವಾಡದ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ.
ಸದ್ಯಕ್ಕೆ ಅರ್ನಾ ಅಪಾರ್ಟ್‌ಮೆಂಟ್‌ನ 33 ನೇ ಫ್ಲಾಟ್ ಸಹಾಯಕ ಬಸವರಾಜ ದತ್ತುನವರ ಅವರಿಗೆ ಸೇರಿದ್ದರಿಂದ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆಗೆ ಬಲೆ ಬೀಸಿದ್ದಾರೆ. ಕೋಟಿ ಕೋಟಿ ಹಣ18-20 ಕೋಟಿ ರೂ.ಗಳಿಗೂ ಅಧಿಕ ಮೊತ್ತದ್ದಾಗಿದೆ ಎನ್ನಲಾಗಿದೆ. ಆದರೆ ಈ ಪೈಕಿ ಒಂದಿಷ್ಟು ಹಣಕ್ಕೆ ಈಗಾಗಲೇ ದಾಖಲೆಗಳನ್ನು ನೀಡಲಾಗಿದೆ ಎನ್ನುವ ಮಾಹಿತಿ ಇದ್ದು, ಅಂತಿಮವಾಗಿ ಎರಡು ದಿನಗಳ ನಂತರವೇ ಅಧಿಕೃತವಾಗಿ ಇದು ಯಾರಿಗೆ ಸೇರಿದ ಹಣ ಎಂಬುದು ಗೊತ್ತಾಗಲಿದೆ.
ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿಗೂ ಅಧಿಕ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.
ಕೋಟಿ ಕೋಟಿ ಹಣ ರಾಜಕೀಯ
ಇನ್ನು ಜಿಲ್ಲೆಯಲ್ಲಿ ಮೊದಲೇ ಚುನಾವಣಾ ಕಾವು ಏರಿದ್ದರಿಂದ ರಾಜಕೀಯ ಪಕ್ಷಗಳ ಮುಖಂಡರು ಕೋಟಿ ಕೋಟಿ ಹಣವು ಈ ಪಕ್ಷದ್ದು ಆ ಪಕ್ಷದ್ದು ಎಂದು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದಲ್ಲಿ ಸಿಕ್ಕಿರುವ ಹಣ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ್ದಿರಬಹುದು. ಇನ್ನೆರಡು ದಿನಗಳಲ್ಲಿ ಇವರ ಬಣ್ಣ ಬಯಲಾಗುತ್ತದೆ ಎಂದು ಆರೋಪಿಸಿದ್ದಾರೆ. ಅಷ್ಟೇಯಲ್ಲ, ಕೋಟಿ ಕೋಟಿ ಹಣ ಪಕ್ಕದ ಜಿಲ್ಲೆಯ ಪ್ರಭಾವಿ ರಾಜಕೀಯ ಮಹಿಳೆಯರೊಬ್ಬರಿಗೆ ಸೇರಿದ್ದಿರಬಹುದು ಎನ್ನುವ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.