ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್ ವಿಷಯವಾಗಿ ಶನಿವಾರ ರಾತ್ರಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಿದ್ದ ಬಹುತೇಕ ಕಿಡಿಗೇಡಿಗಳೆಲ್ಲ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಮನೆಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ಕಿಡಿಗೇಡಿಗಳು ಗಲಭೆ ವೇಳೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದುವರೆಗೆ 46 ಜನರನ್ನು ವಶಕ್ಕೆ ಪಡೆದಿದ್ದಾರೆ.
ಹಳೇಹುಬ್ಬಳ್ಳಿ ಠಾಣೆಗೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮತ್ತು ಉಪ ವಿಭಾಗಾಧಿಕಾರಿ, ಪೊಲೀಸ್ ಹಿರಿಯ ಅಧಿಕಾರಿಗಳು ಹಳೇಹುಬ್ಬಳ್ಳಿ ಠಾಣೆಯಲ್ಲೇ ಮುಕ್ಕಾಂ ಹೂಡಿದ್ದಾರೆ. ಇತರ ಜಿಲ್ಲೆಯಿಂದಲೂ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
12 ಸಿಬ್ಬಂದಿಗೆ ಗಾಯ: ಶನಿವಾರ ರಾತ್ರಿ ನಡೆದ ಗಲಭೆಯಲ್ಲಿ ಸಂಚಾರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಡದೇವರ ಮಠ, ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ:‘ದಿ ಡೆಲ್ಲಿ ಫೈಲ್ಸ್’ನಲ್ಲಿ ತಮಿಳುನಾಡಿನ ಬಗ್ಗೆ ಸಾಕಷ್ಟು ಸತ್ಯವೂ ಇದೆ: ಅಗ್ನಿಹೋತ್ರಿ
ದಾಂಧಲೆಯಲ್ಲಿ ಒಟ್ಟು ಪೊಲೀಸ್ ವಾಹನಗಳು ಸೇರಿದಂತೆ 12 ವಾಹನಗಳು ಜಖಂಗೊಂಡಿವೆ. ಘಟನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಹಾನಿಯಾಗಿದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ನಗರದಲ್ಲಿ ಕಟ್ಟೆಚ್ಚರ: ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ ಏ. 20ರ ಬೆಳಗ್ಗೆ6:00 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಚನ್ನಮ್ಮ ವೃತ್ತ, ಘಟನೆ ನಡೆದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ವಿವಿಧೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
13 ಸುತ್ತು ಗಾಳಿಯಲ್ಲಿ ಗುಂಡು: ಶನಿವಾರ ರಾತ್ರಿ ನಡೆದ ಗಲಭೆ ನಿಯಂತ್ರಿಸಲು ಪೊಲೀಸರು 13 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.