Advertisement

ವಾರ್ಡ್‌ಗೊಂದು ಮಾರುಕಟ್ಟೆಗೆ ಸಕಾಲ

09:30 AM May 11, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಕೋವಿಡ್ ದಂತಹ ಸಂಕಷ್ಟ ಸ್ಥಿತಿಯಲ್ಲಿ ಕೆಲವೇ ಮಾರುಕಟ್ಟೆಗಳ ಮೇಲಿನ ಒತ್ತಡ ತಗ್ಗಿಸಲು, ಅವಳಿನಗರದಲ್ಲಿ ವಿಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆ ತರಲು ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಭವಿಷ್ಯದ ದೃಷ್ಟಿಯಿಂದಲೂ ಇದು ಸಹಕಾರಿಯಾಗಲಿದೆ. ಜನರಿಗೆ ಹತ್ತಿರದಲ್ಲೇ ತರಕಾರಿ, ಹಣ್ಣು, ಧಾನ್ಯಗಳು ದೊರೆತಂತಾಗಲಿದೆ. ಹುಬ್ಬಳ್ಳಿಯಲ್ಲಿ ಸಂತೆಗಳನ್ನು ಹೊರತು ಪಡಿಸಿದರೆ ಮಾರುಕಟ್ಟೆ ಎಂದರೆ ಜನತಾ ಬಜಾರ, ದುರ್ಗದ ಬಯಲು ವೃತ್ತದ ಎಂ.ಜಿ. ಮಾರುಕಟ್ಟೆ ಎನ್ನುವಂತಿದೆ. ಧಾರವಾಡದಲ್ಲಿ ಸೂಪರ್‌ ಮಾರ್ಕೆಟ್‌ ಎಂಬಂತಾಗಿದೆ. ಇದರ ಬದಲಾಗಿ ವಾರ್ಡ್‌ಗೆ ಒಂದರಂತೆ ಸಣ್ಣ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಿದರೆ ಜನರಿಗೆ ಕಾಲ್ನಡಿಗೆ ಅಂತರದಲ್ಲೇ ತರಕಾರಿ, ಹಣ್ಣುಗಳನ್ನು ದೊರೆತಂತಾಗಲಿದೆ.

ಕೇಂದ್ರೀಕೃತ ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿದಂತಾಗಲಿದೆ. ಜನರ ಪೆಟ್ರೋಲ್‌ ಖರ್ಚು, ಸಮಯ ಎರಡೂ ಉಳಿಯಲಿದೆ. ಜತೆಗೆ ಹಲವರಿಗೆ ಉದ್ಯೋಗ ಸೃಷ್ಟಿಸಿದಂತಾಗಲಿದ್ದು, ಪಾಲಿಕೆ ಆದಾಯಕ್ಕೂ ಅನುಕೂಲವಾಗಲಿದೆ. ಕಷ್ಟದ ಕೆಲಸವೇನಲ್ಲ: ಅವಳಿನಗರದಲ್ಲಿ 82 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಪಾಲಿಕೆಗೆ ಕಷ್ಟದ ಕೆಲಸವೇಲಲ್ಲ.

ಹೊಸ ಬಡಾವಣೆಗಳಲ್ಲಿ ಬಯಲು ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ತರಕಾರಿ ವ್ಯಾಪಾರವೇ ಇಂದು ಸಂತೆ ರೂಪ ತಾಳಿವೆ. ಈ ಜಾಗಗಳಲ್ಲಿ ಸಂತೆ ಆರಂಭಿಸಬೇಕೆಂದು ಪಾಲಿಕೆ ಯೋಜಿಸಿರಲಿಲ್ಲ. ಆದರೆ, ಜನರ ಅಗತ್ಯಕ್ಕೆ ತಕ್ಕಂತೆ ಸಂತೆಗಳು ರೂಪುಗೊಂಡಿವೆ.ಇದೇ ರೀತಿ ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾದಲ್ಲಿ ಜನ ಖಂಡಿತವಾಗಿಯೂ ಅದನ್ನು ಸ್ವೀಕರಿಸುವ ಸಾಧ್ಯತೆ ಇಲ್ಲದಿಲ್ಲ. ಒಂದು ವಾರ್ಡ್‌ನಲ್ಲಿ ಸುಮಾರು 12-13 ಸಾವಿರ ನಿವಾಸಿಗಳಿದ್ದು, ವಾರ್ಡ್‌ ವಿಸ್ತಾರ ಸುಮಾರು 2-3 ಕಿಮೀ ವ್ಯಾಪ್ತಿ ಹೊಂದಿದೆ. ವಾರ್ಡ್‌ನಲ್ಲಿ ಬಯಲು ಜಾಗವನ್ನೇ ಬಳಸಿಕೊಂಡು ಮಾರುಕಟ್ಟೆ ನಿರ್ಮಾಣ ಮಾಡಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next