ವರದಿ: ಶಿವಶಂಕರ ಕಂಠಿ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾಡ್ ìನಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್, ಐಸಿಯು ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕಿಮ್ಸ್‌ನಲ್ಲಿನ 250 ಬೆಡ್ ಸಾಮರ್ಥ್ಯದ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನೇ ಕೋವಿಡ್-19ರ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ಕೋವಿಡ್ ಸೋಂಕಿತರಿಗೆ ಬೆಡ್‌ಗಳ ಕೊರತೆಯಾಗದಂತೆ ಮುಂಜಾಗ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ 1ಸಾವಿರ ಬೆಡ್ ಗಳಿಗೆ ವಿಸ್ತರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಅದರಂತೆ ಕಿಮ್ಸ್‌ನ ಐಸೋಲೇಷನ್ ಕೇಂದ್ರದಲ್ಲಿ ಈಗಾಗಲೇ 600 ಬೆಡ್ ಗಳನ್ನು ವಿಸ್ತರಿಸಲಾಗಿದೆ. ಇದನ್ನು 1500ಕ್ಕೂ ಹೆಚ್ಚಿಸಲು ಕಿಮ್ಸ್‌ನ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸದ್ಯ 260 ಕೋವಿಡ್ ಸೋಂಕಿತರು ದಾಖಲು: ಕಿಮ್ಸ್ ಆಸ್ಪತ್ರೆ ಒಟ್ಟು 1430 ಬೆಡ್‌ಗಳನ್ನು ಹೊಂದಿದ್ದು, ಎಲ್ಲದಕ್ಕೂ ಆಕ್ಸಿಜನ್ ಸೌಲಭ್ಯವಿದೆ. ಕೋವಿಡ್-19 ಕೇಂದ್ರದಲ್ಲಿ ಸದ್ಯ 600 ಬೆಡ್ ಗಳಿದ್ದು, ಇಂದಿನವರೆಗೆ ಇಲ್ಲಿ 260 ಕೋವಿಡ್ ಸೋಂಕಿತರು, 240 ಸಾರಿ ರೋಗಿಗಳು ದಾಖಲಾಗಿದ್ದಾರೆ. ಕೋವಿಡ್-19 ಕೇಂದ್ರದಲ್ಲಿ 600 ಬೆಡ್‌ಗಳು ಆಕ್ಸಿಜನ್ ಹೊಂದಿದ್ದು, ಇದರಲ್ಲಿ ಕೋವಿಡ್ ಸೋಂಕಿತರಿಗೆ 70 ಐಸಿಯು, 40 ಸಾರಿ ರೋಗಿಗಳಿಗೆ ಮೀಸಲಿಡಲಾಗಿದೆ. ಜತೆಗೆ ಕೋವಿಡ್ ಸೋಂಕಿತರಿಗೆ 70 ವೆಂಟಿಲೇಟರ್ ಹಾಗೂ ಕೋವಿಡ್ ಅಲ್ಲದವರಿಗೆ 70 ವೆಂಟಿಲೇಟರ್ ಬೆಡ್‌ಗಳ ವ್ಯವಸ್ಥೆಯಿದೆ.
ಐಸಿಯುನಲ್ಲಿ ಸದ್ಯ 65ಕ್ಕೂ ಅಧಿಕ ಹಾಗೂ ಸಾರಿಯಲ್ಲಿ 30ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ರೋಗಿಗಳಿಗೆ ಅವಶ್ಯವಾದ ಎಲ್ಲ ಚಿಕಿತ್ಸಾ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದನ್ನು ಇನ್ನೂ ಹೆಚ್ಚಿಸಲು ಯೋಜಿಸಲಾಗಿದೆ. ಕಳೆದ ಬಾರಿ ಐಸೋಲೇಷನ್ ಕೇಂದ್ರದಲ್ಲಿ 500 ಬೆಡ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಎಲ್ಲವೂ ಭರ್ತಿಯಾಗಿದ್ದವು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೂಡ ನೀಡಲಾಗಿತ್ತು. ಹೀಗಾಗಿ ಜನಪ್ರತಿ ನಿಧಿಗಳು, ಗಣ್ಯಾತಿಗಣ್ಯರು, ಪ್ರತಿಷ್ಠಿತರು ಸಹ ಕಿಮ್ಸ್‌ನ ಕೋವಿಡ್ ಕೇಂದ್ರದಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಕ್ಸಿಜನ್ ಸ್ಟೋರೇಜ್ 40ಕೆಎಲ್‌ಗೆ ಹೆಚ್ಚಳ: ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ (ಎಲ್‌ಎಂಒಎಸ್‌ಟಿ) ಸಾಮರ್ಥಯವನ್ನು 40 ಕೆಎಲ್‌ಗೆ ಹೆಚ್ಚಿಸಲಾಗಿದೆ. ಈ ಮೊದಲು ಇಲ್ಲಿ 20ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹ ಟ್ಯಾಂಕ್ ಇತ್ತು. ಕೋವಿಡ್-19 2ನೇ ಅಲೆಯಲ್ಲಿ ಬಹುತೇಕ ಸೋಂಕಿತರು ಆಕ್ಸಿಜನ್ ಕೊರತೆ ಅನುಭವಿಸುತ್ತಿದ್ದು, ಇದನ್ನು ಮನಗಂಡು ಆಸ್ಪತ್ರೆಯಲ್ಲಿ ಇನ್ನು 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗಿದೆ. 2-3 ದಿನಕ್ಕೊಮ್ಮೆ ಇವನ್ನು ಭರ್ತಿ ಮಾಡಲಾಗುತ್ತಿದೆ. 40 ಕೆಎಲ್ ಸಾಮರ್ಥಯ ಭರ್ತಿಯಾದರೆ ಒಮ್ಮೆಲೆ 1200 ಜನರಿಗೆ ಆಕ್ಸಿಜನ್ ನೀಡಬಹುದಾಗಿದೆ.
ಇತರೆ ರೋಗಿಗಳಿಗೂ ಚಿಕಿತ್ಸೆ: ರಾಜ್ಯದಲ್ಲಿ ಕೋವಿಡ್-19ರ 2ನೇ ಅಲೆ ವ್ಯಾಪಿಸುತ್ತಿದ್ದರೂ ಕಿಮ್ಸ್ ಆಸ್ಪತ್ರೆಯಲ್ಲಿ ಸದ್ಯ ಕೋವಿಡ್ ಸೋಂಕಿತರು ಸೇರಿದಂತೆ ಇತರೆ ರೋಗಿಗಳಿಗೂ ಚಿಕಿತ್ಸೆ ಒದಗಿಸಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಹೃದಯ ಕಾಯಿಲೆ, ಡಯಾಲಿಸಿಸ್, ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಅಸ್ತಮಾ, ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ಕೋವಿಡ್ ವಿಶೇಷ ಕೇಂದ್ರದಲ್ಲಿನ ಬೆಡ್‌ಗಳೆಲ್ಲ ಭರ್ತಿಯಾದರೆ ಇವುಗಳ ಸೇವೆ ತಾತ್ಕಾಲಿಕ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ.