Advertisement

ಉದ್ಯಾನವನದ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ! ಪಾಲಿಕೆಯಿಂದ ಕಾಮಗಾರಿಗೆ ತಡೆ

11:25 AM Nov 13, 2020 | sudhir |

ಹುಬ್ಬಳ್ಳಿ: ನವೀನ್‌ ಪಾರ್ಕ್‌ನ ಪಾಲಿಕೆ ಉದ್ಯಾನವನ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗುತ್ತಿದ್ದ ಕಟ್ಟಡದ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಸಂಬಂಧಿಸಿದವರಿಗೆ ನೊಟೀಸ್‌ ನೀಡಿಲಾಗಿದೆ.

Advertisement

ನವೀನ್‌ ಪಾರ್ಕ್‌ನ ಪಾಲಿಕೆ ಒಡೆತನದ ಉದ್ಯಾನವನದ ಸುಮಾರು 22 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಕಾಲಂಗಳನ್ನು ನಿರ್ಮಿಸಲಾಗಿತ್ತು. ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಾಮಗಾರಿಯನ್ನು ಪ್ರಶ್ನಿಸಿ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ದು, ದೂರು ಬರುತ್ತಿದ್ದಂತೆ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಅವರು ವಾಸ್ತವಾಂಶ ನೀಡುವಂತೆ ವಲಯ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದರು. ಮೇಲ್ನೋಟಕ್ಕೆ ಉದ್ಯಾನದ ಜಾಗ ಒತ್ತುವರಿ
ಮಾಡಿಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಉದ್ಯಾನ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಕಾಲಂಗಳನ್ನು ಹಾಕಲಾಗಿದೆ. ಕಟ್ಟಡ ನಿರ್ಮಾಣ ಮಾಡಿ ಕ್ಲಬ್‌ ಹಾಗೂ ಹೋಟೆಲ್‌ ಮಾಡುವ ಹುನ್ನಾರವಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಸಾರ್ವಜನಿಕ ಆಸ್ತಿ ಅತಿಕ್ರಮಣ
ಮಾಡಿ ಕ್ಲಬ್‌ ನಿರ್ಮಾಣ ಮಾಡುವುದರ ಹಿಂದೆ ಕೆಲವರ ಸ್ವಹಿತಾಸಕ್ತಿಯಿದೆ. ಸ್ಥಳೀಯ ಸಂಘವೊಂದರ ನೇತೃತ್ವದಲ್ಲಿ ಈ ಅಕ್ರಮ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸುಮಾರು 2 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ವ್ಯಕ್ತಿಯನ್ನು ಕಟ್ಟಿಹಾಕಿ 20 ಕುರಿ ದೋಚಿದ ಕಳ್ಳರು! ತನಿಖೆಗಾಗಿ ಬಂದ ಪೊಲೀಸ್ ವಾಹನ ಅಪಘಾತ

ನಗರದ ಪ್ರತಿಷ್ಠಿತ ನಾಯಕರೊಂದಿಗೆ ಸಂಪರ್ಕ ಹೊಂದಿದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

Advertisement

ಇಷ್ಟು ದಿನ ಏನ್ಮಾಡ್ತಿದ್ರು?
ಪಾಲಿಕೆ ಉದ್ಯಾನ ಒತ್ತುವರಿ ಮಾಡಿ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ಮೂರುವರೆ ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದರೂ
ಯಾವೊಬ್ಬ ಪಾಲಿಕೆ ಅಧಿಕಾರಿಯೂ ಇತ್ತ ಮುಖ ಮಾಡದಿರುವುದು ಸ್ಪಷ್ಟವಾಗಿದೆ.

ವಲಯ ಆಯುಕ್ತರಿಂದ ಹಿಡಿದು ಇನ್ನಿತರೆ ಅಧಿಕಾರಿಗಳಿಗೆ ಪಾಲಿಕೆ ಆಸ್ತಿ ಬಗ್ಗೆ ಕಾಳಜಿ ಇಲ್ಲದಿರುವುದು ಈ ಪ್ರಕರಣದಿಂದ
ಜಗಜ್ಜಾಹೀರಾಗಿದೆ.

ಬೇಕಾಬಿಟ್ಟಿ ನಿರ್ಮಾಣ ಕೇಳುವವರೇ ಇಲ್ಲ!
ಪಾಲಿಕೆ ಜಾಗದಲ್ಲೇ ರಾಜಾರೋಷವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಇಷ್ಟು ದಿನ ಗಮನ ಹರಿಸಿರಲಿಲ್ಲ. ಇನ್ನು ಖಾಸಗಿ ಜಾಗೆಯಲ್ಲಿ ಬೇಕಾಬಿಟ್ಟಿ ಕಟ್ಟಡ ನಿರ್ಮಾಣದ ಬಗ್ಗೆ ತಲೆಕೆಡಿಸಿಕೊಳ್ಳುವವರ್ಯಾರು ಎಂಬಂತಾಗಿದೆ ನಗರದ ಸ್ಥಿತಿ. ನವೀನ್‌ ಪಾರ್ಕ್‌ನ ಪಾಲಿಕೆ ಉದ್ಯಾನವನ ಜಾಗದಲ್ಲಿ ನಿರ್ಮಾಣ ಕಾಮಗಾರಿಯ ಮೇಲುಸ್ತುವಾರಿ ವಹಿಸಿರುವ ವ್ಯಕ್ತಿ ನಗರದ ಗಣ್ಯ
ವ್ಯಕ್ತಿಗಳಿಗೆ ಹತ್ತಿರವಾಗಿದ್ದಾರೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ಕಂಡರೂ ಕಾಣದಂತಿದ್ದರು ಎನ್ನಲಾಗಿದೆ. ಇದೀಗ ಸ್ಥಳೀಯರೇ
ಪಾಲಿಕೆ ಆಯುಕ್ತರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next