ಹುಬ್ಬಳ್ಳಿ: ನಮ್ಮ ಹಬ್ಬಗಳನ್ನು ರಾಷ್ಟ್ರೀಯ ಭಾವೈಕತ್ಯೆಯ ಹಬ್ಬಗಳನ್ನಾಗಿ ಆಚರಿಸುವ ಸಂಕಲ್ಪ ಮಾಡಬೇಕೆಂದು ಮೂರು ಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮೂರು ಸಾವಿರ ಮಠದ ಮೈದಾನದಿಂದ ರವಿವಾರ ಆರಂಭಗೊಂಡ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಳೆದ ಎಂಟು ವರ್ಷಗಳಿಂದ ಈ ಹಬ್ಬದ ಮೂಲಕ ಹುಬ್ಬಳ್ಳಿಯ ಹೆಸರನ್ನು ದೇಶಾದ್ಯಂತ ಪ್ರಚುರ ಪಡಿಸಿದ ಮಹೇಶ ಟೆಂಗಿನಕಾಯಿ ಹಾಗೂ ತಂಡದವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಕೇವಲ ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯ ಹೊರರಾಜ್ಯಗಳಿಂದ ಜಗ್ಗಲಗಿ ತಂಡಗಳು ಆಗಮಿಸಿರುವುದು ಹಬ್ಬಕ್ಕೆ ಮೆರಗು ನೀಡುತ್ತಿದೆ. 20ಕ್ಕೂ ಹೆಚ್ಚು ಮಠಾಧೀಶರು ಆಗಮಿಸಿ ಹಬ್ಬಕ್ಕೆ ಬೆಂಬಲ ಸೂಚಿಸಿದ್ದು, ನಮ್ಮ ಹಬ್ಬ-ಸಂಪ್ರದಾಯಗಳಿಗೆ ಮೆರಗು ನೀಡುವ ಉದ್ದೇಶ ಇದಾಗಿದೆ ಎಂದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿ ಜಗ್ಗಲಗಿ ಹಬ್ಬ ನಾಡಿನ ಹಬ್ಬವಾಗಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಸಾರುವ ಅತಿ ದೊಡ್ಡ ಹಬ್ಬವಾಗಿದೆ. ಇಂದು ಹೋಳಿ ಹಬ್ಬದ ಆಚರಣೆ ಬೇರೆ ಸ್ವರೂಪ ಪಡೆಯುವಂತಹ ಸಮಯದಲ್ಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಅದಕ್ಕೆ ಮೂಲ ಸ್ವರೂಪ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿ ಜಗ್ಗಲಗಿ ಹಬ್ಬ ಈ ನಾಡಿನಲ್ಲಿರುವ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಗ್ರಾಮೀಣದಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಬೆಳಕಿಗೆ ತರುವಂತಾಗಿದೆ ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ದೇಶದ ಸಂಸ್ಕೃತಿ-ಸಂಪ್ರದಾಯ ಉಳಿಸಿ ಬೆಳೆಸುವ ಹಬ್ಬದ ಆಚರಣೆ ಇದಾಗಿದೆ ಎಂದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಂಘಟಕ ಮಹೇಶ ಟೆಂಗಿನಕಾಯಿ ಇನ್ನಿತರರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಸುಭಾಷಸಿಂಗ ಜಮಾದಾರ, ರಾಜು ಕೋರ್ಯಾಣಮಠ, ಸಂಗಮ ಹಂಜಿ, ಜಗದೀಶ ಬುಳ್ಳಾನವರ, ರವಿ ನಾಯ್ಕ, ಮೋಹನಲಾಲ್ ಜೈನ್, ತೋಟಪ್ಪ ನಿಡಗುಂದಿ, ಮಲ್ಲಪ್ಪ ಶಿರಕೋಳ, ಪ್ರಭು ನವಲಗುಂದಮಠ, ಸುಭ್ರಮಣ್ಯಂ ಶಿರಕೋಳ, ಸತೀಶ ಶೇಜವಾಡಕರ, ರವಿ ಕೊಪ್ಪಳ, ಅನುಪ ಬಿಜವಾಡ, ಮಂಜುನಾಥ ಚಿತಗಿಂಜಲ್, ಪ್ರವೀಣ ಪವಾರ ಇನ್ನಿತರರಿದ್ದರು.
35 ಕಲಾ ತಂಡಗಳು ಭಾಗಿ: ಜಿಲ್ಲೆಯ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಭೋಗೆನಾಗರಕೊಪ್ಪ, ಪಾಳೆ, ತಾರಿಹಾಳ, ಶಿವಳ್ಳಿ, ಕಲಘಟಗಿ, ಮರೇವಾಡ, ಅಮ್ಮಿನಬಾವಿ ಸೇರಿ ರಾಜ್ಯದ ವಿವಿಧೆಡೆಯ 35 ತಂಡಗಳು ಪಾಲ್ಗೊಂಡಿದ್ದವು. ಹಾನಗಲ್ಲದ ತಾರಕೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡಗಳು, ಬೆಂಗಳೂರಿನ ತಮಟೆ ರವಿ ಅವರ ಶ್ರೀ ಅಣ್ಣಮ್ಮಾ ದೇವಿ ತಮಟೆ ವಾದ್ಯದ ತಂಡ, ಗೋವಾದ ಜಗದಂಬಾ ಡೋಲ ತಾಷಾ ತಂಡಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೂೂರುಸಾವಿರ ಮಠದಿಂದ ಆರಂಭಗೊಂಡ ಮೆರವಣಿಗೆ ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ದುರ್ಗದಬಯಲು, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಪೆಂಡಾರಗಲ್ಲಿ ಮೂಲಕ ಮರಳಿ ಶ್ರೀಮಠ ತಲುಪಿ ಅಂತ್ಯಗೊಂಡಿತು.