– ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿ ದೊರೆತ ಅವಕಾಶಗಳ ಬಳಕೆ
– ಸೌಲಭ್ಯಗಳ ವಿಚಾರಕ್ಕೆ ಬಂದರೆ ಸಣ್ಣದು-ದೊಡ್ಡದೆಂದು ನೋಡದೆ ಅನುಷ್ಠಾನಕ್ಕೆ ಭಾಗಿ
– ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ ನಾಯಕ
Advertisement
ಕುರುಚಲು ಗುಡ್ಡದಂತಿದ್ದ ಬೆಟ್ಟ, ಪಾಳು ಬಿದ್ದ ಉದ್ಯಾನವನಗಳಿಗೆ ಮನಮೋಹಕ ಸೌಲಭ್ಯ-ಅಭಿವೃದ್ಧಿ ಸ್ಪರ್ಶ, ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡ ಪಿರಾಮಿಡ್ ಧ್ಯಾನಮಂದಿರ, ಮಾರುಕಟ್ಟೆಗಳ ಆಧುನೀಕರಣ, ಒಳಚರಂಡಿ ವ್ಯವಸ್ಥೆ, ಹಲವು ವಾರ್ಡ್‌ಗಳಿಗೆ 24/7 ನೀರು ಪೂರೈಕೆ ಯೋಜನೆ, ಭವನಗಳ ಆಧುನೀಕರಣ, ಟೆಂಡರ್‌ಶ್ಯೂರ್ ರಸ್ತೆ, ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಕೆರೆಗಳಿಗೆ ಕಾಯಕಲ್ಪ, ನಾಲಾಗಳ ಅಭಿವೃದ್ಧಿ ಹಾಗೂ ಹಸಿರು ಕಾರಿಡಾರ್‌ಗೆ ಪರಿಶ್ರಮ…ಹೀಗೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ. ಕ್ಷೇತ್ರ ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ, ಯತ್ನ ಹಾಗೂ ಪರಿಶ್ರಮ ಬದಲಾವಣೆ ರೂಪದಲ್ಲಿ ಗೋಚರಿಸುತ್ತಿದೆ.
Related Articles
Advertisement
ನೃಪತುಂಗ ಬೆಟ್ಟಕ್ಕೆ ಆಧುನಿಕ ಸ್ಪರ್ಶ: ಹೊಸ ಹುಬ್ಬಳ್ಳಿಯ ಮುಕುಟಪ್ರಾಯದಂತಿರುವ ನೃಪತುಂಗ ಬೆಟ್ಟ 2008ರವರೆಗೂ ಒಂದು ರೀತಿಯಲ್ಲಿ ಕುರುಚಲು ಗುಡ್ಡದ ರೀತಿಯಲ್ಲಿತ್ತು. ಗಿಡ-ಮರಗಳು ಇದ್ದವಾದರೂ ಸಮರ್ಪಕ ಸೌಲಭ್ಯಗಳಿರಲಿಲ್ಲ. ಜಗದೀಶ ಶೆಟ್ಟರ ಅವರು ಬೆಟ್ಟದ ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದರು. ನೃಪತುಂಗ ಬೆಟ್ಟಕ್ಕೆ ಸೌಲಭ್ಯ ನೀಡಲು ಮುಂದಾಗಿದ್ದರು. ಅರಣ್ಯ ಇಲಾಖೆ ಅಧೀನದಲ್ಲಿರುವ ಬೆಟ್ಟದ ಸೌಂದರ್ಯ ಹೆಚ್ಚಿಸಲು ವಿಶೇಷ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ನೃಪತುಂಗ ಬೆಟ್ಟವನ್ನು ಸುಂದರ ತಾಣವಾಗಿಸುವ ನಿಟ್ಟಿನಲ್ಲಿ ಯತ್ನ ಕೈಗೊಳ್ಳಲಾಗಿತ್ತು. ಇದಕ್ಕೆ ಹಲವರ ಸಹಕಾರ ದೊರೆತಿತ್ತು. ನೃಪತುಂಗ ಬೆಟ್ಟದಲ್ಲಿ ರಸ್ತೆ ನಿರ್ಮಾಣ, ವಿವಿಧ ಕಲಾಕೃತಿಗಳು, ವಾಯುವಿಹಾರಕ್ಕೆ ಪಾದಚಾರಿ ಮಾರ್ಗ, ವಿವಿಧ ಹೂಗಳು, ಔಷಧೀಯ ಸಸ್ಯಗಳು, ಯೋಗ ಮಾಡುವರಿಗೆ ಸ್ಥಳಾವಕಾಶ, ಕುಟುಂಬ ಸಮೇತರಾಗಿ ಪಿಕ್‌ನಿಕ್‌ಗೆ ತೆರಳಿದರೆ ವಿವಿಧ ಸೌಲಭ್ಯ, ಮಕ್ಕಳಿಗೆ ಆಟ, ಮನರಂಜನೆ ಸವಲತ್ತುಗಳು ಹೀಗೆ ನೃಪತುಂಗ ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ, ಮನೋಹಕ ಬಣ್ಣ ಬಣ್ಣದ ಹೂಗಳು, ಸಸ್ಯಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತಿವೆ.ಬೆಟ್ಟಕ್ಕೆ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ನೂರಾರು ಜನರು ವಾಯುವಿಹಾರಕ್ಕೆಂದು ಹೋಗುತ್ತಾರೆ. ವಾರಾಂತ್ಯ ಹಾಗೂ ಸರಕಾರಿ ರಜೆ ದಿನಗಳಲ್ಲಿ ಮಕ್ಕಳು ಸೇರಿದಂತೆ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಿನದಾಗಿರುತ್ತದೆ. ಹುಬ್ಬಳ್ಳಿ ನೆಚ್ಚಿನ ಪಿಕ್‌ನಿಕ್, ವಾಯುವಿಹಾರಕ್ಕೆ ಇರುವ ನೆಚ್ಚಿನ ತಾಣಗಳಲ್ಲಿ ನೃಪತುಂಗ ಬೆಟ್ಟವೂ ಒಂದಾಗಿದೆ.
ರಸ್ತೆಗಳ ವಿಚಾರಕ್ಕೆ ಬಂದರೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಪ್ರಮುಖ ರಸ್ತೆಗಳು ದುರಸ್ತಿ ಭಾಗ್ಯ ಕಂಡಿವೆ. ಹಲವು ರಸ್ತೆಗಳು ಸಿಆರ್‌ಎಫ್ ನಿಧಿ ಅಡಿ ಸಿಮೆಂಟ್ ರಸ್ತೆಗಳಾಗಿ ರೂಪುಗೊಂಡಿವೆ. ಸರ್ವೋದಯ ವೃತ್ತದಿಂದ ಕೇಶ್ವಾಪುರದ ಶಾಂತಿನಗರವರೆಗೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡಿದೆ. ವಿದ್ಯಾನಗರ, ಮಧುರಾ ಕಾಲೊನಿ, ಭವಾನಿನಗರ, ಮಯೂರ ಎಸ್ಟೇಟ್, ಜೆ.ಸಿ.ನಗರ ಹೀಗೆ ವಿವಿಧ ಕಡೆಯ ಕೆಲ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಗೊಂಡಿವೆ. ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರಿನ ರಸ್ತೆ ತೋಳನ ಕೆರೆವರೆಗೆ ಕೈಗೊಂಡ ಟೆಂಡರ್‌ಶ್ಯೂರ್ ರಸ್ತೆ ಉತ್ತರ ಕರ್ನಾಟಕದ ಮೊದಲ ಟೆಂಡರ್‌ಶ್ಯೂರ್ ರಸ್ತೆ ಎಂಬ ಖ್ಯಾತಿ ಪಡೆದಿದೆ. ಇನ್ನಷ್ಟು ಕಡೆಗಳಲ್ಲಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಸಂತೆಗಳು ನಡೆಯುತ್ತಿವೆ. ಬಹುತೇಕ ಸಂತೆಗಳು ಬಯಲು ಜಾಗದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲವಾಗಿತ್ತು. ಮಳೆ-ಬಿಸಿಲಿನಲ್ಲಿಯೇ ವ್ಯಾಪಾರಿಗಳು ಕೊಚ್ಚೆಯಂತಹ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡಬೇಕಿತ್ತು. ವಾರಕ್ಕೊಮ್ಮೆ ತರಕಾರಿ-ಪಲ್ಯ ಖರೀದಿ ಮಾಡಬೇಕಲ್ಲಪ್ಪ ಎಂಬ ಕಾರಣಕ್ಕೆ ಜನರು ಮಳೆಗಾಲದಲ್ಲಿ ಕೊಚ್ಚೆಯಂತಹ ಸ್ಥಿತಿಯಲ್ಲೂ ಜನರು ಖರೀದಿಗೆ ಮುಂದಾಗುತ್ತಿದ್ದರು. ಇದೀಗ ಕೆಲ ಮಾರುಕಟ್ಟೆಗಳ ಚಿತ್ರಣವೇ ಬದಲಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯ ನೆರವು ಬಳಸಿಕೊಂಡು ಎರಡು ಮಾರುಕಟ್ಟೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಬೆಂಗೇರಿ ಸಂತೆ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕೊಚ್ಚೆಯಂತಿದ್ದ, ವರಾಹಗಳ ತಾಣವಾಗಿದ್ದ ಜಾಗದಲ್ಲೀಗ ಉತ್ತಮ ಬಹುಪಯೋಗಿ ಮಾರುಕಟ್ಟೆ ತಲೆ ಎತ್ತಿದೆ. ಬಿಸಿಲು-ಮಳೆಯಲ್ಲಿ ಕುಳಿತುಕೊಳ್ಳುತ್ತಿದ್ದ ತರಕಾರಿ, ಹಣ್ಣು, ಪಲ್ಯ ಇನ್ನಿತರೆ ವಸ್ತುಗಳ ಮಾರಾಟಗಾರರಲ್ಲಿ ಅನೇಕರ ತಲೆ ಮೇಲೆ ನೆರಳಿನ ಆಸರೆ ದೊರಕಿದೆ. ಜನರಿಗೂ ಕೊಚ್ಚೆಯ ಸಮಸ್ಯೆ ತಪ್ಪಿದೆ. ಉಣಕಲ್ಲನಲ್ಲಿ ಸಂತೆ ಸ್ಥಳವೂ ಭಿನ್ನವಾಗಿರಲಿಲ್ಲ. ವಾರಕ್ಕೊಮ್ಮೆ ನಡೆಯುವ ಸಂತೆ ಮಳೆಗಾಲದಲ್ಲಿ ಸಮಸ್ಯೆ ಹೇಳತೀರದಾಗಿತ್ತು. ಇದೀಗ ಅಲ್ಲಿಯೂ ಬೆಂಗೇರಿ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸಂತೆ ದಿನ ಸಂತೆಗೆ ಬಳಕೆ ಉಳಿದ ದಿನಗಳಲ್ಲಿ ಇತರೆ ಕಾರ್ಯಗಳಿಗೆ ಬಳಸಿಕೊಳ್ಳುವ ರೀತಿಯಲ್ಲಿ ಎರಡು ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಮಾರುಕಟ್ಟೆಗಳು ಇತರೆ ಕಡೆಗಳಿಗೆ ಮಾದರಿಯಾಗಿವೆ.
ಪ್ರತಿ ಮನೆಗೂ 24/7 ನೀರು ಪೂರೈಕೆ ಮಾಡಬೇಕೆಂಬ ಚಿಂತನೆ ಅಡಿಯಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ದೇಶದಲ್ಲಿಯೇ ಪ್ರಾಯೋಗಿಕ ಯೋಜನೆ ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೊಂಡಿತ್ತು. ಹುಬ್ಬಳ್ಳಿಯಲ್ಲಿ ನಾಲ್ಕು ಹಾಗೂ ಧಾರವಾಡದಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಆ ನಾಲ್ಕು ವಾರ್ಡ್‌ಗಳಲ್ಲಿ ಹೆಚ್ಚಿನವು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದದ್ದು ಗಮನಾರ್ಹವಾಗಿತ್ತು. ಮುಂದೆ 24/7 ನೀರು ಪೂರೈಕೆ ಯೋಜನೆ ಇತರೆ ವಾರ್ಡ್‌ಗಳಿಗೂ ವಿಸ್ತರಿಸಬೇಕೆಂಬ ಜನರ ಬೇಡಿಕೆಗೆ ಸ್ಪಂದನೆ ರೂಪದಲ್ಲಿ ಸರಕಾರ ಮೇಲೆ ಪ್ರಭಾವ ಬೀರಿ, ಒತ್ತಡ ತಂದು ಇತರೆ ವಾರ್ಡ್‌ಗಳಿಗೆ ಯೋಜನೆ ವಿಸ್ತರಣೆ ಅಲ್ಲದೆ, ಅವಳಿನಗರದ ಎಲ್ಲ 82 ವಾರ್ಡ್‌ಗಳಿಗೂ ಯೋಜನೆ ವಿಸ್ತರಣೆ. ಮಲಪ್ರಭಾ ಜಲಾಶಯದಿಂದ ಅವಳಿನಗರಕ್ಕೆ ನೀರಿನ ಕೊರತೆ ಆಗದಂತೆ ಮಲಪ್ರಭಾ ಜಲಾಶಯದಿಂದ ಸಗಟು ನೀರು ತರುವಲ್ಲಿಯೂ ಜಗದೀಶ ಶೆಟ್ಟರ ಅವರ ಪಾತ್ರ ಪ್ರಮುಖವಾಗಿದೆ.
ನಾಲಾಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ನಾಲಾಗಳಲ್ಲಿನ ಹೂಳೆತ್ತುವುದು, ಎರಡು ಕಡೆ ಗೋಡೆಗಳ ನಿರ್ಮಾಣ, ನಾಲಾ ಬದಿಯ ಜಾಗ ಹಸಿರು ಕಾರಿಡಾರ್ ಆಗಿ ಪರಿವರ್ತಿಸುವ ಕಾರ್ಯ ನಡೆಯತ್ತಿದೆ. ವಾಣಿಜ್ಯ ನಗರಿ ಎಂಬ ಖ್ಯಾತಿಯ ಹುಬ್ಬಳ್ಳಿಗೆ ಇತ್ತೀಚೆಗಿನ ವರ್ಷಗಳವರೆಗೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಒಳಚರಂಡಿ ವ್ಯವಸ್ಥೆ ನಿರ್ಮಾಣ ನಿಟ್ಟಿನಲ್ಲಿ ಜಗದೀಶ ಶೆಟ್ಟರ ಅವರ ಪರಿಶ್ರಮ, ಪಾತ್ರವೂ ಪ್ರಮುಖವಾಗಿದೆ. ಪರಿಣಾಮ ನಗರದ ಹಲವು ಪ್ರದೇಶ ಇದೀಗ ಒಳಚರಂಡಿ ವ್ಯವಸ್ಥೆಗೆ ಒಳಪಡುವಂತಾಗಿದೆ. ಮಾದರಿ ಕ್ಷೇತ್ರ ನಿಟ್ಟಿನಲ್ಲಿ ಪ್ರಯತ್ನ
ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ರಸ್ತೆಗಳ ಸುಧಾರಣೆ, ಎಲ್ಲ ವಾರ್ಡ್‌ಗಳಿಗೂ 24/7 ಕುಡಿಯುವ ನೀರು, ವಿವಿಧ ಮೂಲ ಸೌಲಭ್ಯಗಳನ್ನು ಮತ್ತಷ್ಟು ಅಳವಡಿಕೆ ಮೂಲಕ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾಗಿರುವ ಜಗದೀಶ ಶೆಟ್ಟರ ತಮ್ಮದೇ ಚಿಂತನೆ, ಯತ್ನದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ, ಜನರೊಂದಿಗೆ ನಿಕಟ ಸಂಪರ್ಕ, ಸರಳ ವ್ಯಕ್ತಿತ್ವಕ್ಕೆ ಕ್ಷೇತ್ರದ ಜನತೆ ಸತತವಾಗಿ ಆರು ಬಾರಿ ಆಯ್ಕೆ ಮಾಡಿರುವುದು ಅವರ ಮೇಲೆ ಕ್ಷೇತ್ರದ ಜನತೆ ಇರಿಸಿದ ವಿಶ್ವಾಸ, ನಂಬಿಕೆ, ಪ್ರೀತಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ.