ಧಾರವಾಡ: ಕೋವಿಡ್ 2ನೇ ಅಲೆಯ ಸೋಂಕಿತರ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಮಟ್ಟದ ಅಧಿಕಾರಿಗಳನ್ನು ಒಳಗೊಂಡಿರುವ ವಿವಿಧ ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಿಸಿ ನಿತೇಶ್ ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ಕೋವಿಡ್ ಸೋಂಕಿತರಲ್ಲಿ ಹೆಚ್ಚು ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆ ಆವರಣದಲ್ಲಿ 20 ಕೆಎಲ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ 2 ಯೂನಿಟ್ (ಒಟ್ಟು 40 ಕೆಎಲ್ ಸಾಮರ್ಥ್ಯದ) ಗಳನ್ನು ಹೊಂದಲಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಇತರ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಆಗಿರುವ ತೊಂದರೆಗಳು ಉಂಟಾಗದಂತೆ ಮುಂಜಾಗೃತೆಯಾಗಿ ಜಿಲ್ಲಾಡಳಿತವು ಆಕ್ಸಿಜನ್ ಪೂರೈಕೆಗೆ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಿದೆ ಎಂದು ತಿಳಿಸಿದ್ದಾರೆ.
ಆಕ್ಸಿಜನ್ ರ್ಯಾಪಿಡ್ ಆ್ಯಕ್ಷನ್ ಟೀಂ: ಹುಬ್ಬಳ್ಳಿ ಮತ್ತು ಧಾರವಾಡ ನಗರಕ್ಕೆ ಪ್ರತ್ಯೇಕವಾದ ಎರಡು ಆಕ್ಸಿಜನ್ ರ್ಯಾಪಿಡ್ ಆ್ಯಕ್ಷನ್ ಟೀಂ ರಚಿಸಲಾಗಿದೆ. ಗುರುವಾರ ಬೆಳಗ್ಗೆ ಈ ಆ್ಯಕ್ಷನ್ ಟೀಂಗಳ ಅಣಕು ಪ್ರದರ್ಶನ ಮಾಡಿಸಿ, ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾದರೆ ತಕ್ಷಣಕ್ಕೆ ಸ್ಪಂ ದಿಸಿ 8ರಿಂದ 10 ನಿಮಿಷದಲ್ಲಿ ಆಕ್ಸಿಜನ್‌ನೊಂದಿಗೆ ನಿಗದಿತ ಆಸ್ಪತ್ರೆಯನ್ನು ತಲುಪಲು ಅನುಕೂಲವಾಗುವಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಜಿಲ್ಲಾಡಳಿತವು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟಿದೆ.
ಯಾವುದೇ ಆಸ್ಪತ್ರೆಯಿಂದ ತಕ್ಷಣಕ್ಕೆ ಆಕ್ಸಿಜನ್ ಪೂರೈಕೆಗೆ ಪಾಲಿಕೆ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಬಂದಲ್ಲಿ ಪಾಲಿಕೆ ಅ ಧಿಕಾರಿಗಳು ರ್ಯಾಪಿಡ್ ಆ್ಯಕ್ಷನ್ ಟೀಂ ಮೂಲಕ ಆಯಾ ಆಸ್ಪತ್ರೆಗೆ ತಲುಪಿಸುತ್ತಾರೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆ ನಿರ್ವಹಣೆಗೆ ಕ್ರಮ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಸಂಬಂ ಧಿಸಿ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ತಕ್ಷಣವೇ ಭೇಟಿ ನೀಡಿ ದೋಷಗಳನ್ನು ಸರಿಪಡಿಸಲು ಅನುಭವಿ ಟೆಕ್ನಿಷಿಯನ್ ಹಾಗೂ ಮೆಕ್ಯಾನಿಕ್‌ಗಳನ್ನು ನಿಯೋಜಿಸಲು ಟಾಟಾ ಮಾರ್ಕೊಪೋಲೊ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಸುವ ಲೈನ್ಸ್ ಗಳಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಬಾರದಂತೆ ಮುಂಜಾಗೃತೆ ವಹಿಸಿ ನಿರ್ವಹಿಸಲು ಅಗತ್ಯ ತಾಂತ್ರಿಕ ಸಿಬ್ಬಂದಿ ನಿಯೋಜಿಸಲು ಹುಬ್ಬಳ್ಳಿಯ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಿಗೆ ಡಿಸಿ ನಿತೇಶ ಪಾಟೀಲ ಪತ್ರ ಬರೆದು ವಿನಂತಿಸಿದ್ದಾರೆ.