ಹುಬ್ಬಳ್ಳಿ: ರುಂಡ-ಮುಂಡ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ರಾಕೇಶ ಕಾಟವೆ ಶವವು ತನ್ನ ಕಾರಿನಲ್ಲಿದ್ದರೂ ಆತನ ಸಹೋದರಿ, ಚಿತ್ರನಟಿ ಶನಾಯಗೆ ಇದ್ಯಾವುದು ಗೊತ್ತಿರಲಿಲ್ಲವಂತೆ. ಹೀಗೆಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆಂದು ತಿಳಿದು ಬಂದಿದೆ.
ಶನಾಯ ಮತ್ತು ನಿಯಾಜ ನಡುವಿನ ಪ್ರೇಮ ವಿರೋಧಿಸುತ್ತಿದ್ದ ರಾಕೇಶನನ್ನು ತೌಸಿಫ್ ಮತ್ತು ನಿಯಾಜ ಏ.9ರಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿ, ತಾರಿಹಾಳದ ಸೇತುವೆ ಬಳಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಹಳೇಹುಬ್ಬಳ್ಳಿ ಸಿಮ್ಲಾ ನಗರಕ್ಕೆ ಶವ ತಂದು ಶಯಾನಳ ರಿಟ್ಜ್ ಕಾರಿನಲ್ಲಿಟ್ಟಿದ್ದಾರೆ. ಬೈಕ್ ಅಲ್ಲಿಯೇ ಬಿಟ್ಟಿದ್ದಾರೆ. ಇದೇ ವೇಳೆ ನಿಯಾಜ ಮತ್ತು ಶನಾಯ ತಮ್ಮ ಬಾಡಿಗೆ ಮನೆಯನ್ನು ಸಿಮ್ಲಾ ನಗರದಿಂದ ಕೇಶ್ವಾಪುರದ ಮನೋಜ್ ಪಾರ್ಕ್‌ಗೆ ಸ್ಥಳಾಂತರ ಮಾಡುತ್ತಿರುತ್ತಾರೆ. ಹೀಗಾಗಿ ರಾತ್ರಿ ಶನಾಯಳನ್ನು ಅವಳ ಕಾರಿನಲ್ಲಿ ಮನೋಜ ಪಾರ್ಕ್‌ಗೆ ಬಿಟ್ಟು ಬಂದಿದ್ದಾರೆ. ಅದರಲ್ಲಿ ಶವ ಇದ್ದದ್ದು ಅವಳಿಗೆ ಗೊತ್ತಾಗಿಲ್ಲವಂತೆ. ನಂತರ ಶಿಮ್ಲಾ ನಗರಕ್ಕೆ ಬಂದು, ಕಾರಿನಲ್ಲಿದ್ದ ಶವವನ್ನು ಬಾತ್‌ರೂಮ್‌ನಲ್ಲಿಟ್ಟಿದ್ದಾರೆ.
ರಾತ್ರಿ ತೌಸಿಫ್ ತನ್ನ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಅಫ್ತಾಬ ಮತ್ತು ನಿಯಾಜ ಶವದ ರುಂಡ-ಮುಂಡ ಬೇರ್ಪಡಿಸಿದ್ದಾರೆ. ಅದರಲ್ಲಿ ದೇಹವನ್ನು ಒಂದು ಚೀಲದಲ್ಲಿ ಹಾಗೂ ಕೈ-ಕಾಲು ಒಂದು ಚೀಲದಲ್ಲಿ ಹಾಕಿಕೊಂಡು ಸಾಕ್ಷಿ, ಪುರಾವೆ ನಾಶ ಪಡಿಸುವ ಸಲುವಾಗಿ ಮರುದಿನ ಮನಸೂರ ಬಳಿ ಶವ ಸುಟ್ಟು ಹಾಕುತ್ತಾರೆ. ಈ ವೇಳೆ ರುಂಡವು ಚೀಲದಿಂದ ಉರುಳಿ ಕಾರಿನಲ್ಲಿ ಬಿದ್ದಿರುತ್ತದೆ. ಇವರಿಗೆ ಅದು ಗೊತ್ತಾಗಿರುವುದಿಲ್ಲ. ತದನಂತರ ರುಂಡವನ್ನು ದೇವರ ಗುಡಿಹಾಳದಲ್ಲಿ ಸುಡುತ್ತಾರೆ. ಮರುದಿನ ಸುಟ್ಟ ದೇಹ ಮತ್ತು ಕೈ-ಕಾಲುಗಳನ್ನು ಚೀಲದಲ್ಲಿ ಹಾಕಿಕೊಂಡು ಇವನನ್ನು ಹೂಳಿದರಾಯಿತು ಎಂದು ಯೋಚಿಸಿ ಬೆಳಗ್ಗೆ ಕಾರಿನಲ್ಲಿಟ್ಟುಕೊಂಡು ಕೇಶ್ವಾಪುರದ ಕುಸುಗಲ್ಲ ರಸ್ತೆಗೆ ತೆಗೆದುಕೊಂಡು ಬಂದಿದ್ದಾರೆ. ತಗ್ಗು ತೆಗೆದು ಹೂಳುವಷ್ಟರಲ್ಲಿ ಗಸ್ತಿನಲ್ಲಿದ್ದ ಚಾಲುಕ್ಯ ವಾಹನ ನೋಡಿ, ಸಂಜೆ ಹೂತರಾಯ್ತು ಎಂದು ಕೈ-ಕಾಲು ಇದ್ದ ಚೀಲವನ್ನು ಪಕ್ಕದಲ್ಲಿಯೇ ಗಿಡಗಳ ಕಂಟಿಯಲ್ಲಿ ಇಟ್ಟು ಹೋಗಿದ್ದಾರೆ. ಆದರೆ ಸಂಜೆ ಹೊತ್ತಿಗೆ ಸಾರ್ವಜನಿಕರು ರುಂಡವಿಲ್ಲದ ದೇಹವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಆಗ ಇವರ ಯೋಚನೆಯೆಲ್ಲ ತಿರುವು-ಮುರುವು ಆಗಿದೆ ಎಂದು ಹೇಳಲಾಗುತ್ತಿದೆ.
ನಟಿ ಶನಾಯಗೆ ತನ್ನಣ್ಣನ ಕೊಲೆಯಾಗಿ ಇಷ್ಟೆಲ್ಲ ನಡೆದಿದ್ದರೂ ಅವಳಿಗೆ ಇದರ ಬಗ್ಗೆ ಯಾವುದೂ ಗೊತ್ತಿರಲಿಲ್ಲವಂತೆ. ಆದರೆ ನಿಯಾಜ ಓರ್ವನೊಂದಿಗೆ ಹೊಡೆದಾಡಿಕೊಂಡಿದ್ದ ಈ ವೇಳೆ ಓರ್ವನ ಕೊಲೆಯಾಗಿದೆ ಎಂಬುದಷ್ಟೆ ಗೊತ್ತಿತ್ತಂತೆ. ಏ.13ರಂದು ಓರ್ವರು ನಿಮ್ಮಣ್ಣನ ಕೊಲೆಯಾಗಿದೆ ಎಂದು ಹೇಳಿದ ನಂತರವೇ ರಾಕೇಶ ಕೊಲೆಯಾಗಿದ್ದು ಗೊತ್ತಾಯಿತು ಎಂದು ಪೊಲೀಸರ ವಿಚಾರಣೆ ವೇಳೆ ನಟಿ ಶನಾಯ ಬಾಯಿಬಿಟ್ಟಿದ್ದಾಳೆಂದು ಹೇಳಲಾಗುತ್ತಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಇಂತಹ ಕ್ರೂರ ಹತ್ಯೆ ಎಂದೂ ನಡೆದಿರಲಿಲ್ಲ. ಈ ಪ್ರಕರಣ ಭೇದಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದವರ ಪತ್ತೆಗಾಗಿ ಶೋಧ ನಡೆಸಿದ್ದಾರೆ.