Advertisement

ರೈಲಿನಲ್ಲಿ 1.50 ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ : ಉಗಾಂಡ ಮೂಲದ ಮಹಿಳೆ ಸೆರೆ

02:41 PM Jan 09, 2022 | Team Udayavani |

ಹುಬ್ಬಳ್ಳಿ: ರೈಲಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರು ವಲಯದ ಎನ್‌ಸಿಬಿ ಅಧಿಕಾರಿಗಳು ಶುಕ್ರವಾರ ರಾತ್ರಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, ಅಂದಾಜು 1.50 ಕೋಟಿ ರೂ. ಮೌಲ್ಯದ 995 ಗ್ರಾಂ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.

Advertisement

ದೆಹಲಿಯಿಂದ ಯಶವಂತಪುರಕ್ಕೆ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯು ಸೆರಾಲಾಕ್‌ ಬೇಬಿ ಫುಡ್‌ನ‌ ಎರಡು ಕಾರ್ಟೂನ್ ಗಳಲ್ಲಿ ಮಾದಕವಸ್ತು
(Methamphetamine) ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ಆರ್‌ಪಿಎಫ್‌ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ
ಮಹಿಳೆಯನ್ನು ಬಂಧಿಸಿ, 1.5 ಕೋಟಿ ರೂ. ಮೌಲ್ಯದ ಮೆಥಾಂಪೆಟಾಮೈನ್‌ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಬಂಧಿತ ಉಗಾಂಡ ಮಹಿಳೆಯು ಮಾದಕವಸ್ತುವನ್ನು ರಾಜ್ಯದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಳು. ಈ ಡ್ರಗ್ಸ್‌ ತುಂಬಾ ಅಪಾಯಕಾರಿಯಾಗಿದ್ದು, ಇದರ ಸೇವನೆಯಿಂದ ಮೆದುಳಿನ ನರ ದುರ್ಬಲಗೊಳ್ಳುವುದು, ಜ್ಞಾಪಕಶಕ್ತಿ ಕಳೆದುಕೊಳ್ಳುವುದು, ಮಾನಸಿಕ ಅಸ್ವಸ್ಥರಾಗುವುದು, ಬುದ್ಧಿಮಾಂದ್ಯರಾಗುವುದು ಹಾಗೂ ಹೃದಯಾಘಾತ ಸೇರಿದಂತೆ ಮನುಷ್ಯನ ಮೇಲೆ ಇತರೆ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಧೀಶರ ಎದುರು ಹಾಜರು
ಧಾರವಾಡ: ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದ್ದ ಉಗಾಂಡ ದೇಶದ ಮಹಿಳೆಯನ್ನು ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಎದುರು ಅವರ ನಿವಾಸದಲ್ಲಿಯೇ ಶನಿವಾರ ಹಾಜರುಪಡಿಸಲಾಯಿತು. ದೆಹಲಿಯಿಂದ ನಿಜಾಮುದ್ದೀನ್‌ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ಈ ಮಹಿಳೆಯು ಮಕ್ಕಳಿಗೆ ನೀಡುವ ಆಹಾರ ಪೊಟ್ಟಣದಲ್ಲಿ ಒಂದೂವರೆ ಕೋಟಿ ಮೌಲ್ಯದ ಮಾದಕದ್ರವ್ಯ ಇಟ್ಟು ಸಾಗಿಸುತ್ತಿದ್ದಳು. ಹುಬ್ಬಳ್ಳಿಯ ರೈಲ್ವೆ ಪೊಲೀಸರ ಸಹಕಾರದೊಂದಿಗೆ ನಾರ್ಕೋಟಿಕ್‌ ಕಂಟ್ರೋಲ್‌ ಬ್ಯುರೋ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಉಗಾಂಡಾ ದೇಶದ ಮಹಿಳೆಯನ್ನು ಭದ್ರತೆ ಮಧ್ಯೆ ನ್ಯಾಯಾಧೀಶರ ನಿವಾಸಕ್ಕೆ ಕರೆ ತಂದು ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆಯಲಾಗಿದೆ. ಮಹಿಳೆ ಸೇರಿದಂತೆ ಒಂದೂವರೆ ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ನಾರ್ಕೋಟಿಕ್‌ ಕಂಟ್ರೋಲ್‌ ಬ್ಯುರೋ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next