ಹುಬ್ಬಳ್ಳಿ: ಮಹಾನಗರ, ಜಿಲ್ಲೆಯಾದ್ಯಂತ ನಡೆಯುತ್ತಿರುವ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಯೋಜನೆಯ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಕೊರತೆ ಎದುರಾಗಿದ್ದು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬರೋಬ್ಬರಿ 200 ಕೋಟಿ ರೂ. ಬಿಲ್ ಬಾಕಿ ಉಳಿದಿದ್ದು, ಸರಕಾರದ ಈ ಕ್ರಮಕ್ಕೆ ಬೇಸತ್ತ ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.
ಮಹಾನಗರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸುವ ಕಾರಣಕ್ಕೆ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ (ಲೋಕೋಪಯೋಗಿ ಇಲಾಖೆ) ವತಿಯಿಂದ ಸುಮಾರು 442 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಕೇಂದ್ರ ಸರಕಾರ 2016ರಲ್ಲಿ ಮಂಜೂರಾತಿ ನೀಡಿತ್ತು. ಕೇಂದ್ರಮಟ್ಟದಲ್ಲಿ ಗುದ್ದಾಡಿ ಮಹಾನಗರ ಹಾಗೂ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ತರುವಲ್ಲಿ ಇಲ್ಲಿನ ಪ್ರತಿನಿಧಿಗಳ ಪ್ರಯತ್ನ ಅಲ್ಲಗಳೆಯುವಂತಿಲ್ಲ. ಆದರೆ ಆರಂಭದಿಂದಲೂ ಕಾಮಗಾರಿಗೆ ಅನುದಾನ ಕೊರತೆ ಕಾಡುತ್ತಿದ್ದರೂ ಒಂದಿಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಇದೀಗ ಬಿಲ್ ಪಾವತಿಯಾಗದ ಕಾರಣ ಅಂತಿಮ ಹಂತದ ಕಾಮಗಾರಿಗಳು ಬಾಕಿ ಉಳಿದಿವೆ.
ಇನ್ನೂ ಕೆಲವಡೆ ಅರ್ಧಕ್ಕೆ ಸ್ಥಗಿತಗೊಂಡಿವೆ. ಸಕಾಲಕ್ಕೆ ಬಿಲ್ ಪಾವತಿಯಾಗದ ಕಾರಣ ಕಾಮಗಾರಿಯೇ ಆರಂಭವಾಗಿಲ್ಲ. 2016-17ರಲ್ಲಿ ಎಲ್ಲಾ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆಯಾದರೂ ಹಣಕಾಸು ಇಲಾಖೆ ಎರಡು ಹಂತದಲ್ಲಿ ಕಾಮಗಾರಿಗಳ ಕೈಗೊಳ್ಳಲು ಅನುಮೋದನೆ ನೀಡಿತ್ತು. ಹೀಗಾಗಿ ಮೊದಲನೇ ಹಂತದಲ್ಲಿ 199 ಕೋಟಿ ರೂ. ವೆಚ್ಚದಲ್ಲಿ 16 ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಹಂತದಲ್ಲಿ 68.78 ಕಿಲೋಮೀಟರ್ ರಸ್ತೆ ಕಾಂಕ್ರೀಟಿಕರಣಗೊಳಿಸಬೇಕಿತ್ತು. ಮೊದಲ ಹಂತದ ಕಾಮಗಾರಿಗಳಿಗೆ ಬಿಲ್‌ಗಳ ಸಕಾಲಕ್ಕೆ ಪಾವತಿಯಾಗದಿದ್ದರೂ ಕಳೆದ ನಾಲ್ಕು ವರ್ಷಗಳಲ್ಲಿ 58.75 ಕಿಲೋಮೀಟರ್ ರಸ್ತೆ ಕಾಂಕ್ರೀಟಿಕರಣಗೊಂಡಿದೆ. ಇನ್ನೂ ಸುಮಾರು 9 ಕಿಮೀ ರಸ್ತೆ ಬಾಕಿ ಉಳಿದಿದೆ.
ಅನುದಾನ ಸಂಕಟ: ಎರಡನೇ ಹಂತದ ಯೋಜನೆಯಲ್ಲಿ 243 ಕೋಟಿ ರೂ. ವೆಚ್ಚದಲ್ಲಿ 46.66 ಕಿಲೋಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುರಿಯಿತ್ತು. ಆದರೆ ಇಲ್ಲಿಯವರೆಗೆ ಪೂರ್ಣಗೊಂಡಿರುವುದು ಕೇವಲ 3 ಕಿಮೀ ಮಾತ್ರ. 2017, 2018, 2019ರಲ್ಲಿ ಹಂತ ಹಂತವಾಗಿ ಟೆಂಡರ್ ಕರೆಯಲಾಗಿತ್ತು. ಆದರೆ ಸಿಆರ್‌ಎಫ್ ಯೋಜನೆಯಡಿ ಗುತ್ತಿಗೆ ಪಡೆದರೆ ಬಿಲ್ ಪಾವತಿ ಆಗಲ್ಲ ಎನ್ನುವ ಆತಂಕದಿಂದ ಕೆಲ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು. ಕೆಲವರು ಪಾಲ್ಗೊಂಡರೂ ಮೊದಲನೇ ಹಂತದ ಕಾಮಗಾರಿಯ ಬಿಲ್ ಬಾರದ ಕಾರಣ ಎರಡನೇ ಹಂತದ ಕೆಲಸಗಳಿಗೆ ಮುಂದಾಗಿಲ್ಲ. ಕೆಲ ಕಾಮಗಾರಿಗೆ ಮರು ಟೆಂಡರ್ ಕರೆಯಲಾಗುತ್ತಿದೆ. ಸುಮಾರು 200 ಕೋಟಿ ರೂ. ನಷ್ಟು ಬಾಕಿ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು.
ಭೂ ಸ್ವಾಧೀನ ನಿರ್ಲಕ್ಷ್ಯ: ರಸ್ತೆ ಅಭಿವೃದ್ಧಿಕಾಮಗಾರಿ ವಿಳಂಬಕ್ಕೆ ಅನುದಾನ ಸಮಸ್ಯೆ ಒಂದಡೆಯಾದರೆ ಸಕಾಲಕ್ಕೆ ಭೂ ಸ್ವಾಧೀನ ಮಾಡಿಕೊಳ್ಳದಿರುವುದು ಪ್ರಮುಖ ಕಾರಣವಾಗಿದೆ. ಮೊದಲೇ ಹಂತದಲ್ಲಿ ಕೈಗೊಂಡಿದ್ದ ಇಂಡಿ ಪಂಪ್-ಉಣಕಲ್ಲ, ಕಮರೀಪೇಟೆ-ಉಣಕಲ್ಲ ರಸ್ತೆ ಸೇರಿದಂತೆ ಕೆಲ ಕಾಮಗಾರಿಗಳಿಗೆ ಭೂ ಸ್ವಾಧೀನ ಸಮಸ್ಯೆಯಾಗಿ ಪರಿಣಮಿಸಿದೆ. ಮೂರ್‍ನಾಲ್ಕು ವರ್ಷದಿಂದ ಇಲ್ಲಿಯವರೆಗೂ ಅಗತ್ಯ ಸ್ಥಳಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಎಲ್ಲಾ ಗೊಂದಲಗಳಿಗೆ ತಲೆ ಕೆಡಿಸಿಕೊಳ್ಳದ ಗುತ್ತಿಗೆದಾರರು ಇದ್ದ ರಸ್ತೆಯಲ್ಲಿ ಕಾಂಕ್ರೀಟ್ ಹಾಕಿ ಕೈ ತೊಳೆದುಕೊಂಡಿದ್ದಾರೆ.
ಅರ್ಧಂಬರ್ಧ ಕೆಲಸ: ಪೂರೈಸಿದ ಕಾಮಗಾರಿಗೆ ಬಿಲ್ ಪಾವತಿಯಾಗದ ಕಾರಣ ಕಾಮಗಾರಿಗಳು ಅರ್ಧಕ್ಕೆ ನಿಂತು ವಾಹನಗಳು ಸರಾಗವಾಗಿ ಓಡಾಡುದಂತಹ ಸ್ಥಿತಿ ನಿರ್ಮಾಣವಾಗಿದ್ದು, ಕೆಲವೆಡೆ ಸವಾರರ ಪ್ರಾಣಕ್ಕೆ ಸಂಚಕಾರ ತಂದಿರುವಂತಿವೆ. ಕಾಂಕ್ರೀಟ್ ರಸ್ತೆ ಆಗಿದೆ. ಪಕ್ಕದಲ್ಲಿ ಪೇವರ್ಸ್ ಗಳಿಲ್ಲ. ಗಟಾರಿಗೆ ಸಿಮೆಂಟ್ ಬ್ಲಾಕ್ ಗಳನ್ನು ಹಾಕಿಲ್ಲ. ಸಿಆರ್‌ಎಫ್ ಯೋಜನೆಗೆ ರಸ್ತೆಗಳನ್ನು ಆಯ್ಕೆ ಮಾಡಿರುವ ಕಾರಣ ಅಡಿ ಅಳದ ಗುಂಡಿ ಬಿದ್ದಿದ್ದರೂ ಅದನ್ನು ದುರಸ್ತಿಗೆ ಯಾವ ಇಲಾಖೆ ಮುಂದಾಗುತ್ತಿಲ್ಲ. ಮೂರ್‍ನಾಲ್ಕು ವರ್ಷದ ಹಿಂದೆ ಮಂಜೂರಾದ ಕಾಮಗಾರಿಗಳ ಅನುದಾನ ಅಲಭ್ಯತೆಗೆ ಇದೀಗ ಕೋವಿಡ್ -19 ನತ್ತ ಕೈ ತೋರಲಾಗುತ್ತಿದೆ. ಯೋಜನೆ ಪೂರ್ಣಗೊಳಿಸಲು ರಾಜ್ಯ ಸರಕಾರ ಸಾಲ ಪಡೆಯಲಿದೆ ಎನ್ನುವ ಅಭಿಪ್ರಾಯಗಳಿವೆ.
ಗುತ್ತಿಗೆದಾರರ ಪಾಡು: ಸಕಾಲಕ್ಕೆ ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಬಿಲ್ ಪಾವತಿಗಾಗಿ ಇಲಾಖೆ ಕಚೇರಿಗೆ ಎಡತಾಕಿದರೂ ಅನುದಾನ ಬಂದಿಲ್ಲ ಎನ್ನುವ ಸಿದ್ಧ ಉತ್ತರ ಗುತ್ತಿಗೆದಾರರಿಗೆ ದೊರೆಯುತ್ತಿದೆ. ಕಾಮಗಾರಿ ನಿರ್ವಹಿಸಲು ಬ್ಯಾಂಕ್, ಖಾಸಗಿ ಫೈನಾನ್ಸ್ ಸೇರಿದಂತೆ ಇನ್ನಿತರೆಡೆ ಸಾಲ ಮಾಡಿದ್ದಾರೆ. ಸಕಾಲಕ್ಕೆ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬಡ್ಡಿ ಕಟ್ಟುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸರಕಾರದ ಈ ಕ್ರಮಕ್ಕೆ ಬೇಸತ್ತಿದ್ದೇವೆ. ಬಿಲ್ ಇಲ್ಲದೆ ಎಷ್ಟಂತ ಕೆಲಸ ಮಾಡಲು ಹೇಗೆ ಸಾಧ್ಯ ಎನ್ನುತ್ತಾರೆ ಗುತ್ತಿಗೆದಾರರು.
ಹೇಮರಡ್ಡಿ ಸೈದಾಪುರ