Advertisement

Hubballi: ಮೋಡ ಬಿತ್ತನೆ; ಅಧಿಕಾರಿಗಳಿಂದ ಸಿಎಂಗೆ ತಪ್ಪು ಮಾಹಿತಿ- ಎಚ್ಕೆ

05:56 PM Sep 05, 2023 | Team Udayavani |

ಹುಬ್ಬಳ್ಳಿ: ಬರಗಾಲದ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡುವುದರಿಂದ ಶೇ.15ರಿಂದ 22 ಮಳೆ ಆಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ಅವರು ಇದರ ಬಗ್ಗೆ ಒಲವು ತೋರಿಲ್ಲ. ಮೋಡ ಬಿತ್ತನೆ ಯಶಸ್ಸಿನ ಬಗ್ಗೆ ಮನವರಿಕೆ ಮಾಡುವೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಬರಮುಕ್ತ ಹಾವೇರಿ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಪಿಕೆಕೆ ಇನಿಷಿಯೇಟಿವ್ಸ್‌ ಹಾಗೂ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಸೆ.6ರ ವರೆಗೆ ಹಾವೇರಿ ವ್ಯಾಪ್ತಿಯಲ್ಲಿ ನಡೆಯುವ ಮೋಡ ಬಿತ್ತನೆಗೆ ಸೋಮವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

2003ರಲ್ಲಿ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವನಾಗಿದ್ದಾಗ 85 ದಿವಸ ಮೋಡ ಬಿತ್ತನೆ ಮಾಡಿದ್ದೆವು. ಆಗ 60ಕ್ಕೂ ಹೆಚ್ಚು ದಿವಸಗಳ ಯಶಸ್ಸು ಕಂಡಿತ್ತು. ಅಮೆರಿಕದಿಂದ ಬಂದಿದ್ದ ತಂತ್ರಜ್ಞರು ಪ್ರಶಂಸೆ ವ್ಯಕ್ತಪಡಿಸಿದ್ದರು. 2003, 2008, 2017-18ರಲ್ಲಿ ನಡೆಸಿದ ಮೋಡ ಬಿತ್ತನೆಯಿಂದ ರೈತರಿಗೆ ಅನುಕೂಲವಾಗಿದೆ. ಹೀಗಾಗಿ ರಾಜ್ಯಾದ್ಯಂತ ಮೋಡ ಬಿತ್ತನೆ ನಡೆಸುವ ಕುರಿತು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡುವೆ. ಇದರ ಬಗ್ಗೆ ಅಧಿಕಾರಿಗಳು ಪೂರಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಿಎಂ ಅವರು ಆ ರೀತಿಯ ಹೇಳಿಕೆ ನೀಡಿರಬಹುದು ಎಂದರು.

ಗದಗ ಜಿಲ್ಲೆಯಲ್ಲೂ ಚಿಂತನೆ:
ಜನರಿಗೆ ಮತ್ತು ರೈತರಿಗೆ ಒಳಿತು ಮಾಡಲು ಮೋಡ ಬಿತ್ತನೆ ಕಾರ್ಯಕ್ರಮವನ್ನು ಶಾಸಕ ಪ್ರಕಾಶ ಕೋಳಿವಾಡ ಕುಟುಂಬದ ಮಾರ್ಗದರ್ಶನ ಜೊತೆಗೆ ಹಾವೇರಿ ಜಿಲ್ಲೆಯ ಶಾಸಕರು ಆರಂಭಿಸಿದ್ದಾರೆ. ಹಾವೇರಿ, ರಾಣಿಬೆನ್ನೂರು ತಾಲೂಕುಗಳಲ್ಲಿ ಮೋಡದ ಲಭ್ಯತೆ, ಗುಣಮಟ್ಟ ನೋಡಿ ಶೀತ ಮತ್ತು ಬೆಚ್ಚಗಿನ ಮೋಡ ಬಿತ್ತನೆ ಮಾಡುತ್ತೇವೆ ಎಂದು ವಿಮಾನದ ಕ್ಯಾಪ್ಟನ್‌ ಹೇಳಿದ್ದಾರೆ. ಗದಗ ಜಿಲ್ಲೆಗೂ ಮುಂಗಾರು ಅಭಾವ ಕಂಡುಬಂದಿದ್ದು, ಗದಗ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ಮಾಡಲು ಪರಿಗಣಿಸಿ ಎಂದು ಮನವಿ ಮಾಡಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಪ್ರಕಾಶ ಕೋಳಿವಾಡ ಅವರು ಮೋಡ ಲಭ್ಯತೆ ಮತ್ತು ರೈತರ ಬೇಡಿಕೆಗೆ ಅನುಗುಣವಾಗಿ ಗದಗ ಸೇರಿದಂತೆ ಧಾರವಾಡ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡುವ ಭರವಸೆ ನೀಡಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಲಿ ಎಂದು ಹೇಳಿದರು.

ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಮಾಜಿ ಸಂಸದ ಐ.ಜಿ. ಸನದಿ, ಯಾಸಿರಖಾನ ಪಠಾಣ, ಪಿಕೆಕೆ ಇನಿಷಿಯೇಟಿವ್ಸ್‌ ನಿರ್ದೇಶಕಿ ಪೂರ್ಣಿಮಾ ಕೋಳಿವಾಡ, ಹಾವೇರಿ ಜಿಪಂ ಸಿಇಒ ಶ್ರೀಧರ ಮೊದಲಾದವರಿದ್ದರು.

Advertisement

ಕೇಂದ್ರದಿಂದ ರೈತ ವಿರೋಧಿ ನೀತಿ
ಬರಗಾಲ ಘೋಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ರೂಪಿಸಿದೆ. ಈ ಬಗ್ಗೆ ರಾಜ್ಯದಲ್ಲಿನ ಕೇಂದ್ರ ಸಚಿವರು ಮತ್ತು ಸಂಸದರು ಪ್ರಶ್ನಿಸುತ್ತಿಲ್ಲ. ಕೇಂದ್ರದ ನೀತಿ-ನಿಯಮದಿಂದ ರಾಜ್ಯ ಸರ್ಕಾರ ಕಟ್ಟಿಹಾಕಿದಂತಾಗಿದ್ದು, ಇದು ಸರಿಯಾದ ಕ್ರಮವಲ್ಲ. ಈ ನಿಯಮ ಬದಲಾಯಿಸುವಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರದ ಮೇಲೆ ಒತ್ತಡ ಹಾಕಲಾಗಿದೆ. ಈ ನಡುವೆಯೂ ರಾಜ್ಯ ಸರ್ಕಾರ ಮಾತ್ರ ಬರಗಾಲ ಘೋಷಣೆ ಸಂಬಂಧಿಸಿದಂತೆ ಸುದೀರ್ಘ‌ ಚರ್ಚೆ ನಡೆಸುತ್ತಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next