Advertisement

ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತ ಬೇಡಿ

05:37 PM Nov 12, 2018 | Team Udayavani |

ಹುಬ್ಬಳ್ಳಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಯಾವುದೇ ಕಾರಣಕ್ಕೂ ಜಾತಿ ಎಂಬ ವಿಷ ಬೀಜ ಅವರಲ್ಲಿ ಬಿತ್ತಬೇಡಿ ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದರು. ಚೇತನ ಪ್ರಕಾಶನ ಹಾಗೂ ಓ ಮನಸೇ ಪಾಕ್ಷಕಿ ಪತ್ರಿಕೆ ಆಶ್ರಯದಲ್ಲಿ ಇಲ್ಲಿನ ವಿದ್ಯಾನಗರ ಕನಕದಾಸ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರವಿವಾರ ನಡೆದ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನ-2018 ಉ°ದ್ದೇಶಿಸಿ ಅವರು ಮಾತನಾಡಿ, ಜೀವನದಲ್ಲಿ ಒಂದು ಗುರಿ, ಇನ್ನೊಂದು ಗುರು ಇವುಗಳನ್ನು ಇಟ್ಟುಕೊಂಡು ಮುಂದೆ ಸಾಗಿದಲ್ಲಿ ಎಂತಹ ಕಷ್ಟಗಳು ಇದ್ದರೂ ನಿರಾಂತಕವಾಗಿ ಎದುರಿಸಬಹುದು ಎಂದರು.

Advertisement

ಮಕ್ಕಳಿಗೆ ಆರಂಭದಲ್ಲೇ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು.ನನಗೆ ಚಿಕ್ಕವನಿದ್ದಾಗಲಿಂದಲೂ ಓದುವುದು, ಬರೆಯುವುದು ಮುಖ್ಯ ಹವ್ಯಾಸವಾಗಿತ್ತು. ಚಿಕ್ಕವನಿದ್ದಾಗ ಸುಮಾರು 380 ರೂ. ಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಹೋದ ನಾನು ಇದೀಗ ಸುಮಾರು 120 ಕೋಟಿ ರೂ.ಗಳ ಒಡೆಯನಾಗಿದ್ದೇನೆ ಎಂದರು.

ನನ್ನ ಮಗಳಾದ ಭಾವನಾ ಬೆಳಗೆರೆ ಇದೀಗ ಓ ಮನಸೇ ಪಾಕ್ಷಿಕ ಪತ್ರಿಕೆ ನಡೆಸುತ್ತಿದ್ದು, ಈ ಪತ್ರಿಕೆಯನ್ನು ಎಲ್ಲ ವಯಸ್ಸಿನ ಮಹಿಳೆಯರು ಓದಬಹುದು. ಅವರಿಗೆ ಬೇಕಾದ ಎಲ್ಲ ಮಾಹಿತಿಗಳು ಈ ಪತ್ರಿಕೆಯಲ್ಲಿ ಅಡಕವಾಗಿವೆ ಎಂದರು. ಇದಕ್ಕೂ ಪೂರ್ವದಲ್ಲಿ ಮಹಿಳೆಯರಲ್ಲಿ ಕಾಡುವ ಬ್ರೆಸ್ಟ್‌ ಕ್ಯಾನ್ಸರ್‌ ರೋಗ ಕುರಿತು ಮಾತನಾಡಿದರು.

ಸಮ್ಮೇಳನಾಧ್ಯಕ್ಷೆ ಡಾ| ಮೈತ್ರೇಯಿಣಿ ಗದಿಗೆಪ್ಪಗೌಡ್ರ ಮಾತನಾಡಿ, ಮಹಿಳಾ ಸಾಹಿತ್ಯದ ಒಳಹೊರಗನ್ನು ಸ್ತ್ರೀವಾದದ ಸೀಮಿತ ಚೌಕಟ್ಟಿನಲ್ಲಿಅರ್ಥೈಸಿಕೊಂಡರೆ ನಿಜಕ್ಕೂ ಅದು ದುರಂತವೇ ಸರಿ. ಇತಿಹಾಸದುದ್ದಕ್ಕೂ ದಾಖಲೀಕರಣಕ್ಕೆ ಒಳಪಡದೆ ಸ್ಥಾಪಿತ ಮೌಲ್ಯಗಳ ವ್ಯವಸ್ಥೆಯಲ್ಲಿಯೇ ಹೆಣ್ಣು ತನ್ನನ್ನೂ ಶೋಧಿಸುವ ಹೊರಟ ಪಯಣ ಎಂಥದ್ದು ಎಂಬ ಅರಿವು ನಮಗಾಗುತ್ತದೆ ಎಂದರು.

ಐಟಿ-ಬಿಟಿ ಕ್ಷೇತ್ರದ ಲೈಂಗಿಕ ಶೋಷಣೆಗಳಿಂದ ಹಿಡಿದು ಹೆಣ್ಣು ಪಾಲ್ಗೊಳ್ಳುವ ಎಲ್ಲ ಕ್ಷೇತ್ರಗಳಲ್ಲೂ ದ್ವಿತೀಯ ಲಿಂಗಿಯಾಗಿ ಮತ್ತು ಲೈಂಗಿಕತೆ, ಕಾಮದ ಸಂಕೇತವಾಗಿಯೇ ಬಿಂಬಿಸುತ್ತಿರುವುದು ದುರಂತವೇ ಸರಿ. ಈ ನಿಟ್ಟಿನಲ್ಲಿ ಮಹಿಳಾ ಸಾಹಿತ್ಯದ ನಿಜವಾದ ಅಂತಃಸತ್ವದ ಅಭಿವ್ಯಕ್ತಿ ಯಾವ ದೃಷ್ಟಿಕೋನದಿಂದ ತೆರೆದುಕೊಳ್ಳುತ್ತಿದೆ ಎಂಬ ಅರಿವು ಮುಖ್ಯ ಎಂದರು. ನಿರ್ದಿಷ್ಟ ವಯೋಮಾನದ ಹೆಣ್ಣು ಮಕ್ಕಳು ಶಬರಿಮಲೆ ದೇವಸ್ಥಾನಕ್ಕೆ ತೆರಳುವಂತಿಲ್ಲ ಎಂಬ ವಾದ ತುಂಬಾ ಹಳೆಯದು. ಸಮಾನತೆಯ ಪರಿಕಲ್ಪನೆ ಅಡಿಯಲ್ಲಿ ಸಂವಿಧಾನಾತ್ಮಕವಾಗಿ ಲಿಂಗಾಧಾರಿತ ತಾರತಮ್ಯಗಳು ವರ್ಜ್ಯ. ಆದರೆ ಸ್ಥಾಪಿತ ಮೌಲ್ಯಗಳು ಹಾಗೂ ವ್ಯವಸ್ಥಿತ ಹುನ್ನಾರಗಳು ಮುಟ್ಟು-ಹುಟ್ಟುಗಳು ದುರಂತಗಳನ್ನು ಮತ್ತೇ ಮತ್ತೇ ಮೆಲಕು ಹಾಕುತ್ತಿರುವುದು ವಿಷಾದದ ಸಂಗತಿ ಎಂದರು. ಮಹಿಳಾ ಸ್ವಾತಂತ್ರ್ಯ ಕುರಿತು ಎಲ್ಲರೂ ಜಾಗೃತಿಗೊಳ್ಳುವುದು ಅವಶ್ಯ ಎಂದರು.

Advertisement

ಗದಗ ಜಿಪಂ ಸದಸ್ಯೆಶೋಭಾ ಮೇಟಿ ಮಾತನಾಡಿ, ಹೆಣ್ಣು ಎಂದು ತಾತ್ಸಾರ ಮಾಡದೇ ಅವಳಿಗೂ ಅವಕಾಶ ನೀಡಿ ಪ್ರೋತ್ಸಾಹಿಸಿ ಬೆಳೆಸಿದರೆ, ಅವಳು ಕೂಡಾ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾಳೆ ಎಂದರು. ಓ ಮನಸೇ ಪಾಕ್ಷಿಕ ಪತ್ರಿಕೆಯ ಸಹ ಸಂಪಾದಕಿ ಭಾವನಾ ಬೆಳಗೆರೆ ಮಾತನಾಡಿದರು .

ಇದೇ ಸಂದರ್ಭದಲ್ಲಿ ಸಂತೋಷಕುಮಾರ ಮೆಹಂದಳೆ, ಅಕ್ಕಮಹಾದೇವಿ ಹಾರೋಗೇರಿ, ಉಷಾ ಬೆಳ್ಳಟಿ, ಪ್ರೇಮಾ ಭಜಂತ್ರಿ ಅವರು ರಚಿಸಿದ ಯಾವ ಪ್ರೀತಿಯೋ ಅನೈತಿಕವಲ್ಲ, ಪ್ರೇಮಾತರಂಗ, ಅವಳೆಂದರೆ ಕೃತಿಗಳು ಲೋಕಾರ್ಪಣೆಗೊಂಡವು. ನಂತರ ಸರೋಜನಿ ಭದ್ರಾಪುರ, ಮಂಗಳಾ ನರವಣಿ, ಪೀರಸಾಬ ನದಾಫ್, ಡಾ| ರಾಜೇಂದ್ರ ಗಡಾದ ಮತ್ತಿತರರನ್ನು ಸನ್ಮಾನಿಸಲಾಯಿತು. ಶರಣಪ್ಪ ಬೇವಿನಕಟ್ಟಿ, ಡಾ| ಜಿ ದೇವೆಂದ್ರಪ್ಪ ಮತ್ತಿತರರು ಮಾತನಾಡಿದರು. ನಂತರ ವಿವಿಧ ಗೋಷ್ಠಿ ನಡೆಸಲಾಯಿತು. ಸುರೇಶ ಕೊರಕೊಪ್ಪ, ಗಂಗಾಧರ ಯಾವಗಲ್ಲಮಠ, ಚಂದ್ರಶೇಖರ ಮಾಡಲಗೇರಿ, ಗೀತಾ ಯಾಳಗಿ, ಗುಡದಯ್ಯ ನವಲೂರ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next