Advertisement

ಆಮೆಗತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ

04:56 PM Dec 13, 2018 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಇದುವರೆಗೆ ಒಟ್ಟು 220 ಕೋಟಿ ರೂ. ಬಿಡುಗಡೆಯಾಗಿದ್ದರೂ, ಇಲ್ಲಿವರೆಗೆ ವೆಚ್ಚವಾಗಿದ್ದು ಕೇವಲ 12.08 ಕೋಟಿ ರೂ. ಮಾತ್ರ. ಇದು ಸ್ಮಾರ್ಟ್‌ಸಿಟಿ ಯೋಜನೆ ಆಮೆಗತಿಯಲ್ಲಿ ಸಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

Advertisement

 ಸ್ಮಾರ್ಟ್‌ಸಿಟಿ ಯೋಜನೆ ಸೌಲಭ್ಯ ಪಡೆಯಲು ಎಲ್ಲ ರೀತಿಯ ಅರ್ಹತೆ ಇದ್ದರೂ ಹುಬ್ಬಳ್ಳಿ-ಧಾರವಾಡ ಯೋಜನೆಯ ಮೊದಲ ಪಟ್ಟಿಯಲ್ಲಿ ಹೆಸರು ಪಡೆಯದಾದಾಗ ಆಕ್ರೋಶ ವ್ಯಕ್ತವಾಗಿತ್ತು. ಎರಡನೇ ಪಟ್ಟಿಯಲ್ಲಿ ಅವಳಿನಗರ ಹೆಸರು ಸೇರ³ಡೆಯಾದಾಗ ನೆಮ್ಮದಿ ಮೂಡಿಸಿತ್ತಾದರೂ, ಯೋಜನೆಯ ವೇಗ ಕಂಡು ಇದೀಗ ಜನರು ತೀವ್ರ ಆಕ್ರೋಶ ಪಡುವಂತಾಗಿದೆ.

ಯೋಜನೆ ಕುರಿತಾಗಿ ಸಾರ್ವಜನಿಕರಿಗೆ ಇರಲಿ, ಸ್ವತಃ ಸಂಸದರು, ಶಾಸಕರು, ಮಹಾಪೌರ, ಪಾಲಿಕೆ ಸದಸ್ಯರಿಗೆ ಸ್ಪಷ್ಟ ಮಾಹಿತಿ ಇಲ್ಲದ ಸ್ಥಿತಿ ಇದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಯಾವ ಯೋಜನೆ, ಎಲ್ಲಿ ತೆಗೆದುಕೊಳ್ಳಲಾಗಿದೆ. ಅದರ ಪ್ರಗತಿ ಏನಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ಜನ ಕೇಳಿದರೆ ಏನೆಂದು ಉತ್ತರಿಸಬೇಕು ಎಂಬ ಪ್ರಶ್ನೆ ಜನಪ್ರತಿನಿಧಿಗಳದ್ದಾಗಿದೆ.

ಶೇ.10ರಷ್ಟು ವೆಚ್ಚವಿಲ್ಲ: ಸ್ಮಾರ್ಟ್‌ಸಿಟಿ ಯೋಜನೆಗೆ ಅನುದಾನದ ಕೊರತೆ ಇಲ್ಲ. ಐದು ವರ್ಷಗಳಲ್ಲಿ ರಾಜ್ಯ ಸರಕಾರ 500 ಕೋಟಿ ರೂ., ಕೇಂದ್ರ ಸರಕಾರ 500 ಕೋಟಿ ರೂ. ಅನುದಾನವನ್ನು ಮೂಲ ಸೌಕರ್ಯಗಳಿಗೆ ನೀಡುತ್ತಿದ್ದು, ವಿವಿಧ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವುದು ಯೋಜನೆಯ ಪ್ರಮುಖ ಅಂಶವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ರಾಜ್ಯ-ಕೇಂದ್ರ ಸರಕಾರಗಳ ಅನುದಾನ ಸೇರಿದಂತೆ ಒಟ್ಟಾರೆ 1,600 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಇದೇ ವರ್ಷದ ನವೆಂಬರ್‌ವರೆಗೆ ರಾಜ್ಯ ಸರಕಾರ 109 ಕೋಟಿ ರೂ. ಹಾಗೂ ಕೇಂದ್ರ ಸರಕಾರ 111 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿವೆ.

ನವೆಂಬರ್‌ ಕೊನೆವರೆಗೆ ಬಿಡುಗಡೆಯಾದ ಒಟ್ಟು 220 ಕೋಟಿ ರೂ.ದಲ್ಲಿ ವೆಚ್ಚವಾಗಿರುವುದು ಕೇವಲ 12.08 ಕೋಟಿ ರೂ. ಮಾತ್ರ. ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು ಎಸ್‌ಸಿಎಂ ಅನುದಾನಿತ ಪ್ರೊಜೆಕ್ಟ್ ಅಡಿಯಲ್ಲಿ 48 ಕಾಮಗಾರಿ, ಪಿಪಿಪಿ ಮಾದರಿಯಲ್ಲಿ 4 ಹಾಗೂ ಕನ್ವಜನ್ಸ್‌ ಪ್ರೊಜೆಕ್ಟ್ ಅಡಿಯಲ್ಲಿ 5 ಒಟ್ಟು 57 ಕಾಮಗಾರಿಗಳನ್ನು 1,397.77 ಕೋಟಿ ರೂ. ವೆಚ್ಚದಲ್ಲಿ ತೆಗೆದುಕೊಳ್ಳಲು ಯೋಜಿಸಲಾಗಿದೆ.

Advertisement

ಎಸ್‌ಸಿಎಂ ಅಡಿಯಲ್ಲಿ ಇದುವರೆಗೆ ಎಸ್‌ಪಿವಿ ವೆಬ್‌ಸೈಟ್‌ನ್ನು ಅನಾವರಣಗೊಳಿಸಲಾಗಿದೆ. ಅವಳಿನಗರದ ವಿವಿಧ ಕಡೆಯಗಳಲ್ಲಿ ಸುಮಾರು 15 ಇ-ಶೌಚಾಲಯ ನಿರ್ಮಿಸಲಾಗಿದ್ದು ಅವುಗಳ ಉದ್ಘಾಟನೆ ಆಗಬೇಕಾಗಿದೆ. ರಾಜನಾಲಾಗಳ ಅಭಿವೃದ್ಧಿ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಅದೇ ರೀತಿ ಮಳೆನೀರು ಕೊಯ್ಲು ಯೋಜನೆಯಡಿ ಶೇ.65ರಷ್ಟು ಕಾರ್ಯ ಕೈಗೊಳ್ಳಲಾಗಿದೆ. ಲೋಕಲ್‌ ಸಿಸ್ಟಮ್‌ ಇಂಟಿಗ್ರೇಟರ್‌ ಅಂದಾಜು 43.93 ಕೋಟಿ ರೂ. ವೆಚ್ಚದ್ದಾಗಿದ್ದು, ನವೆಂಬರ್‌ 19ರಂದು ಕೆಲಸಾದೇಶ ನೀಡಲಾಗಿದೆ. ಸ್ಯಾನಿಟರಿ ನ್ಯಾಪಕಿನ್‌ ತಯಾರಿ ಯಂತ್ರಗಳ ಸ್ಥಾಪನೆಗೂ ನ.19ರಂದು ಕೆಲಸಾದೇಶ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿನ ಈಜುಕೊಳ ಪುನರ್‌ ಅಭಿವೃದ್ಧಿ ನಿಟ್ಟಿನಲ್ಲಿ 2.43 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ತಾಂತ್ರಿಕ ಬಿಡ್‌ ಸ್ವೀಕರಿಸಲಾಗಿದೆ. ಲೋಕಲ್‌ ಸಿಸ್ಟಮ್‌ ಇಂಟಿಗ್ರೇಟರ್‌ ಸಿವಿಲ್‌ ಕಾಮಗಾರಿಗೂ ತಾಂತ್ರಿಕ ಬಿಡ್‌ ಸ್ವೀಕಾರಗೊಂಡಿದೆ. ಇಂದಿರಾ ಗಾಜಿನ ಮನೆ ಆವರಣದ ಮಹಾತ್ಮಗಾಂಧಿ ಉದ್ಯಾನವನ ಪುನರ್‌ ಅಭಿವೃದ್ಧಿ ಹಾಗೂ ನೆಹರು ಮೈದಾನ ಸುಧಾರಣೆಯನ್ನು ಕ್ರಮವಾಗಿ 14.7 ಕೋಟಿ ರೂ. ಹಾಗೂ 13 ಕೋಟಿ ರೂ.ಗಳಲ್ಲಿ ಕೈಗೊಳ್ಳಲು ಯೋಜಿಸಲಾಗಿದ್ದು, ತಾಂತ್ರಿಕ ಬಿಡ್‌ ತೆರೆಯಲಾಗಿದೆ. ಕೋರ್ಟ್‌ ವೃತ್ತದ ಬಳಿ ಬಹುಪಯೋಗಿ ಕಾರು ನಿಲುಗಡೆ ಕಟ್ಟಡಕ್ಕೆ ಇತ್ತೀಚೆಗೆ ಕೆಲಸಾದೇಶ ನೀಡಲಾಗಿದೆ.

ಸ್ಮಾರ್ಟ್‌ ಪೋಲ್‌, ಸ್ಮಾರ್ಟ್‌ ಹೆಲ್ತ್‌ಕೇರ್‌, ವಿದ್ಯುತ್‌ ಚಿತಾಗಾರ, ಸ್ಮಾರ್ಟ್‌ ರಸ್ತೆಗಳು, ಮಾರುಕಟ್ಟೆ ಅಭಿವೃದ್ಧಿ ಹೀಗೆ ವಿವಿಧ ಯೋಜನೆಗಳು ಇನ್ನು ಸ್ಪಷ್ಟ ರೂಪ ಪಡೆದುಕೊಳ್ಳಬೇಕಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಕುರಿತಾಗಿ ಅಧಿಕಾರಿಗಳು ವೇಗ ಹೆಚ್ಚಿದೆ ಎಂದು ಹೇಳುತ್ತಿದ್ದಾರೆಯಾದರು, ಜನಪ್ರತಿನಿಧಿಗಳು ಹಾಗೂ ಜನರಿಗೆ ಮಾತ್ರ ಅದರ ಸಾಕ್ಷಿಗಳು ಮಾತ್ರ ಗೋಚರಿಸುತ್ತಿಲ್ಲ. ಜನಪ್ರತಿನಿಧಿಗಳ ಸಲಹೆ, ಮಾಹಿತಿ ಪಡೆಯದೆ ಕೈಗೊಂಡಿರುವ ಕೆಲವೊಂದು ಕಾಮಗಾರಿಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.

ತೋಳನಕೆರೆಯನ್ನು ಈಗಾಗಲೇ 5-6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಅದೇ ಕೆರೆಗೆ ಸ್ಮಾರ್ಟ್‌ ಸಿಟಿ ಯೋಜನೆ ಮುಂದಾಗಿದೆ. ಅಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಸ್ವಯಂ ನಿರ್ವಹಣೆ ಕ್ರಮಕ್ಕೆ ಗಮನ ನೀಡದೆ ಮತ್ತೆ ಹಣ ವೆಚ್ಚ ಮಾಡಲು ಮುಂದಾಗಿರುವುದಕ್ಕೆ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ವೇಗ ಕಂಡೀತೆ?
ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಗೆ ಪ್ರತ್ಯೇಕ ಕಂಪೆನಿ ಮಾಡಿ ಅದಕ್ಕೆ ಒಬ್ಬರು ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಸೃಷ್ಟಿಸಲಾಗಿತ್ತು. ಯೋಜನೆ ವಿಶೇಷಾಧಿಕಾರಿ ನೇಮಕ ಬಿಟ್ಟರೆ ಪ್ರಮುಖ ಸ್ಥಾನದ ಹುದ್ದೆಗಳಲ್ಲಿ ಪೂರ್ಣಾವಧಿ ಅಧಿಕಾರಿಗಳು ಇಲ್ಲಿವರೆಗೆ ಇರಲಿಲ್ಲ. ಪಾಲಿಕೆ ಆಯುಕ್ತರೇ ಹೆಚ್ಚವರಿಯಾಗಿ ಸ್ಮಾರ್ಟ್‌ಸಿಟಿ ಎಂಡಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪಾಲಿಕೆ ನಿಭಾಯಿಸುವುದೇ ಕಷ್ಟ ಎನ್ನುವಾಗ ಸ್ಮಾರ್ಟ್‌ ಜವಾಬ್ದಾರಿಯ ಹೊರೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿತ್ತು. ಇದೀಗ ಸ್ಮಾರ್ಟ್‌ಸಿಟಿಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ಬಂದಿದ್ದು, ಇಂಜಿನಿಯರ್‌ಗಳ ನೇಮಕವೂ ಆಗಿದೆ. ಇನ್ನಾದರೂ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ವೇಗ ತೀವ್ರವಾಗಲಿದೆಯೇ ಎಂಬ ನಿರೀಕ್ಷೆ ಜನಪ್ರತಿನಿಧಿಗಳು ಹಾಗೂ ಅವಳಿನಗರದ ಜನತೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next