Advertisement

ಪಾರ್ಕಿಂಗ್‌ ಟವರ್‌ಗೆ ಅಂತೂ ಕೂಡಿಬಂತು ಮುಹೂರ್ತ

05:25 PM Dec 01, 2018 | |

ಹುಬ್ಬಳ್ಳಿ: ಇಲ್ಲಿನ ಕೋರ್ಟ್‌ ವೃತ್ತದ ಬಳಿಯ ಖಾಲಿ ಜಾಗದಲ್ಲಿ ಹಲವು ವರ್ಷಗಳ ನಿರೀಕ್ಷಿತ ಬಹುಮಹಡಿ ಕಾರು-ಬೈಕ್‌ ಪಾರ್ಕಿಂಗ್‌ ಕಟ್ಟಡಕ್ಕೆ ಮುಹೂರ್ತ ಕೂಡಿ ಬಂದಂತಿದೆ. ಸುಮಾರು 50 ಕೊಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌(ಮಲ್ಟಿ ಲೆವಲ್‌ ಕಾರ್‌ ಪಾರ್ಕಿಂಗ್‌) ಕಟ್ಟಡ ನಿರ್ಮಿಸಲಾಗುತ್ತದೆ. ಕಟ್ಟಡ ನಿರ್ಮಾಣ-ನಿರ್ವಹಣೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸ್ಥಳೀಯ ನಿರ್ಮಾಣ ಸಂಸ್ಥೆ ಸುರೇಶ ಎಂಟರಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌(ಎಸ್‌ಇಪಿಎಲ್‌) ಕಾಮಗಾರಿ ಗುತ್ತಿಗೆ ಪಡೆದಿದೆ.

Advertisement

ಪಾಲ್ಗೊಂಡಿದ್ದು ಒಂದೇ ಸಂಸ್ಥೆ: ಕೋರ್ಟ್‌ ವೃತ್ತಕ್ಕೆ ಹೊಂದಿಕೊಂಡಿರುವ ಸುಮಾರು 1.5 ಎಕರೆ ಜಾಗದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌ ನಿರ್ಮಾಣ ಹಲವು ವರ್ಷಗಳ ಹಿಂದಿನ ಯೊಜನೆ. ಪಿಪಿಪಿ ಮಾದರಿಯಲ್ಲಿ 2 ಬಾರಿ ಟೆಂಡರ್‌ ಕರೆದರೂ ಯಾರೂ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಮತ್ತೊಮ್ಮೆ ಹು-ಧಾ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಕಂಪೆನಿ ಟೆಂಡರ್‌ ಕರೆದಿತ್ತು. ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಏಕೈಕ ಸಂಸ್ಥೆ ಎಸ್‌ಇಪಿಎಲ್‌ ಆಗಿದ್ದು, ಎರಡು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಷರತ್ತು ವಿಧಿಸಲಾಗಿದೆ.

375 ಕಾರು ಪಾರ್ಕಿಂಗ್‌: 2 ಕೆಳ ಅಂತಸ್ತಿನ ಬೇಸ್‌ ಮೆಂಟ್‌, ನೆಲಮಹಡಿ, 1ನೇ ಮಹಡಿ ಹಾಗೂ 2ನೇ ಮಹಡಿ ಒಳಗೊಂಡ ಬಹುಅಂತಸ್ತಿನ ಪಾರ್ಕಿಂಗ್‌ ಕಟ್ಟಡ ಇದಾಗಲಿದೆ. ನೆಲಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಬರಲಿದೆ. ಉಳಿದ ಎಲ್ಲ ಮಹಡಿಗಳಲ್ಲೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸುಮಾರು 375 ಕಾರು ಪಾರ್ಕಿಂಗ್‌ಗೆ ಸ್ಥಳಾವಕಾಶ ಇರುವಂತೆ ಕಟ್ಟಡ ವಿನ್ಯಾಸಗೊಳಿಸಲಾಗಿದೆ. ಗುತ್ತಿಗೆ ಕರಾರಿನಂತೆ ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಸುರೇಶ ಎಂಟರ್‌ಪ್ರೈಸಸ್‌ ಪ್ರವೇಟ್‌ ಲಿಮಿಟೆಡ್‌(ಎಸ್‌ ಇಪಿಎಲ್‌) ಅವರಿಗೆ ಅವಕಾಶ ನೀಡಲಾಗಿದೆ. ಕೇವಲ ಕಾರು ಪಾರ್ಕಿಂಗ್‌ ಅಷ್ಟೇ ಅಲ್ಲದೇ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಲಭ್ಯವಾಗಲಿದೆ. ಪ್ರತಿ ಕಾರಿಗೆ 18 ಚದರ ಮೀಟರ್‌ನಂತೆ ಸ್ಥಳ ನಿಗದಿ ಪಡಿಸಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

ಪಿಪಿಪಿ ಮಾದರಿ ನಿರ್ಮಾಣ: ಪಾರ್ಕಿಂಗ್‌ ಟವರ್‌ ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ 10 ಕೋಟಿ ರೂ. ನೀಡಿದರೆ, ಇನ್ನುಳಿದ 40 ಕೋಟಿ ರೂ.ವನ್ನು ಟೆಂಡರ್‌ ಪಡೆದ ಸಂಸ್ಥೆ ತೊಡಗಿಸಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಡುವ ಅನುದಾನವನ್ನು ನಿರ್ಮಾಣದ ವಿವಿಧ ಹಂತದಲ್ಲಿ ವೆಚ್ಚದ ಶೇ. 25ರಂತೆ ಹಣವನ್ನು ಕಂಪನಿ ಬಿಡುಗಡೆ ಮಾಡಲಿದೆ.

ನಿರ್ಮಾಣದ ಬಳಿಕ ಇದರ ನಿರ್ವಹಣೆಯ ಹೊಣೆಯನ್ನು 30 ವರ್ಷಗಳ ಅವಧಿಗೆ ಸಂಸ್ಥೆ ವಹಿಸಿಕೊಂಡಿದೆ. ಪಾರ್ಕಿಂಗ್‌ ಶುಲ್ಕ, ವಾಣಿಜ್ಯ ಮಳಿಗೆ ಬಾಡಿಗೆ ಹಾಗೂ ಡಿಜಿಟಲ್‌ ಜಾಹೀರಾತು ಫ‌ಲಕಗಳ ಶುಲ್ಕದಿಂದ ಟೆಂಡರ್‌ ಪಡೆದ ಸಂಸ್ಥೆ ಆದಾಯ ಪಡೆಯಲಿದೆ. ಗುತ್ತಿಗೆ ಕರಾರಿನಂತೆ ಸಂಸ್ಥೆ ವಾರ್ಷಿಕ ರಿಯಾಯಿತಿ ಶುಲ್ಕವಾಗಿ ಪಾಲಿಕೆಗೆ 67ಲಕ್ಷ ರೂ. ಪಾವತಿಸಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಮೊತ್ತದಲ್ಲಿ ಶೇ. 15 ಏರಿಕೆಯಾಗಲಿದೆ.

Advertisement

ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌ ನಿರ್ಮಾಣ ಕಾಮಗಾರಿಯ ಕಾರ್ಯಾದೇಶವನ್ನು ಇನ್ನೆರಡು ದಿನಗಳಲ್ಲಿ ಎಸ್‌ಇಪಿಎಲ್‌ ಗೆ ನೀಡಲಿದ್ದೇವೆ. ನಿರ್ಮಾಣ ಅವಧಿ 24 ತಿಂಗಳಿದ್ದು, ಅದಕ್ಕೂ ಪೂರ್ವ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದಾಗಿ ಸುರೇಶ ಎಂಟರ್‌ ಪ್ರೈಸಸ್‌ ಪ್ರವೇಟ್‌ ಲಿಮಿಟೆಡ್‌(ಎಸ್‌ಇಪಿಎಲ್‌) ವಿಶ್ವಾಸ ವ್ಯಕ್ತಪಡಿಸಿದೆ.
 ಎಸ್‌.ಎಚ್‌. ನರೇಗಲ್ಲ, ವಿಶೇಷಾಧಿಕಾರಿ,
ಹು-ಧಾ ಸ್ಮಾರ್ಟ್‌ಸಿಟಿ ಲಿಮಿಟೆಡ್‌

ಬಸವರಾಜ ಹೂಗಾರ 

Advertisement

Udayavani is now on Telegram. Click here to join our channel and stay updated with the latest news.

Next