Advertisement

ಹಳೇ ಪದ್ಧತಿಗೆ ಮರಳಿದ ಬಸ್‌ ಸೇವೆ

12:35 PM Mar 20, 2020 | Suhan S |

ಹುಬ್ಬಳ್ಳಿ: ಕಿತ್ತೂರು ಚನ್ನಮ್ಮ ವೃತ್ತದ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರಿಗೆ ಬಸ್‌ಗಳ ಸ್ಥಳಾಂತರಕ್ಕೆ ಜನಪ್ರತಿನಿಧಿಗಳೇ ಅಡ್ಡಗಾಲಾಗಿದ್ದಾರೆ. ಸ್ಥಳಾಂತರ ಮಾಡಿದ ಬಸ್‌ಗಳನ್ನು “ಪ್ರಯಾಣಿಕರ ಅನುಕೂಲಕ್ಕಾಗಿ’ ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪುನಃ ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುವಂತೆ ಮಾಡಿದ್ದು, ತಿಂಗಳಲ್ಲಿ ಎರಡೆರಡು ನಿರ್ಧಾರಗಳಿಂದ ಪ್ರಯಾಣಿಕರಲ್ಲಿ ಗೊಂದಲ ಮೂಡಿದೆ.

Advertisement

ಕಿತ್ತೂರು ಚನ್ನಮ್ಮ, ಕೋರ್ಟ್‌ ವೃತ್ತಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹಳೆ ಬಸ್‌ನಿಲ್ದಾಣದಿಂದ ಸಂಚರಿಸುತ್ತಿದ್ದ 1189 ಅನುಸೂಚಿಗಳಲ್ಲಿ 628 ವೇಗದೂತ ಬಸ್‌ಗಳನ್ನು ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಪ್ರಯಾಣಿಕರು ಕೂಡ ಹೊಸ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಆದರೆ ಯಲ್ಲಾಪುರ, ಮುಂಡಗೋಡ ಮತ್ತು ಶಿರಸಿ ಹೋಗುವ ಬಸ್‌ಗಳನ್ನು ಮತ್ತೆ ಹಳೇ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು ಒತ್ತಡ ಹಾಕಿದ ಪರಿಣಾಮ ಪುನಃ ಹಳೇ ಬಸ್‌ ನಿಲ್ದಾಣದಿಂದ ಸಂಚರಿಸಲು ಆರಂಭಿಸಿವೆ.

ಪ್ರಯಾಣಿಕರಲ್ಲಿ ಗೊಂದಲ: ಹಿಂದೊಮ್ಮೆ ಹೊಸ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡಿದಾಗ ಅಂದಿನ ಸಂಸ್ಥೆ ಅಧ್ಯಕ್ಷರಾಗಿದ್ದ ಶಿವರಾಮ ಹೆಬ್ಟಾರ ಪುನಃ ಹಳೇ ಬಸ್‌ ನಿಲ್ದಾಣದಿಂದ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಲಿಖೀತ ಸೂಚನೆ ನೀಡಿದ್ದರು. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದಕ್ಕಾಗಿ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಇದೀಗ ಎರಡನೇ ಬಾರಿಯೂ ಸ್ಥಳಾಂತರಗೊಂಡ ಬಸ್‌ ಗಳನ್ನು ಹಳೇ ಬಸ್‌ ನಿಲ್ದಾಣದಿಂದ ಸಂಚರಿಸಬೇಕು ಎಂದು ನಿರ್ಧಾರ ಕೈಗೊಂಡಿರುವುದು ಗೊಂದಲ ಹಾಗೂ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ. ಇದೀಗ ಮೂರು ಊರುಗಳಿಗೆ ಸಂಚರಿಸುವ ಸುಮಾರು 60 ಅನುಸೂಚಿಗಳು ಮಾತ್ರ ಹಳೇ ನಿಲ್ದಾಣದಿಂದ ಸಂಚಾರ ಮಾಡುತ್ತಿದ್ದು, ಇದೇ ಮಾರ್ಗಗಳ ಮೂಲಕ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಮಂಗಳೂರು ಹಾಗೂ ಧರ್ಮಸ್ಥಳಕ್ಕೆ ಹೋಗುವ ಬಸ್‌ಗಳು ಎಲ್ಲಿಂದ ಸಂಚರಿಸಲಿವೆ ಎನ್ನುವ ಗೊಂದಲ ಆರಂಭವಾಗಿದೆ.

ಸಚಿವ ಶಿವರಾಮ ಹೆಬ್ಟಾರ, ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ತಮ್ಮೂರಿನ ಪ್ರಯಾಣಿಕರಿಗಾಗಿ ಆದೇಶ ಬದಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸಂಚಾರ ದಟ್ಟಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ತಯಾರಿಸಿದ ವರದಿಯಲ್ಲಿ ಬಸ್‌ಗಳ ಸ್ಥಳಾಂತರವೂ ಒಂದಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ ಎಂಬುದು ಜನರ ದೂರಾಗಿದೆ.

ತಮ್ಮ ತಮ್ಮ ಕ್ಷೇತ್ರದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆದೇಶಗಳನ್ನು ಮಾರ್ಪಾಡು ಮಾಡಿದರೆ ನಗರದ ಹೃದಯ ಭಾಗದಲ್ಲಿ ಸುಗಮ ಸಂಚಾರ ಕಷ್ಟಸಾಧ್ಯವಾಗಿದೆ. ಜನಪ್ರತಿನಿಧಿ ಗಳಹಸ್ತಕ್ಷೇಪದಿಂದ ನಿತ್ಯ ಓಡಾಡುವ ಇಲ್ಲಿನ ಜನರು ಹಾಗೂ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡಬೇಕಾಗುತ್ತದೆ.

Advertisement

ಸ್ಥಳಾಂತರ ಪ್ರಯಾಣಿಕರಿಗೆ ಹೊರೆ! :  ನಗರದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಬಸ್‌ ನಿಲ್ದಾಣ, ಹೊಸೂರು ಪ್ರಾದೇಶಿಕ ನಿಲ್ದಾಣಕ್ಕೆ ಬಸ್‌ಗಳ ಸ್ಥಳಾಂತರ ಅನಿವಾರ್ಯ. ಆದರೆ ಈ ನಿರ್ಧಾರ ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಿಮಿಸಿದೆ. ಹಿಂದೆ

ಹಳೇ ಬಸ್‌ ನಿಲ್ದಾಣ-ಹೊಸ ನಿಲ್ದಾಣಕ್ಕೆ ಪ್ರೋತ್ಸಾಹ ದರವಾಗಿ 5 ರೂ. ನಿಗದಿ ಮಾಡಲಾಗಿತ್ತು. ಇದೀಗ 10 ಹಾಗೂ 12 ರೂ. ತಲುಪಿದೆ. ಇದು ಪ್ರಯಾಣಿಕರಿಗೆ ಹೊರೆಯಾಗಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಮಾಸಿಕ ಪಾಸ್‌ ಹಾಗೂ ಪ್ರೋತ್ಸಾಹ ದರ ನಿಗದಿ ಮಾಡಬೇಕು ಎನ್ನುವುದು ಪ್ರಯಾಣಿಕರ ಒತ್ತಾಯವಾಗಿದೆ.

ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು :  ಹೊಸ ಬಸ್‌ ನಿಲ್ದಾಣ ನಿರ್ಮಾಣವಾದಾಗ ಬಸ್‌ ಗಳ ಸ್ಥಳಾಂತರ ಖಂಡಿಸಿ ಕೆಲ ರಾಜಕೀಯ ಮುಖಂಡರು ಪ್ರಯಾಣಿಕರ ಸಮಸ್ಯೆ ಎನ್ನುವ ನೆಪದಲ್ಲಿ ಪ್ರತಿಭಟನೆ ಮಾಡಿ ಕೊಕ್ಕೆ ಹಾಕಿದ್ದರು. ಇದರ ಹಿಂದೆ ಹೋಟೆಲ್‌ ಮಾಫಿಯಾ ಕೈವಾಡವಿತ್ತು ಎನ್ನುವ ಮಾತುಗಳು ಹರಿದಾಡಿದ್ದವು. ಈ ಮೂರು ಊರುಗಳ ಬಸ್‌ ಗಳೊಂದಿಗೆ ಸಾಕಷ್ಟು ಬಸ್‌ ಗಳು ಸ್ಥಳಾಂತರಗೊಂಡಿದ್ದು, ಯಾವ ಪ್ರಯಾಣಿಕರು ಆಗದ ಸಮಸ್ಯೆ ಈ ಭಾಗದ ಪ್ರಯಾಣಿಕರಿಗೆ ಮಾತ್ರ ಸಮಸ್ಯೆಯಾಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡುವಂತಾಗಿದೆ.  ಮುಂದಿನ ದಿನಗಳಲ್ಲಿ ಗದಗ, ಬಾಗಲಕೋಟೆ, ಬೆಳಗಾವಿ ಮಾರ್ಗದ ಬಸ್‌ಗಳನ್ನು ಹಳೇ ಬಸ್‌ ನಿಲ್ದಾಣದಿಂದ ಓಡಿಸಿ ಎಂದು ಅಲ್ಲಿನ ಜನಪ್ರತಿನಿಧಿಗಳು ಪಟ್ಟು ಹಿಡಿದರೆ ಅಚ್ಚರಿ ಪಡಬೇಕಾಗಿಲ್ಲ.

ಸ್ಥಳಾಂತರಗೊಂಡ ಬಸ್‌ಗಳನ್ನು ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುತ್ತಿರುವ ಕುರಿತು ಮಾಹಿತಿಯಿಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಶೀಲಿಸಲಾಗುವುದು. – ಆರ್‌. ದಿಲೀಪ, ಮಹಾನಗರ ಪೊಲೀಸ್‌ ಆಯುಕ್ತ

ಪ್ರಯಾಣಿಕರ ಬೇಡಿಕೆ ಮೇರೆಗೆ ಈ ಮೂರು ಮಾರ್ಗದ ಬಸ್‌ ಗಳು ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆ ಬಂದರೆ ಉಳಿದ ಬಸ್‌ಗಳ ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುವ ಕುರಿತು ಪರಿಶೀಲಿಸಲಾಗುವುದು.-ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next