ಹುಬ್ಬಳ್ಳಿ: ಗಣಿಗಾರಿಕೆ ಬಾಧಿತ ಪ್ರದೇಶಗಳ ಜನ-ಜನುವಾರು, ಕೃಷಿ ಹಾಗೂ ಜಲಮೂಲಗಳ ಹಾನಿ ಹಿನ್ನೆಲೆಯಲ್ಲಿ ಪುನರ್‌ನಿರ್ಮಾಣ, ಪುನರ್ವಸತಿ(ಆರ್‌ಆ್ಯಂಡ್‌ಆರ್)ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಉತ್ತರ ಕರ್ನಾಟಕದವರೇ ಆದ ಪ್ರಹ್ಲಾದ ಜೋಶಿಯವರು ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷೆ-ಆಶಾಭಾವನೆ ಹೆಚ್ಚಿದೆ.
Advertisement
ಅದರಲ್ಲೂ ಬಳ್ಳಾರಿ ಭಾಗದಲ್ಲಿ ಗಣಿಗಾರಿಯಿಂದ ಬಾಧಿತ ಹಳ್ಳಿ-ಪ್ರದೇಶದಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಆರ್ ಆ್ಯಂಡ್ ಆರ್ ಅನುಷ್ಠಾನಕ್ಕೆ ಸಮರ್ಪಕ ಕ್ರಮ ಕೈಗೊಳ್ಳುವರು ಎಂಬ ನಿರೀಕ್ಷೆ ಜನರದ್ದಾಗಿದೆ. ಗಣಿಗಾರಿಕೆಯಿಂದಾಗಿ ಹೆಚ್ಚು ಸಮಸ್ಯೆಗೀಡಾದ ಪ್ರದೇಶವಾದ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು (ಬಿಎಚ್ಎಸ್)ತಾಲೂಕುಗಳ ಅನೇಕ ಹಳ್ಳಿಗಳಲ್ಲಿ ಗಣಿಗಾರಿಕೆ, ಧೂಳು, ಗಣಿತ್ಯಾಜ್ಯ ಇನ್ನಿತರ ಕಾರಣಗಳಿಂದ ಜನರ ಆರೋಗ್ಯ, ಕೃಷಿ, ಪಶುಸಂಪತ್ತು, ಪರಿಸರ, ಅಂತರ್ಜಲ, ಜಲಮೂಲಗಳು ಇನ್ನಿತರ ವಿಷಯಗಳ ಮೇಲೆ ಹಲವು ರೀತಿಯ ಪರಿಣಾಮ-ಸಮಸ್ಯೆಗಳು ಉಂಟಾಗಿವೆ.
Related Articles
Advertisement
ಆರ್‌ಆ್ಯಂಡ್‌ಆರ್ ಹೆಸರಲ್ಲಿ ಕೆಲವೆಡೆ ರಸ್ತೆಗಳನ್ನು ದುರಸ್ತಿಪಡಿಸಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ಸಸಿಗಳನ್ನು ನೆಡುವ ಕೆಲಸ ಬಿಟ್ಟರೆ ಇನ್ನಾವುದೇ ಕಾಮಗಾರಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಟ್ಟಡಗಳು ಅಭಿವೃದ್ಧಿ ಭಾಗವಾಗಬಹುದೇ ವಿನಃ ಜನಜೀವನದ ಆದ್ಯತೆಯಾಗಲಾರವು. ಮುಖ್ಯವಾಗಿ ಜನರ ಆದ್ಯತೆಗೆ ಮನ್ನಣೆ ದೊರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ವಿವಿಗಳು ಪಾಲ್ಗೊಳ್ಳುವಂತಾಗಲಿ: ಗಣಿ ಬಾಧಿತ ಪ್ರದೇಶಗಳ ಸಮಸ್ಯೆ, ತೊಂದರೆಗಳ ಬಗ್ಗೆ ಸಮೀಕ್ಷೆ, ಜನರೊಂದಿಗೆ ಸಂವಾದ, ಕ್ರಿಯಾಯೋಜನೆ ತಯಾರಿಕೆ ಪೂರಕ ಮಾಹಿತಿ, ಸಲಹೆ ನೀಡಿಕೆಯಂತಹ ಕಾರ್ಯಕ್ಕೆ ರಾಜ್ಯದ ಕೃಷಿ ಸೇರಿದಂತೆ ವಿಶ್ವವಿದ್ಯಾಲಯಗಳು ಪಾಲುದಾರಿಕೆ ಪಡೆಯಬೇಕು ಎಂಬುದು ಪರಿಸರ ಪ್ರೇಮಿಗಳ ಅನಿಸಿಕೆ.
ಆರ್‌ಆ್ಯಂಡ್‌ಆರ್ ಅನುಷ್ಠಾನದಲ್ಲಿ ರಾಜ್ಯ ಸರಕಾರದಿಂದ ನಿರೀಕ್ಷಿತ ಕಾರ್ಯ ಆಗುತ್ತಿಲ್ಲ ಎಂದು ಕೆಲ ಹೋರಾಟಗಾರರು, ಪರಿಸರ ಪ್ರೇಮಿಗಳು ಪುಣೆಯ ವಿಶ್ವವಿದ್ಯಾಲಯವೊಂದಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಯ ಕೆಲವರು ಆಗಮಿಸಿ ಜನರೊಂದಿಗೆ ಸಂವಾದ ನಡೆಸಿದ್ದು, ಇದೀಗ ಇಬ್ಬರು ತಜ್ಞರು ಆಗಮಿಸಿ ಸಮೀಕ್ಷೆ ಕಾರ್ಯಕೈಗೊಳ್ಳುತ್ತಿದ್ದಾರೆ. ರಾಜ್ಯ ಸರಕಾರದಿಂದ ಇದು ನಡೆದರೆ ವ್ಯಾಪಕ ಹಾಗೂ ತೀವ್ರತೆ ಹೊಂದಿರುತ್ತದೆ ಎಂಬುದು ಜನಾಭಿಪ್ರಾಯ.
ಬಿಎಚ್ಎಸ್ ಪ್ರದೇಶದಲ್ಲಿ ಗಣಿಗಾರಿಕೆಯಿಂದಾದ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿ ಆರ್‌ಆ್ಯಂಡ್‌ಆರ್ ಜಾರಿ ನಿಟ್ಟಿನಲ್ಲಿ ಪರಿಸರ ಹೋರಾಟಗಾರ ಎಸ್.ಆರ್.ಹಿರೇಮಠ ಇನ್ನಿತರರು ಸುಪ್ರೀಂಕೋರ್ಟ್ ಕದ ತಟ್ಟಿದ್ದು, ಕೋರ್ಟ್ ಸೂಚನೆಯಂತೆ ಪರಿಹಾರ ಕಾಮಗಾರಿಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಸೂಚನೆ ನೀಡಲಾಗಿದೆಯಾದರೂ ಸಮರ್ಪಕ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಜೋಶಿಯವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಜನರ ಭಾವನೆ-ಸಮಸ್ಯೆಗಳನ್ನು ಆಲಿಸಿ, ಆರ್‌ಆ್ಯಂಡ್‌ಆರ್ ಅನುಷ್ಠಾನಕ್ಕೆ ಮುಂದಾಗಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ.
ರಾಜ್ಯ ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗಣಿಗಾರಿಕೆ ಬಾಧಿತ ಪ್ರದೇಶದಲ್ಲಿ ಆರ್‌ಆ್ಯಂಡ್‌ಆರ್ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ. ಕೇಂದ್ರದ ನೂತನ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಯವರು ಇದೇ ಭಾಗದವರಾಗಿದ್ದು, ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರೆಯವ ಆಶಾಭಾವನೆ ಮೂಡಿದೆ. ಸಚಿವರು ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜನರ ಭಾವನೆ ತಿಳಿಯುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿದೆ.•ಟಿ.ಎಂ.ಶಿವಕುಮಾರ,
ಹಿರಿಯ ವಕೀಲರು-ಸಂಡೂರು.