Advertisement

ಇಂದಿರಾ ಕಾಂಟೀನ್‌ ವೆಚ್ಚ ಭರಣ ಅಸಾಧ್ಯ

04:49 PM Nov 10, 2018 | Team Udayavani |

ಹುಬ್ಬಳ್ಳಿ: ಮಹಾನಗರದಲ್ಲಿನ ಇಂದಿರಾ ಕ್ಯಾಂಟೀನ್‌ ಗಳ ಆಹಾರ ಪೂರೈಕೆ ವೆಚ್ಚವನ್ನು ಪಾಲಿಕೆಯಿಂದ ನೀಡುವುದು ದುಸ್ತರವಾಗಿದ್ದು, ಪ್ರತಿ ವರ್ಷ 12 ಕೋಟಿ ರೂ. ನೀಡಲು ಸಾಧ್ಯವಿಲ್ಲ ಎಂದು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ವೀರಣ್ಣ ಸವಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಕಾರ್ಮಿಕರು ಹಾಗೂ ಬಡವರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೆ, ಇದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಬೇಕಾಗಿತ್ತು. ಮಹಾನಗರ ಪಾಲಿಕೆ ಹೊರತುಪಡಿಸಿ ಇತರೆಡೆಗಿನ ಕ್ಯಾಂಟೀನ್‌ಗಳ ಆಹಾರ ಪೂರೈಕೆ ವೆಚ್ಚದಲ್ಲಿ ಶೇ. 30ನ್ನು ಕಾರ್ಮಿಕ ಇಲಾಖೆ ಹಾಗೂ ಶೇ.70ನ್ನು ನಗರಾಭಿವೃದ್ಧಿ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಆದರೆ ಮಹಾನಗರ ಪಾಲಿಕೆಗಳಿಗೆ ಮಾತ್ರ ಬೇರೆ ನಿಯಮ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹು-ಧಾ ಪಾಲಿಕೆಗೆ ಬರಬೇಕಾದ 14 ನೇ ಹಣಕಾಸು ಆಯೋಗದ ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದ್ದರೂ ರಾಜ್ಯ ಸರಕಾರ 2-3 ವರ್ಷದ ಸುಮಾರು 42 ಕೋಟಿ ನೀಡಿಲ್ಲ. ಪಿಂಚಣಿ ಬಾಕಿ ಸಮಸ್ಯೆಯಾಗಿಯೇ ಉಳಿದಿದೆ. ಕಾಯಂ ನೌಕರರಿಗೆ ಸರಕಾರ ಸಕಾಲಕ್ಕೆ ವೇತನ ಅನುದಾನ ನೀಡುತ್ತಿಲ್ಲ. ಇದರಿಂದ ಸಾಮಾನ್ಯ ನಿಧಿಯಿಂದ ವೇತನ ನೀಡುವ ಸ್ಥಿತಿ ಬಂದಿದೆ ಎಂದರು.

ಅನುದಾನ ಕೊರತೆಯಿಂದ ಮಹಾನಗರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಇಂದಿರಾ ಕ್ಯಾಂಟೀನ್‌ ವಾರ್ಷಿಕ 12 ಕೋಟಿ ಆಹಾರ ಪೂರೈಕೆ ವೆಚ್ಚವನ್ನು ಪಾಲಿಕೆಯಿಂದ ಪಾವತಿಸಲು ಸಾಧ್ಯವಿಲ್ಲ ಎಂದರು. ಹಿಂದೆ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಸಂದರ್ಭದಲ್ಲಿ ಆಹಾರಕ್ಕೆ ತಗಲುವ ವೆಚ್ಚ ಶೇ.70ನ್ನು ಪಾಲಿಕೆಯಿಂದ ಪಾವತಿಸಲು ಸಾಧ್ಯವಿಲ್ಲ. ನಗರಾಭಿವೃದ್ಧಿ ಇಲಾಖೆಯೇ ಭರಿಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳುಹಿಸಲಾಗಿತ್ತು. ಯೋಜನೆಗೆ ವಿರೋಧ ಮಾಡಿದರೆ ಜನರಲ್ಲಿ ತಪ್ಪು ಸಂದೇಶ ಹೋಗುತ್ತದೆ ಎನ್ನುವ ಕಾರಣದಿಂದ ಅಪಸ್ವರ ಎತ್ತಲಿಲ್ಲ. ಇದೀಗ ಪಾಲಿಕೆ ಮೇಲೆ ಹೊರೆ ಹೇರಿರುವುದು ಸರಿಯಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸಭಾ ನಾಯಕ ವಿಜಯಾನಂದ ಶೆಟ್ಟಿ, ಮಾಜಿ ಮಹಾಪೌರ ಡಿ.ಕೆ. ಚವ್ಹಾಣ ಇದ್ದರು.

ಶೆಟ್ಟರ ವಿರೋಧವಿಲ್ಲ
ಅನುದಾನ ಹೊರೆಯಿಂದ ಉಳಿದ ಭಾಗದಲ್ಲಿ ಇಂದಿರಾ ಕ್ಯಾಂಟೀನ್‌ ಗಳನ್ನು ಆರಂಭಿಸಿಲ್ಲ. ಆದರೆ ಕಾಂಗ್ರೆಸ್‌ ಮುಖಂಡರು ವಿನಾಕಾರಣ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಇಂದಿರಾ ಕ್ಯಾಂಟೀನ್‌ ಆರಂಭಿಸಲು ವಿರೋಧ ಮಾಡುತ್ತಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಅಧಿಕಾರಿಗಳು ಕ್ಯಾಂಟೀನ್‌ ಆರಂಭಕ್ಕೆ ತಯಾರಿ ಮಾಡಿಕೊಂಡರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಜಗದೀಶ ಶೆಟ್ಟರ ಸಿದ್ಧರಿದ್ದಾರೆ. ಸರಕಾರವೇ ಸಂಪೂರ್ಣ ವೆಚ್ಚ ಭರಿಸಿದರೆ ಮಹಾನಗರದಲ್ಲಿ ಸಿದ್ಧಗೊಂಡಿರುವ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ವೀರಣ್ಣ ಸವಡಿ ತಿಳಿಸಿದರು.

Advertisement

ಬಿಲ್‌ ಪಾವತಿ ಮಾಡಲ್ಲ
ಆರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರು ಕಳೆದ ತಿಂಗಳ ಬಿಲ್‌ ಕಳುಹಿಸಿದ್ದು, ಯಾವುದೇ ಕಾರಣಕ್ಕೂ ಪಾಲಿಕೆಯಿಂದ ಬಿಲ್‌ ನೀಡುವುದಿಲ್ಲ. ಇದಕ್ಕೆ ತಗಲುವ ವೆಚ್ಚ ಸರಕಾರವೇ ಭರಿಸಬೇಕು ಎನ್ನುವುದರ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ತಗೆದುಕೊಂಡು ಸರಕಾರಕ್ಕೆ ಕಳುಹಿಸುತ್ತೇವೆ. ಕೂಡಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಕೆ ಧುರೀಣರು ಸರಕಾರದ ಮೇಲೆ ಒತ್ತಡ ಹೇರಿ ಸರಕಾರದಿಂದಲೇ ಸಂಪೂರ್ಣ ವೆಚ್ಚ ಭರಿಸುವಂತೆ ಮಾಡಬೇಕು.
. ವೀರಣ್ಣ ಸವಡಿ,
ಪಾಲಿಕೆ ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next