Advertisement

ಬಸವರಾಜರ ಸೆಣಸಾಟದಲ್ಲಿ ಯಾರೇ ಗೆದ್ದರೂ ದಾಖಲೆ!

11:45 PM Jun 09, 2022 | Team Udayavani |

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಖಾತೆ ಆರಂಭಿಸಲು, ಕಳೆದ 42 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುನ್ನುಡಿ ಬರೆಯುವರೇ ಅಥವಾ ಕಾಂಗ್ರೆಸ್‌ ಏನಾದರೂ ಮ್ಯಾಜಿಕ್‌ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಿದೆ.

Advertisement

ಪಶ್ಚಿಮ ಶಿಕ್ಷಕರ ಕ್ಷೇತ್ರ 4 ಜಿಲ್ಲೆಗಳ ವ್ಯಾಪ್ತಿ :

ಹೊಂದಿದ್ದು, ಮುಖ್ಯಮಂತ್ರಿಯಾದಿಯಾಗಿ ಆಯಾ ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿ ಪರ ಮತಯಾಚನೆಗೆ ಮುಂದಾಗಿದ್ದಾರೆ. ಬಿಜೆಪಿ ಪ್ರಚಾರ ತೀವ್ರಗೊಳಿಸಿದ್ದರೆ, ಕಾಂಗ್ರೆಸ್‌ ಸಹ ಪೈಪೋಟಿ ನೀಡತೊಡಗಿದೆ.

ಸತತ ಏಳು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿರುವ ಹೊರಟ್ಟಿ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ 8ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನಿಂದ ಶ್ರೀಶೈಲ ಗಡದಿನ್ನಿ, ಆಮ್‌ಆದ್ಮಿ ಪಕ್ಷದ ಬೆಂಬಲಿತ ವೆಂಕನಗೌಡ ಸೇರಿ ವಿವಿಧ ಅಭ್ಯರ್ಥಿಗಳು ಗೆಲುವಿನ  ಹೋರಾಟ ನಡೆಸಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಬರಲಿವೆ. ಧಾರವಾಡ ಜಿಲ್ಲೆ ಕ್ಷೇತ್ರದಲ್ಲೇ ಅತ್ಯಧಿಕ ಮತದಾರರನ್ನು ಹೊಂದಿದೆ. ತಮ್ಮ ಅಭ್ಯರ್ಥಿ ಕ್ಷೇತ್ರದಲ್ಲಿ ಹೊಂದಿರುವ ವೈಯಕ್ತಿಕ ವರ್ಚಸ್ಸು, ಪಕ್ಷದ ಸಂಘಟನ ಶಕ್ತಿ, ಕೇಂದ್ರ-ರಾಜ್ಯದಲ್ಲಿ ಸರಕಾರಗಳು ಇರುವುದು ಎಲ್ಲವೂ ಸೇರಿ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಪಕ್ಷದ ಅಭ್ಯರ್ಥಿ ಹೊರಟ್ಟಿಯವರಿಗೆ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ.  ಶಿಕ್ಷಕರ ಸಮಸ್ಯೆಗಳಿಗೆ ಮೊದಲು ಧ್ವನಿ ಎತ್ತುವ ಜಾಯಮಾನದವರು. ಜತೆಗೆ ಸತತ ಎಂಟನೇ ಬಾರಿಗೆ ಅವರ ಗೆಲುವು ಗಿನ್ನೆಸ್‌ ದಾಖಲೆಯಾಗಲಿದೆ. ಹೊರಟ್ಟಿ ಅವರನ್ನು ಪ್ರಥಮ ಪ್ರಾಶಸ್ತÂ ಅದರಲ್ಲೂ ದಾಖಲೆ ಅಂತರದ ಮತಗಳಿಂದ ಗೆಲ್ಲಿಸಿ ಎಂಬ ಪ್ರಚಾರಕ್ಕೆ ಬಿಜೆಪಿಯವರು ಆದ್ಯತೆ ನೀಡತೊಡಗಿದ್ದಾರೆ. ಶೇ.80ಕ್ಕಿಂತ ಹೆಚ್ಚಿನ ಶಿಕ್ಷಕರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದಾರೆ. ಆದರೆ ಮುಸ್ಲಿಂ, ಕ್ರಿಶ್ಚಿಯನ್‌ ಮತಗಳು ಎಷ್ಟರ ಮಟ್ಟಿಗೆ ಬರಲಿವೆ ಎಂಬ ಆತಂಕ ಬಿಜೆಪಿ ಅಭ್ಯರ್ಥಿಗಿದೆ ಎಂದು ಹೇಳಲಾಗುತ್ತಿದೆ. ಅಲ್ಪಸಂಖ್ಯಾಕ‌ ಮತಗಳು ಏರುಪೇರಾದರೂ ಪಕ್ಷದ ಮತಗಳು ಅಭ್ಯರ್ಥಿಗಾಗುವ ಕೊರತೆ ನೀಗಿಸಲಿವೆ ಎಂಬ ಲೆಕ್ಕಾಚಾರ ಬಿಜೆಪಿಯದು.

Advertisement

ಇವೆಲ್ಲವನೂ ದೃಷ್ಟಿಯಲ್ಲಿಟ್ಟುಕೊಂಡೇ ಬಿಜೆಪಿ ನಾಲ್ಕು ಜಿಲ್ಲೆಗಳ ಪಕ್ಷದ ಶಾಸಕರು, ಸಚಿವರು, ಸಂಸದರನ್ನು ಪ್ರಚಾರಕ್ಕಿಳಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸಲೇಬೇಕೆಂದು ತನ್ನದೇ ಯತ್ನ ಹಾಗೂ ಪ್ರಚಾರದಲ್ಲಿ ತೊಡಗಿದೆ. ಜೆಡಿಎಸ್‌ನಿಂದ ಪಕ್ಷಾಂತರಗೊಂಡು ಹೊರಟ್ಟಿ ಕೋಮುವಾದಿ ಬಿಜೆಪಿ ಸೇರಿರುವುದು ಅನೇಕ ಶಿಕ್ಷಕರಿಗೆ ಬೇಸರ ತರಿಸಿದೆ, ಜತೆಗೆ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳಿಗಿಂತಲೂ ಈ ಬಾರಿ ಶಿಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅಲ್ಪಸಂಖ್ಯಾಕ‌ ಶಿಕ್ಷಕರು ಬಿಜೆಪಿಗೆ ಮತ ಹಾಕುವುದಕ್ಕೆ ಒಪ್ಪಲಾರರು ಎಂಬ ಅನಿಸಿಕೆ ಕಾಂಗ್ರೆಸಿನದ್ದಾಗಿದೆ.

ಶ್ರೀಶೈಲ ಗಡದಿನ್ನಿ ಹೊರಟ್ಟಿಯವರ ಶಿಷ್ಯ. ಇದೀಗ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೊರಟ್ಟಿ ಅವರ ಮತ ಬುಟ್ಟಿಗೆ ಕೈ ಹಾಕಲಿದ್ದು, ಅದು ತಮಗೆ ವರವಾಗಲಿದೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ. ಪ್ರಚಾರದಲ್ಲಿ ಕಾಂಗ್ರೆಸ್‌ ಪೈಪೋಟಿ ನೀಡುತ್ತಿದೆ ಎನ್ನುವಂತಿದ್ದರೂ ಶಿಕ್ಷಕರಿಗಿಂತ ಪಕ್ಷದ ಕಾರ್ಯಕರ್ತರೇ ಹೆಚ್ಚಿದ್ದಾರೆ ಎನ್ನಲಾಗುತ್ತಿದೆ. ಗುರಿಕಾರ ಪರವಾಗಿ ಕಾಂಗ್ರೆಸ್‌ ಮುಖಂಡರು ಪ್ರಚಾರದ ಅಖಾಡಕ್ಕಿಳಿದಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ, ಅದು ನನ್ನ ಆಯ್ಕೆಯ ಮೂಲಕ ಎಂಬ ಪ್ರಚಾರದಲ್ಲಿ ತೊಡಗಿದ್ದಾರೆ.  ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ ಪ್ರಚಾರ ಸಭೆ ನಡೆಸಿದ್ದರೂ ನಾಲ್ಕು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಕೊರತೆ ಒಂದು ಕಡೆಯಾದರೆ, ಶಿಕ್ಷಕರ ಸ್ಪಂದನೆ ನಿರೀಕ್ಷಿತವಾಗಿ ಸಿಗುತ್ತಿದೆಯೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.

ಆಮ್‌ ಆದ್ಮಿ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ವೆಂಕನಗೌಡ ಪರವಾಗಿ ಪಕ್ಷದ ಮುಖಂಡರು ಪ್ರಚಾರ ನಡೆಸಿದರೂ ಅದು ಶಿಕ್ಷಕ ಸಮುದಾಯದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದಷ್ಟೇ ಹೇಳ ಬಹುದಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಗೆಲುವು ನಮ್ಮದೇ ಎಂಬ ಹುಮ್ಮಸಿನಲ್ಲಿದ್ದಾರೆ. ಶಿಕ್ಷಕರು ಯಾರನ್ನು ಕೈ ಹಿಡಿಯುತ್ತಾರೆ ಕಾಯ್ದು ನೋಡಬೇಕು. ಫ‌ಲಿತಾಂಶ ಏನೇ ಬಂದರೂ ದಾಖಲೆ ಪಕ್ಕಾ!

17, 973

ಒಟ್ಟು ಮತದಾರರು

6,445

ಧಾರವಾಡ

4,623

ಹಾವೇರಿ

3,300

ಗದಗ

3,605

ಉತ್ತರ ಕನ್ನಡ

ಆರು ವರ್ಷಗಳ ಅವಧಿಯಲ್ಲಿ ನಾನೇನು ಮಾಡಿದ್ದೇನೆ ಎಂಬುದನ್ನು ಅಂಕಿ-ಅಂಶದ ಮಾಹಿತಿ, ಸರಕಾರಿ ಆದೇಶಗಳ ಸಮೇತ ಕಿರುಹೊತ್ತಿಗೆ ಹೊರಡಿಸಿ ಶಿಕ್ಷಕ ಸಮುದಾಯದಲ್ಲಿ ಮತ ಕೇಳಿದ್ದೇನೆ. ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. -ಬಸವರಾಜ ಹೊರಟ್ಟಿ, ಬಿಜೆಪಿ ಅಭ್ಯರ್ಥಿ

ಶಿಕ್ಷಕರ ಸಮಸ್ಯೆಗಳನ್ನು ಅರಿತು ನಾಲ್ಕು ದಶಕಗಳಿಂದ ಅಧಿಕಾರ ವಿಲ್ಲದಿದ್ದರೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಶಿಕ್ಷಕರು ನನ್ನನ್ನೇ ಆಯ್ಕೆ ಮಾಡುವ ಭರವಸೆ ಇದೆ.-ಬಸವರಾಜ ಗುರಿಕಾರ, ಕಾಂಗ್ರೆಸ್‌ ಅಭ್ಯರ್ಥಿ 

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next