ಹುಬ್ಬಳ್ಳಿ: ಬೈಕ್ ಸವಾರನ ಪ್ರಾಣ ಉಳಿಸಲು ಬಸ್ ಚಾಲಕನು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಎರಡು ಚಿಗರಿ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಂಗಳವಾರ ಸಂಜೆ ಇಲ್ಲಿನ ಸಾಯಿನಗರ ವೃತ್ತದ ಫ್ಲೈಓವರ್‌ನಲ್ಲಿ ಸಂಭವಿಸಿದೆ.
ಖಾಸಗಿ ವಾಹನಗಳಿಗೆ ನಿರ್ಬಂಧಿತ ಬಿಆರ್‌ಟಿಎಸ್ ಪಥದಲ್ಲಿ ಬೈಕ್ ಸವಾರ ಚಿಗರಿ ಬಸ್‌ಗೆ ಎದುರಿಗೆ ಅಡ್ಡಲಾಗಿ ಬಂದಾಗ ಅಪಘಾತ ತಪ್ಪಿಸಲು ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ. ಆಗ ಹಿಂದೆ ಬರುತ್ತಿದ್ದ ಇನ್ನೊಂದು ಚಿಗರಿ ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತವಾಗಿದೆ. ಇದರಿಂದ ಹಿಂದಿನ ಬಸ್‌ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ ಹಾಗೂ ಗಾಜು ಸಂಪೂರ್ಣ ಜಖಂಗೊಂಡಿದೆ. ಡಿಕ್ಕಿಗೊಳಗಾದ ಬಸ್‌ನ ಹಿಂಬದಿಯ ಎಂಜಿನ್‌ಗೆ ಹೊಡೆತ ಬಿದ್ದಿದೆ.
ಅಪಘಾತದಲ್ಲಿ ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿರ್ಬಂಧಿತ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಬರುತ್ತಿದ್ದ ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆಯುತ್ತಿದ್ದಂತೆ ಚಿಗರಿ ಬಸ್‌ಗಳ ಸಂಚಾರಕ್ಕೆ ತೀವ್ರ ಅಡಚಣೆ ಆಯಿತು. ಸಂಚಾರ ಠಾಣೆ ಪೊಲೀಸರು ಹಾಗೂ ಬಿಆರ್‌ಟಿಎಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಕಾರಣವೇನು?: 200 ಸಂಖ್ಯೆಯ ಬಸ್ ಹುಬ್ಬಳ್ಳಿಯಿಂದ ಧಾರವಾಡದತ್ತ ಹೊರಟಿತ್ತು. ಈ ಸಮಯದಲ್ಲಿ ಉಣಕಲ್ಲ ಕಡೆಯಿಂದ ವಿದ್ಯಾನಗರ ಕಡೆಗೆ ಹೊರಟಿದ್ದ ಬೈಕ್ ಸವಾರನು ಮುಂದೆ ಹೊರಟಿದ್ದ ಬೈಕ್‌ಗಳನ್ನು ಓವರ್‌ಟೇಕ್ ಮಾಡಲು ಹೋದಾಗ ಎದುರಿಗೆ ಬರುತ್ತಿದ್ದ ಚಿಗರಿ ಬಸ್ ನೋಡಿ ನಿಯಂತ್ರಣ ಕಳೆದುಕೊಂಡು ಬಸ್ ಮುಂದೆ ಬಂದಿದ್ದಾನೆ. ಆಗ ಬಸ್ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೇ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಹಿಂದೆ ಬರುತ್ತಿದ್ದ 100 ಸಂಖ್ಯೆಯ ಚಿಗರಿ ಬಸ್ ಚಾಲಕನು ನಿಯಂತ್ರಣ ತಪ್ಪಿ ಮುಂದೆ ಇದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಂದಿನ ಬಸ್‌ನ ಎಂಜಿನ್ ಸಂಪೂರ್ಣ ಹಾನಿಯಾಗಿದ್ದು, ಡಿಕ್ಕಿ ಹೊಡೆದ ಬಸ್‌ನ ಮುಂಭಾಗ ಮತ್ತು ಗಾಜು ಸಂಪೂರ್ಣ ಜಖಂಗೊಂಡಿದೆ. ಬಿಆರ್‌ಟಿಎಸ್ ಸಂಚಾರ ಆರಂಭವಾದ ನಂತರ ಇದು ದೊಡ್ಡ ಅಪಘಾತವಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತವಾಗಿ ವಾಹನಗಳು ಸಂಚರಿಸಿ ಸಂಸ್ಥೆಯ ಆಸ್ತಿ ಹಾಗೂ ಪ್ರಯಾಣಿಕರ ಸಾರಿಗೆ ಸೇವೆಗೆ ಧಕ್ಕೆಯುಂಟು ಮಾಡಿರುವುದರಿಂದ ಬೈಕ್ ಸವಾರರ ವಿರುದ್ಧ ದೂರು ದಾಖಲು ಮಾಡಲಾಗುವುದು ಎಂದು ಬಿಆರ್‌ಟಿಎಸ್ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.