ಹುಬ್ಬಳ್ಳಿ: ಕಲುಷಿತಗೊಂಡಿರುವ ಇಂದಿನ ರಾಜಕಾರಣ ಸುಧಾರಿಸಲು, ಪ್ರಜಾಪ್ರಭುತ್ವ ಉಳಿಯಲು ಮತ್ತು ಸಂಘಟಿತಗೊಳ್ಳಲು ದಿ| ಕೆ.ಎಚ್.ಪಾಟೀಲರಂತಹ ದಿಟ್ಟ ಎದೆಗಾರಿಕೆಯುಳ್ಳ ನಾಯಕತ್ವ ಅಗತ್ಯವಾಗಿದೆ ಎಂದು ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು.
ಸಹಕಾರ ರಂಗದ ಭೀಷ್ಮ ದಿ| ಕೆ.ಎಚ್. ಪಾಟೀಲರ 27ನೇ ಪುಣ್ಯಸ್ಮರಣೆ ನಿಮಿತ್ತ ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯರ ಮಧ್ಯೆ ಇದ್ದು ರಾಜಕಾರಣ ಮಾಡಿ ಜನಸಾಮಾನ್ಯರಿಗಾಗಿ ಹಗಲಿರುಳು ಶ್ರಮಿಸಿದ ದಿಟ್ಟ ನಾಯಕ ಕೆ.ಎಚ್. ಪಾಟೀಲರು. ಸಾಮಾನ್ಯ ಕುಟುಂಬದಿಂದ ಬಂದ ನಾನು ಮೂರು ಬಾರಿ ಶಾಸಕನಾಗಿ ಇದೀಗ ಸಚಿವನಾಗಿದ್ದೇನೆ ಎಂದರೆ ಇದಕ್ಕೆ ಕಾರಣ ಕೆ.ಎಚ್. ಪಾಟೀಲರು. ಅವರ ರಾಜಕೀಯ ಜೀವನವೇ ನನಗೆ ಸ್ಫೂರ್ತಿ ಎಂದರು.
ಪಾಟೀಲರು ಜನರ ಸಮಸ್ಯೆಗಳನ್ನು ದೂರ ಮಾಡಿ ಅವರ ಹೃದಯ ಗೆದ್ದ ಧೀಮಂತ ನಾಯಕರಾಗಿದ್ದರು. ಪ್ರಜಾಪ್ರಭುತ್ವ ಉಳಿಯಲು ಬೆಳೆಯಲು ಕೆ.ಎಚ್. ಪಾಟೀಲರು ಮತ್ತೆ ಹುಟ್ಟಿ ಬರಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕೆ.ಎಚ್. ಪಾಟೀಲರ ಚಿಂತನೆ, ರಾಜಕೀಯ ಬದ್ಧತೆ, ಜನರ ಬಗೆಗಿನ ಅವರ ಕಾಳಜಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ. ಮುಂದಿನ ಬಾರಿ ಕಾರ್ಯಕ್ರಮದ ಬದಲಾಗಿ ಅವರ ವಿಚಾರಧಾರೆ ತೋರುವ ವಿಚಾರ ಸಂಕಿರಣ, ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಸಿ ಎಂದು ಸಲಹೆ ನೀಡಿದರು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮೌಲಾನಾ ಜಹೀರುದ್ದಿನ್ ಖಾಜಿ, ಕ್ರಿಶ್ಚಿಯನ್ ಧರ್ಮಗುರು ರೆವರೆಂಡ್ ಫಾದರ್ ಡಾ| ಎಸ್.ಎಚ್. ಉಳ್ಳಾಗಡ್ಡಿ ಆಶೀರ್ವಚನ ನೀಡಿದರು. ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಹಾಗೂ ಬುದ್ಧರಕ್ಕಿತ ವಿದ್ಯಾರ್ಥಿಗಳಿಂದ ಬುದ್ಧ ವಂದನೆ ನಡೆಯಿತು.
ವಿಜಯಾನಂದ ಹೊಸಕೋಟಿ, ಪ್ರಕಾಶ ಕ್ಯಾರಕಟ್ಟಿ, ಲಕ್ಷ್ಮಣ ಉಪ್ಪಾರ, ಬಾಪುಗೌಡ ಪಾಟೀಲ, ಆರ್.ಕೆ. ಪಾಟೀಲ, ವಸಂತ ಲದವಾ, ಮಹೇಂದ್ರ ಸಿಂಘಿ, ಅರವಿಂದ ಕಟಗಿ, ನಜೀರಅಹ್ಮದ ಹೊನ್ಯಾಳ, ಸದಾನಂದ ಡಂಗನವರ, ಮೋಹನ ಅಸುಂಡಿ, ಡಾ| ಲಿಂಗರಾಜ ಅಂಗಡಿ, ರಘುನಾಥ ಕೆಂಪಲಿಂಗನಗೌಡರ, ಮನೋಜ ಪಾಟೀಲ, ಪೀತಾಂಬ್ರಪ್ಪ ಬೀಳಾರ ಮೊದಲಾದವರಿದ್ದರು. ಕೆಪಿಸಿಸಿ ಪಜಾ ಘಟಕದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಸ್ವಾಗತಿಸಿದರು. ಡಾ|ಎಚ್.ಬಿ. ನೀಲಗುಂದ ನಿರೂಪಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಎಂ. ಗೌಡರ ವಂದಿಸಿದರು.
ಜಾತಿ, ಮತ, ಪಂಥ, ಪಕ್ಷ ರಾಜಕಾರಣ ಕೆ.ಎಚ್. ಪಾಟೀಲರ ಬಳಿ ಸುಳಿಯಲಿಲ್ಲ. ಕೆ.ಎಚ್.ಪಾಟೀಲ ಇದ್ದುದನ್ನು ಇದ್ದ ಹಾಗೇ ಹೇಳುವ ದಿಟ್ಟ ನಾಯಕರಾಗಿದ್ದರು. ಈಗಿನ ರಾಜಕಾರಣ ನೋಡಿದರೆ ನಮ್ಮ ಕಾಲ ಮುಗಿದಿದೆ ಎನಿಸುತ್ತಿದೆ. ನೇರ ನುಡಿಯ ಧೈರ್ಯದ ರಾಜಕಾರಣಿ, ಹೃದಯ ಶ್ರೀಮಂತಿಕೆಯ ರಾಜಕಾರಣಿಗಳು ಎಲ್ಲೂ ಸಿಗುವುದಿಲ್ಲ.
• ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ