Advertisement

ಹು-ಧಾ ಪೂರ್ವದಲ್ಲಿ ರಾಜಕೀಯ ಉದಯಕ್ಕೆ ರಣತಂತ್ರ

11:19 AM Apr 19, 2019 | pallavi |

ಹುಬ್ಬಳ್ಳಿ: ಅತಿ ಹೆಚ್ಚು ಕೊಳಗೇರಿ ಬಡಾವಣೆ ಹೊಂದಿದ ಹಣೆ ಪಟ್ಟಿ ಹೊತ್ತ ಹಾಗೂ ಅಭಿವೃದ್ಧಿಯತ್ತ ಮುಖ ಮಾಡಿದ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಕಾವು ಹೆಚ್ಚತೊಡಗಿದೆ. ಅಲ್ಪಸಂಖ್ಯಾತ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಮತಬೇಟೆಯ ಪ್ರಚಾರ ಜೋರಾಗಿದೆ.

Advertisement

ಹುಧಾ ಪೂರ್ವ ವಿಧಾನಸಭಾ ಕ್ಷೇತ್ರ ಈ ಮೊದಲು ಶಹರ ಕ್ಷೇತ್ರವಾಗಿತ್ತಲ್ಲದೆ, 2008ರ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಮೀಸಲು ಕ್ಷೇತ್ರವಾಗಿ ರೂಪುಗೊಂಡಿತ್ತು. ಮೀಸಲು ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಗೆದ್ದಿದ್ದರೆ, ಎರಡು ಬಾರಿ ಕಾಂಗ್ರೆಸ್‌ ಗೆಲುವು ಕಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಅಬ್ಬರ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ.

ಕ್ಷೇತ್ರದಲ್ಲಿ ಸದ್ಯದ ಮೂಡ್‌: ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮೈತ್ರಿ ಪಕ್ಷದವರು ಮತಯಾಚಿಸುತ್ತಿದ್ದರೆ, ಅವಳಿ ನಗರ ಅಭಿವೃದ್ಧಿಗೆ ಕೇಂದ್ರದಿಂದ ತಂದ ಅನುದಾನ, ಮತ್ತೂಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂಬ ಮೋದಿ ಅಲೆ ಹೆಸರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಮತಯಾಚಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪರ ಇರುವ ಅಲೆ ಜತೆಗೆ, ಪುಲ್ವಾಮಾ ಘಟನೆ ನಂತರ ಹಾಗೂ ಅದಕ್ಕೂ ಮೊದಲು ನಡೆದ ಸರ್ಜಿಕಲ್‌ ದಾಳಿ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಉಜ್ವಲ ಯೋಜನೆ, ಆಯಷ್ಮಾನ್‌ ಭಾರತ, ಸಿಆರ್‌ ಎಫ್ ಅನುದಾನ ತರುವಲ್ಲಿ ಸಂಸದರಾಗಿ ಜೋಶಿಯವರ ಶ್ರಮ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು, ಮುಖಂಡರು ಮತದಾರರ ಮೇಲೆ ತಮ್ಮದೇ ಪ್ರಭಾವ ಬೀರುವ ಯತ್ನ ನಡೆಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ವೈಫ‌ಲ್ಯಗಳನ್ನು ಪ್ರಸ್ತಾಪಿಸಲಾಗುತ್ತಿದೆ.

ಹು.ಧಾ.ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಸತತ ಎರಡು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳು, ಮೂಲಸೌಕರ್ಯ, ವಸತಿ ಇನ್ನಿತರ ಕಾರ್ಯಗಳು, ರಾಜ್ಯ ಸಮ್ಮಿಶ್ರ ಸರಕಾರದ ಅಭಿವೃದ್ಧಿ ಪರ ಚಿಂತನೆ ಇನ್ನಿತರ ವಿಷಯಗಳನ್ನು ಮುಂದಿರಿಸಿಕೊಂಡು ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಕಾಂಗ್ರೆಸ್‌ -ಜೆಡಿಎಸ್‌ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ವಾರ್ಡ್‌ವಾರು ಪ್ರಚಾರ ಕೈಗೊಳ್ಳಲಾಗುತ್ತಿದೆ.

Advertisement

ಜತೆಗೆ ಕೇಂದ್ರ ಸರಕಾರ ಕೈಗೊಂಡ ನೋಟು ರದ್ಧತಿ, ಜಿಎಸ್‌ಟಿಯಿಂದ ಉಂಟಾದ ಸಮಸ್ಯೆ, ಕಾರ್ಮಿಕರು ಹಾಗೂ ಮಧ್ಯಮ ವರ್ಗಗಳ ಮೇಲಾದ ಪರಿಣಾಮಗಳ ಕುರಿತು ಪ್ರಸ್ತಾಪಿಸಲಾಗುತ್ತಿದೆ.

ಜಿದ್ದಾಜಿದ್ದಿ: ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಿರಂಗ ಸಮಾವೇಶ ನಡೆಸಿ ಅಲೆ ಸೃಷ್ಟಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಹಿಂದುಳಿದ ವರ್ಗಗಳ ಸಮಾವೇಶ ಮಾಡುವ ಮೂಲಕ ಬಿಜೆಪಿ ಆಯಾ ಸಮಾಜಗಳ ಮತಗಳಿಕೆ ಯತ್ನ ಜೋರಾಗಿಸಿದೆ. ನಟಿಯರಾದ ಶೃತಿ, ತಾರಾ, ಮಾಳವಿಕ, ಮುಖಂಡರಾದ ಶ್ರೀರಾಮುಲು, ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದಾಗಿದೆ.

ಮೈತ್ರಿ ಅಭ್ಯರ್ಥಿ ಪರವೂ ಈಗಾಗಲೇ ಮಹಿಳೆಯರ ಸಮಾವೇಶ ಕೈಗೊಳ್ಳಲಾಗಿದ್ದು, ಲಿಂಗಾಯತ-ಮುಸ್ಲಿಂ ಮತಬ್ಯಾಂಕ್‌ ಸೆಳೆಯಲು ಆಯಾ ಸಮಾಜಗಳ ಸಭೆಗಳನ್ನು ಕೈಗೊಳ್ಳಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನಾಯಕರಾದ ಆರ್‌.ವಿ.ದೇಶಪಾಂಡೆ, ಎಚ್‌. ಕೆ.ಪಾಟೀಲ, ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ನಾಯಕರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ.

ದುರ್ಗದ ಬಯಲು, ಮಂಗಳವಾರ ಪೇಟೆ, ಬಮ್ಮಾಪೂರ ಓಣಿ, ಸ್ಟೇಷನ್‌ ರಸ್ತೆ, ಘಂಟಿಕೇರಿ, ಬೆಂಡಿಗೇರಿ, ಅಕ್ಕಿಹೊಂಡ, ಜವಳಿ ಸಾಲ ಜನತಾ ಬಜಾರ್‌ ನಂತಹ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಸುಗಮ ಸಂಚಾರ, ಕೊಳಗೇರಿಗಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎನ್ನುವ ಕೊರಗು ಪ್ರಜ್ಞಾವಂತ ಮತದಾರರಲ್ಲಿದೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರಿಗೆ ಸುಲಭವಾಗಿ ದೊರೆಯುವಂತಹ ಅಭ್ಯರ್ಥಿಯನ್ನು ಗುರುತಿಸಿ ಮತ ನೀಡಬೇಕು ಎಂದು ನಿರ್ಧರಿಸಿದ್ದೇವೆ. ಇಂತಹ ಹಿಂದುಳಿದ ಪ್ರದೇಶಗಳಲ್ಲೂ ಕೂಡ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಬೇಕು.
ಮೈಬೂಸಾಬ್‌ ತಿರ್ಲಾಪುರ,

ಮುಸ್ಲಿಮರ ಮುನಿಸು ಶಮನ !
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿರುವ ವಿಚಾರ ಸಮಾಜದ ಮತದಾರರಿಂದ ದೂರವಾದಂತೆ ಕಾಣುತ್ತಿದೆ. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಭರವಸೆಗಳ ದೊರೆತ ಹಿನ್ನೆಲೆಯಲ್ಲಿ ಇದೊಂದು ಮುಗಿದು ಹೋದ ವಿಚಾರವಾಗಿದೆ. ಇನ್ನು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಶಾಕೀರ ಸನದಿ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ವಿಚಾರ ಯಾವುದೇ ಹಂತದಲ್ಲೂ ಚುನಾವಣೆಗೆ ಆಹಾರವಾಗಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎನ್ನುವುದು ಕ್ಷೇತ್ರದಲ್ಲಿನ ಜನರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next