ಬೆಂಗಳೂರು: ದೇಶದಲ್ಲಿ ವಾಹನಗಳಿಗೆ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಭಾಗವಾಗಿ ರಾಜ್ಯದ ಎಲ್ಲ ಹಳೆಯ ನಂಬರ್‌ಪ್ಲೇಟ್ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಬರುವ ನ.17ರ ಗಡುವು ನೀಡಿದೆ.
ಅದರಂತೆ 2019ರ ಎಪ್ರಿಲ್ 1ಕ್ಕೂ ಮೊದಲು ನೋಂದಣಿಯಾದ ಎಲ್ಲ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯ. ಆ ಬಳಿಕದ ವಾಹನಗಳಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಆಗಿದೆ.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಈ ಹಿಂದೆಯೇ ಇದು ಕಡ್ಡಾಯವಾಗಿತ್ತು. ಆದರೆ ಸಾರಿಗೆ ಇಲಾಖೆ ಅದನ್ನು ಅನುಷ್ಠಾನಗೊಳಿಸಿರಲಿಲ್ಲ. ಹೊಸ ನಂಬರ್ ಪ್ಲೇಟ್ ಅಳವಡಿಕೆಗೆ ನ.17ರ ವರೆಗೆ ಕಾಲಾವಕಾಶ ನೀಡಿದೆ. ತಪ್ಪಿದರೆ 500ರಿಂದ 1 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು.
ವಾಹನ ಮಾಲಕರು ಶೋ ರೂಂ ಅಥವಾ ಡೀಲರ್‌ಗಳಲ್ಲಿ ನಂಬರ್ ಪ್ಲೇಟ್ ಬದಲಾವಣೆಗೆ ಕೋರಿಕೆ ಸಲ್ಲಿಸಬೇಕು. ನಾಲ್ಕು ಚಕ್ರದ ವಾಹನಗಳಿಗೆ 400-500 ರೂ.ವರೆಗೆ ಶುಲ್ಕ ಇರುತ್ತದೆ. ಒರಿಜಿನಲ್ ಇಕ್ಯುಪ್‌ಮೆಂಟ್ ಮ್ಯಾನುಫ್ಯಾಕ್ಚರರ್ (ಒಇಎಂ)ರಿಂದ ಅಧಿಕೃತ ಪೋರ್ಟಲ್‌ನಲ್ಲಿ ನಮೂದಿಸಿದ ಮೇಲೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತದೆ.