ಹೊಸದಿಲ್ಲಿ: ‘ನಿಮ್ಮ ಧರ್ಮ, ಜಾತಿ, ಆಧಾರ್ ಸಂಖ್ಯೆಯನ್ನು ಕೊಡಿ.’ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತದ ಕಾಲೇಜು ಹಾಗೂ ವಿವಿಗಳ ಉಪನ್ಯಾಸಕರಿಗೆ ಇಂತಹುದೊಂದು ಸೂಚನೆ ನೀಡಿದೆ. ಏಕೀ ಮಾಹಿತಿ ಎಂದು ಪ್ರಶ್ನಿಸುತ್ತಿದ್ದೀರಾ? ರಾಷ್ಟ್ರೀಯ ಶಿಕ್ಷಕರ ಪೋರ್ಟಲ್ ಆರಂಭಿಸಲು ಮತ್ತು ನಕಲಿ ಉಪನ್ಯಾಸಕರನ್ನು ಪತ್ತೆಹಚ್ಚಲು!
ಹೌದು, ದೇಶದಲ್ಲಿ ನಕಲಿ ಶಿಕ್ಷಕರೆಷ್ಟಿದ್ದಾರೆ ಎಂಬುದನ್ನು ಅರಿಯುವ ಮತ್ತು ಉಪನ್ಯಾಸಕರ ಪೋರ್ಟಲ್‌ವೊಂದನ್ನು ಆರಂಭಿಸುವ ಉದ್ದೇಶದಿಂದ ಸರಕಾರ ಈ ಮಾಹಿತಿ ಕಲೆಹಾಕತೊಡಗಿದೆ. ಈಗಾಗಲೇ 15 ಲಕ್ಷ ಉಪನ್ಯಾಸಕರ ಪೈಕಿ ಶೇ.60ರಷ್ಟು ಮಂದಿಯ ಮಾಹಿತಿ ಸಂಗ್ರಹಿಸಲಾಗಿದೆ. ಯಾರೆಲ್ಲ ವೈಯಕ್ತಿಕ ವಿವರ ನೀಡಿಲ್ಲವೋ ಅವರಿಗೆ ಇನ್ನೂ ಒಂದು ತಿಂಗಳ ಅವಕಾಶ ಒದಗಿಸಲಾಗಿದೆ.
ಈಗಿರುವ ದತ್ತಾಂಶ ಸಂಗ್ರಹ ಮಾದರಿ (ಡಿಸಿಎಫ್) ಅಲ್ಲದೇ, ಹೊಸ ಶಿಕ್ಷಕ ಮಾಹಿತಿ ಮಾದರಿ(ಟಿಐಎಫ್)ಯ ಮೂಲಕ ಮಾಹಿತಿಯನ್ನು ಸಂಗ್ರಹಿಸಿ, ‘ಗುರುಜನ್’ ಎಂಬ ಶಿಕ್ಷಕರ ಪೋರ್ಟಲ್ (gurujan.gov.in) ಪರಿಚಯಿಸುವುದೇ ಸರಕಾರದ ಉದ್ದೇಶ. ನಾವು ಈ ವೆಬ್‌ಸೈಟ್ ಅನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವುದಿಲ್ಲ. ಅದರೊಳಗಿರುವ ಎಲ್ಲ ಮಾಹಿತಿಯೂ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್. ಸುಬ್ರಮಣ್ಯನ್.
ಆದರೆ, ಅನೇಕ ಶಿಕ್ಷಕರು ಸರಕಾರದ ಈ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ಬಹಿರಂಗಪಡಿಸುತ್ತಾರೋ, ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ವ್ಯಕ್ತಿಗಳನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಗುರುತಿಸುವ ಈ ಚಿಂತನೆಯೇ ಸರಿಯಿಲ್ಲ. ಜತೆಗೆ, ದತ್ತಾಂಶ ಎನ್ನುವುದು ಸೋರಿಕೆಯಾಗಲ್ಲ ಎನ್ನುವುದನ್ನು ಖಾತ್ರಿಪಡಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಕೆಲವು ಶಿಕ್ಷಕರು.