ಬೆಂಗಳೂರು: ನವೆಂಬರ್ 14 ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನದ ಅಂಗವಾಗಿ ಕಬ್ಬನ್ ಪಾರ್ಕ್‌ನಲ್ಲಿ 3 ದಿನಗಳ ಮಕ್ಕಳ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 10, 11 ಮತ್ತು 14 ರಂದು ಕಬ್ಬನ್ ಉದ್ಯಾನವನದಲ್ಲಿ ಮಕ್ಕಳ ಹಬ್ಬ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 49 ಬಾಲ ಮಂದಿರಗಳಲ್ಲಿ 650 ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕರಡಿ ಮಜಲು, ಹಕ್ಕಿಪಿಕ್ಕಿ ನೃತ್ಯ, ಕರ್ಬಲ್ ಕುಣಿತ, ಡೊಳ್ಳು ಕುಣಿತ, ಸೋಬಾನೆ, ಚಿಟ್ಟೆ ಮೇಳ ಸೇರಿದಂತೆ ಜಾನಪದ ಕಲಾ ತರಬೇತಿ ನೀಡಲಾಗಿದ್ದು, ಮೂರು ದಿನ ಎಲ್ಲ ಮಕ್ಕಳು ಕಬ್ಬನ್ ಪಾರ್ಕ್‌ನಲ್ಲಿ ನಡೆಯುವ ಮಕ್ಕಳ ಹಬ್ಬದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಿಂದ ಮಕ್ಕಳಿಗೆ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದ್ದು, ಬೀದಿ ನಾಟಕ ಪ್ರದರ್ಶನ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ಬುಗುರಿ, ಗೋಲಿ, ಚೌಕಾಬಾರ, ಹಗ್ಗ ಜಗ್ಗಾಟ, ಲಗೋರಿ, ಆಣೆಕಲ್ಲು, ಕುಂಟೆ ಬಿಲ್ಲೆ ಆಟಗಳನ್ನು ಆಡಿಸುವುದು, ರಾಗಿ ಬೀಸುವುದು, ಭತ್ತ ಕುಟ್ಟುವುದು, ಮಡಿಕೆ ಮಾಡುವುದು, ಬುಟ್ಟಿ ಹೆಣೆಯುವುದನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಾಲಮಂದಿರದ ಮಕ್ಕಳಿಂದ ರಚಿತವಾದ ಕಥೆ ಕವನಗಳ ಸಂಕಲನ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಬಾಲಮಂದಿರದಲ್ಲಿದ್ದು ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಅಂಕ ಪಡೆದ 81 ಮಕ್ಕಳಿಗೆ ಅಭಿನಂದನೆ ಸಲ್ಲಿಸಲು ನಿರ್ಧರಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಅವರ ಪೋಷಕರ ಮೊಬೈಲ್ ಸಂಖ್ಯೆಯನ್ನು ಮಕ್ಕಳ ಕೈಗೆ ಬಾಂಡ್ ಮಾದರಿಯಲ್ಲಿ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಶೌರ್ಯ ಪ್ರಶಸ್ತಿ: ಯಾರಾದರೂ ಅಪಾಯದಲ್ಲಿದ್ದಾಗ ಸಮಯ ಪ್ರಜ್ಞೆ ತೋರಿ ಪ್ರಾಣಾಪಾಯದಿಂದ ಪಾರು ಮಾಡಿರುವ 7 ಮಕ್ಕಳಿಗೆ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದ್ದು, ತಲಾ 10 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಅಲ್ಲದೇ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾಲ್ಕು ಸಂಸ್ಥೆಗಳು ಹಾಗೂ 4 ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು. ಸಂಸ್ಥೆಗಳಿತೆ ತಲಾ 1 ಲಕ್ಷ, ವ್ಯಕ್ತಿಗಳಿಗೆ ತಲಾ 25 ಸಾವಿರ ನಗದು ಬಹುಮಾನ ನೀಡಲಾಗುವುದ ಎಂದು ತಿಳಿಸಿದರು.