ಇಂಫಾಲ್: ಮಣಿಪುರದಲ್ಲಿ ಅಧಿಕಾರ ಹಿಡಿಯಲು ನಡೆದ ಜಿದ್ದಾಜಿದ್ದಿಯಲ್ಲಿ ಕೊನೆಗೂ ಕಾಂಗ್ರೆಸ್ ಎದುರು ಬಿಜೆಪಿ ಗೆದ್ದಿದೆ. ಬಹುಮತ ತಮಗೇ ಇದೆ ಎಂದು ಹೇಳಿಕೊಂಡಿರುವ ಬಿಜೆಪಿ ಸೋಮವಾರ ಸಂಜೆ ಎನ್. ಬಿರೇನ್ ಸಿಂಗ್‌ರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಇವರೇ ಬಿಜೆಪಿ ಸಿಎಂ ಅಭ್ಯರ್ಥಿ ಎಂದಿದೆ. ಇತ್ತ ಸಿಎಂ ಹುದ್ದೆಗೆ ಕಾಂಗ್ರೆಸ್‌ನ ಒಕ್ರಾಮ್ ಇಬೋಬಿ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂದಿನ ಸರಕಾರ ರಚನೆಗೆ ಅನುವು ಮಾಡಿಕೊಡಲು ಒಕ್ರಾಮ್ ಇಬೋಬಿ ಸಿಂಗ್ ಅವರಿಗೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಮಣಿಪುರ ರಾಜ್ಯಪಾಲರಾದ ನಜ್ಮಾ ಹೆಪು¤ಲ್ಲಾ ಸೂಚಿಸಿದ್ದರು. ಇದರಂತೆ ಅವರು ಸೋಮವಾರ ರಾತ್ರಿರಾಜೀನಾಮೆ ರವಾನಿಸಿದ್ದಾರೆ.
ರವಿವಾರ ತಡರಾತ್ರಿ ಇಬೋಬಿ ಅವರು ಡಿಸಿಎಂ ಗೈಖಮ್‌ಗಮ್, ಕಾಂಗ್ರೆಸ್ ಅಧ್ಯಕ್ಷ ಹೌಕಿಪ್‌ರೊಂದಿಗೆ ರಾಜಭವನಕ್ಕೆ ಧಾವಿಸಿ, ತಮಗೆ ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಆದರೆ, “ಸಂವಿಧಾನದ ಪ್ರಕಾರ ಅಧಿಕಾರದಲ್ಲಿರುವ ಸಿಎಂ ರಾಜೀನಾಮೆ ನೀಡದೆ, ಸರಕಾರ ರಚನೆಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಹೆಫ್ತುಲ್ಲಾ ಹೇಳಿದ್ದರು. “ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಗೆದ್ದಿದ್ದು, ರಾಜೀನಾಮೆ ನೀಡಲಾರೆ’ ಎಂದಿದ್ದ ಒಕ್ರಾಮ್ ಕೊನೆಗೆ ರಾಗ ಬದಲಿಸಿ, “ಸಿಎಂ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡುವೆ’ ಎಂದು, ಅದರಂತೆ ನಡೆದಿದ್ದಾರೆ.
ಬಿಜೆಪಿ ಸಾಹಸ: ಇನ್ನೊಂದೆಡೆ, ಗೋವಾದಲ್ಲಿ ಅಧಿಕಾರ ಹಿಡಿದ ಬಿಜೆಪಿ ಅದೇ ಮಾರ್ಗ ಅನುಸರಿಸಿ, ಮಣಿಪುರವನ್ನು ವಶಕ್ಕೆ ತೆಗೆದುಕೊಳ್ಳಲು ಸಕಲ ಸಾಹಸ ನಡೆಸುತ್ತಿದೆ. 21 ಶಾಸಕರನ್ನು ಹೊಂದಿರುವ ಬಿಜೆಪಿಗೆ ಎನ್‌ಪಿಪಿಯ 4 ಶಾಸಕರು ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಎನ್‌ಪಿಪಿ ಅಧ್ಯಕ್ಷ ಬಿಜೆಪಿ ಮುಖಂಡರ ಜತೆಯಲ್ಲಿಯೇ ಓಡಾಡುತ್ತಿದ್ದಾರೆ. 4 ಎನ್‌ಪಿಎಫ್ ಶಾಸಕರ ಬೆಂಬಲವೂ ಕಮಲ ಪಕ್ಷಕ್ಕಿದೆ. ಕಾಂಗ್ರೆಸ್‌ನ ಒಬ್ಬ ಶಾಸಕ ಬಿಜೆಪಿ ತೆಕ್ಕೆಗೆ ಬರಲು ಸಿದ್ಧರಾಗಿದ್ದಾರೆ. ಆದರೆ, ಇದಿನ್ನೂ ಅಧಿಕೃತವಾಗಿಲ್ಲ. ಇವರೊಂದಿಗೆ ಟಿಎಂಸಿಯ ಒಬ್ಬ ಶಾಸಕ, ಎಲ್‌ಜೆಪಿಯ ಒಬ್ಬ ಶಾಸಕರೂ “ಕೇಸರಿ’ ಪಾಲಾಗಿದ್ದಾರೆ. “ಆಂಡ್ರೋ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್ ಶಾಸಕ ಶ್ಯಾಮ್‌ಕುಮಾರ್ ನಮ್ಮೊಂದಿಗಿದ್ದಾರೆ. ಆಲ್‌ಇಂಡಿಯಾ ತೃಣಮೂಲ ಕಾಂಗ್ರೆಸ್‌ನ ರವಿಂದ್ರೋ ಬಿಜೆಪಿ ಸೇರಿದ್ದಾರೆ. 30 ಶಾಸಕರ ಅಧಿಕೃತ ಬೆಂಬಲ ಪತ್ರ ನಮ್ಮ ಬಳಿ ಇದೆ. ಇನ್ನೂ ಇಬ್ಬರು ಶಾಸಕರು ಬೆಂಬಲ ಸೂಚಿಸಿದ್ದಾರೆ’ ಎಂದು ಬಿಜೆಪಿಯ ಹಿಮಾಂತ ಬಿಸ್ವಾ ಹೇಳಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ಎನ್‌ಪಿಪಿ 4, ಎಲ್‌ಜಿಪಿಯ ಒಬ್ಬ ಶಾಸಕ, ಪಕ್ಷದ ಈಶಾನ್ಯ ರಾಜ್ಯಗಳ ಉಸ್ತುವಾರಿ ರಾಮ್ ಮಾಧವ್, ಬಿಸ್ವಾ ಶರ್ಮಾ ನಡೆಸಿದ ಸುದ್ದಿಗೋಷ್ಠಿ ವೇಳೆ ಹಾಜರಿದ್ದರು.
ಒಂದು ವೇಳೆ ಬಿಜೆಪಿ ಸರಕಾರ ರಚನೆಗೊಂಡರೆ ಪಕ್ಷದ ಪಾಲಿಗೆ ಮಣಿಪುರದಲ್ಲಿ ಅಧಿಕಾರದ ಮೊದಲ ಇನ್ನಿಂಗ್ಸ್ ಇದಾಗಲಿದೆ.
ಪೇಪರ್ ಬೆಂಬಲ ಬೇಕಿಲ್ಲ
ಕಾಂಗ್ರೆಸ್ ಗೆದ್ದಿರುವ 28 ಸ್ಥಾನಗಳೊಂದಿಗೆ, ಎನ್‌ಪಿಪಿ 4 ಶಾಸಕರು ತಮ್ಮ ಜತೆಗಿದ್ದಾರೆ ಎಂದು ಇಬೋಬಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, “ಸಾಮಾನ್ಯ ಹಾಳೆಯಲ್ಲಿ ಎನ್‌ಪಿಪಿ ಶಾಸಕರ ಹೆಸರು ಬರೆದು ಬೆಂಬಲವಿದೆ ಎಂದು ಹೇಳಿದರೆ ನಂಬುವುದು ಹೇಗೆ? ಮೊದಲು ಪೆರೇಡ್‌ಗೆ ಕರೆತನ್ನಿ’ ಎಂದಿದ್ದಾರೆ.
ಹೈಜಾಕ್ ಇದೇ ಮೊದಲಲ್ಲ!
ಜಮ್ಮು ಕಾಶ್ಮೀರದಲ್ಲಿ 2002ರಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಬಹುದೊಡ್ಡ ಪಕ್ಷವಾಗಿ ಹೊರಹೊರಮ್ಮಿದರೂ, ಪಿಡಿಪಿ ಜತೆಗೆ ಹೆಚ್ಚು ಶಾಸಕರಿದ್ದ ಕಾರಣ ರಾಜ್ಯಪಾಲರು ಪಿಡಿಪಿಗೆ ಅಧಿಕಾರ ವಹಿಸಿಕೊಳ್ಳಲು ಸೂಚಿಸಿದ್ದರು.
ತೀರಾ ಇತ್ತೀಚೆಗೆ ತೆಲಂಗಾಣ ರಾಷ್ಟ್ರ ಸಮಿತಿ ಸರಕಾರ ರಚಿಸುವಾಗ, ಟಿಡಿಪಿಯ 15ರಲ್ಲಿ 12 ಶಾಸಕರನ್ನು, ಕಾಂಗ್ರೆಸ್‌ನ 21ರಲ್ಲಿ 7 ಶಾಸಕರನ್ನು ಸೆಳೆದು ಸರಕಾರ ರಚಿಸಿತ್ತು.
ಕಾಂಗ್ರೆಸ್‌ನ ದುರಾಡಳಿತವನ್ನು ಖಂಡಿಸಿ ನಾನು ಆ ಪಕ್ಷವನ್ನು ತ್ಯಜಿಸಿದ್ದೆ. ಈಗ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಮ್ಮ ತಂಡವು ಮಣಿಪುರದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಲಿದೆ. ನನ್ನನ್ನು ಆಯ್ಕೆ ಮಾಡಿದ ಪ್ರಧಾನಿ ಹಾಗೂ ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಬಯಸುತ್ತೇನೆ.
ಎನ್. ಬೀರೇನ್ ಸಿಂಗ್, ಮಣಿಪುರ ಸಿಎಂ ಅಭ್ಯರ್ಥಿ