Advertisement

ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?

12:40 PM Jul 29, 2021 | ಶ್ರೀರಾಜ್ ವಕ್ವಾಡಿ |
ತಂದೆ ಎಸ್. ಆರ್ ಬೊಮ್ಮಾಯಿ ಅವರ ಕಾಲದಲ್ಲಿದ್ದ ಸ್ಥಿತಿಗೂ, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿರುವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆದರೂ, ತಂದೆಗಾದ ಪರಿಸ್ಥಿತಿ ಆಗಬಹುದು ಎನ್ನುವುದನ್ನು ತೆಗೆದು ಹಾಕುವಂತಿಲ್ಲ. ಪರ ವಿರೋಧ ಬಣಗಳ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಇನ್ನುಳಿದ ಅವಧಿ ಮುಗಿದು ಹೋಗುತ್ತದೆಯೇ ಎಂಬ ಆತಂಕ ಕೂಡ ಸೃಷ್ಟಿಯಾಗಿದೆ. ಮಾತ್ರವಲ್ಲದೇ, ಯಡಿಯೂರಪ್ಪ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದರೂ ಕೂಡ ರಾಜ್ಯ ಬಿಜೆಪಿಯಲ್ಲಿ ಅವರ ಹಿಡಿತ ಇನ್ನು ಮುಂದೆಯೂ ಪರೋಕ್ಷವಾಗಿಯಾದರೂ ಇರಲಿದೆ ಎಂಬುವುದು ಸತ್ಯ. ಕೃಷ್ಣ ಅರ್ಜುನನ ಸಾರಥಿಯಾಗಿ ಹೇಗೆ ಯುದ್ಧ ಕಾಲದಲ್ಲಿ ಜೊತೆಗಿದ್ದಿದ್ದನೋ ಹಾಗೆಯೇ  ಹಾಲಿ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಲ್ಲೇ ಇರುತ್ತಾರೆ ಎನ್ನುವುದರ ಸಣ್ಣ ಎಳೆ ಈಗಾಗಲೇ ಕಾಣಿಸಿಕೊಂಡಿದೆ.
Now pay only for what you want!
This is Premium Content
Click to unlock
Pay with

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಿಗೆ, ಈಗ ಸಚಿವ ಸಂಪುಟದ ಬಗ್ಗೆ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಪಡೆಯುವುದರೊಂದಿಗೆ ಹಲವಾರು ಸವಾಲುಗಳನ್ನು ಕೂಡ ಪರೋಕ್ಷವಾಗಿ ಸ್ವೀಕಾರ ಮಾಡಿದ್ದಾರೆ ಬೊಮ್ಮಾಯಿ.

Advertisement

ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಇದ್ದ ಅಸಮಧಾನ ಸರಿಹೋಗಿದೆ ಎಂದುಕೊಂಡರೇ, ಅದು ಪದಶಃ ತಪ್ಪು. ನೂತನ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಕೆಲವು ಕ್ಷಣಗಳಲ್ಲೇ ಬಣ ರಾಜಕೀಯದ ಸುಳಿವು ಸಿಕ್ಕಿದೆ. ಎನ್ನುವಲ್ಲಿಗೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ನೂತನ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಗಳಿಗೂ ತಡೆಯಾಗಬಹುದು ಎನ್ನುವುದು ಕೂಡ ಖಚಿತ.

ಈ ನಡುವೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಯಾಗಿ ಇರುತ್ತಾರೆ ಎನ್ನುವ ಟೀಕೆ, ವಿಮರ್ಶೆಗಳ  ನಡುವಿನಲ್ಲೇ, ‘ಇಲ್ಲ ನಾನು ಯಾರ ರಬ್ಬರ್ ಸ್ಟ್ಯಾಂಪ್  ಆಗಿ ಇರುವುದಿಲ್ಲ’ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರೂ ಕೂಡ ರಬ್ಬರ್ ಸ್ಟ್ಯಾಂಪ್ ಆಗಿಯೇ ಇರುತ್ತಾರೆ, ಯಡಿಯೂರಪ್ಪರ ನೆರಳಾಗಿಯೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದಕ್ಕೆ ನಿನ್ನೆ ಮೊನ್ನೆಯ ಒಂದಿಷ್ಟು ಬೊಮ್ಮಾಯಿ ಅವರ ನಡೆಗಳು ತೋರಿಸಿಕೊಟ್ಟಿವೆ. ಎಂಬಲ್ಲಿಗೆ ಬೊಮ್ಮಾಯಿ ಯಡಿಯೂರಪ್ಪರ ಅಭಯದಲ್ಲೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಸುಸ್ಪಷ್ಟ.

ಇದನ್ನೂ ಓದಿ : ಸುಪ್ರೀಂ ತೀರ್ಪು ಬಂದ ಕೂಡಲೇ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ

ರಾಜ್ಯ ಬಿಜೆಪಿ ರಾಜಕಾರಣ ಈಗ ಮಹಾಭಾರತದ ಪ್ರಸಂಗ ಆದಂತಾಗಿದೆ. ರಾಜ್ಯ ಬಿಜೆಪಿಗೆ ಈಗ ಯುದ್ಧ ಕಾಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಪಾರ್ಥನ ರಥ ಸಾರಥಿಯಾಗಿ ಕೃಷ್ಣ ನಿಂತಿದ್ದು ನಿಮಗೆಲ್ಲಾ ತಿಳಿದೇ ಇದೆ. ಮುಂದೇನಾಯಿತು ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕಿಂದಿಲ್ಲ.  ರಾಜ್ಯ ಬಿಜೆಪಿ ಇಬ್ಭಾಗವಾಗಿದೆ ಎನ್ನುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಕಾಣಿಸಿದ್ದು ಎಲ್ಲರಿಗೂ ತಿಳಿದಿದೆ. ಆ ವೈಮನಸ್ಸಿಗೆ ಹೈಕಮಾಂಡ್ ಮುಲಾಮು ಹಚ್ಚುವ ಕೆಲಸ ಮಾಡಿದರೂ ಕೂಡ ಅದು ಸರಿ ಹೋಗಿಲ್ಲ ಎನ್ನುವುದು ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಬೆಳವಣಿಗಳೇ ಸಾಕ್ಷಿ.

Advertisement

ಇನ್ನು, ಪರ ವಿರೋಧ ಬಣಗಳ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಇನ್ನುಳಿದ ಅವಧಿ ಮುಗಿದು ಹೋಗುತ್ತದೆಯೇ ಎಂಬ ಆತಂಕ ಕೂಡ ಸೃಷ್ಟಿಯಾಗಿದೆ. ಮಾತ್ರವಲ್ಲದೇ, ಯಡಿಯೂರಪ್ಪ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದರೂ ಕೂಡ ರಾಜ್ಯ ಬಿಜೆಪಿಯಲ್ಲಿ ಅವರ ಹಿಡಿತ ಇನ್ನು ಮುಂದೆಯೂ ಪರೋಕ್ಷವಾಗಿಯಾದರೂ ಇರಲಿದೆ ಎಂಬುವುದು ಸತ್ಯ. ಕೃಷ್ಣ ಅರ್ಜುನನ ಸಾರಥಿಯಾಗಿ ಹೇಗೆ ಯುದ್ಧ ಕಾಲದಲ್ಲಿ ಜೊತೆಗಿದ್ದಿದ್ದನೋ ಹಾಗೆಯೇ  ಹಾಲಿ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಲ್ಲೇ ಇರುತ್ತಾರೆ ಎನ್ನುವುದರ ಸಣ್ಣ ಎಳೆ ಈಗಾಗಲೇ ಕಾಣಿಸಿಕೊಂಡಿದೆ.

ಹೀಗಾದರೇ, ಮುಂದೆ ಹೇಗೆ..?

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ವರಿಷ್ಠರು ಕಳುಹಿಸಿದ ವೀಕ್ಷಕರೀರ್ವರ ಮುಂದೆ ತಮ್ಮ ಆಪ್ತ ಬಳಗದಲ್ಲಿ ಓರ್ವರಾದ ಬಸವರಾಜ  ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದಾಗಲೇ ಪಕ್ಷದಲ್ಲಿ ಕೆಲವು ದಶಕಗಳಿಂದ ದುಡಿಯುತ್ತಿದ್ದ ಪ್ರಭಾವಿ ನಾಯಕರ ಮನಸ್ಸಿನೊಳಗೆ ಸಣ್ಣ ಕಿಡಿಯೊಂದು ಹೊತ್ತಿ ಕೊಂಡಿದೆ. ಆ ಕಿಡಿ ಸಣ್ಣ ಕಡ್ಡಿಯೊಳಗಡಗಿದ ಕಾಡು ಸುಡುವ ಬೆಂಕಿಯಂತಿದೆ ಎನ್ನುವ ವಿಚಾರವನ್ನು ತೆಗೆದು ಹಾಕುವಂತಿಲ್ಲ. ಯಾವಾಗ ಬೇಕಾದರೂ ಆ ಬೆಂಕಿ ತನ್ನ ಕೆನ್ನಾಲಿಗೆಯನ್ನು ವಿಸ್ತರಿಸಿಕೊಳ್ಳಬಹುದೆನ್ನುವುದಕ್ಕೆ ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ಅವರ ನಡೆಯೇ ದೊಡ್ಡ ಸಾಕ್ಷಿ.

ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದ ಹಿಮಂತ್ ಬಿಸ್ವಾ ಮಿಶ್ರಾ ಅವರಿಗೆ ಅಸ್ಸಾಂ ನ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿದಂತೆಯೇ, ಇಲ್ಲಿಯೂ ಕೂಡ ಸಂಯುಕ್ತ ಜನತದಳದಿಂದ ಬಿಜೆಪಿಗೆ ವಲಸೆ ಬಂದ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಮಣೆ ಹಾಕಿ, ಪಕ್ಷಕ್ಕೆ ನಿಷ್ಠೆಯಿಂದ ಇರುವವರಿಗೆ ಪಕ್ಷ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯನ್ನೂ ಕೂಡ ನೀಡುತ್ತದೆ ಎಂಬ ಸಂದೇಶವನ್ನು ಪಕ್ಷದೊಳಗೇ ಇದ್ದು, ಪಕ್ಷದ ಕೆಲವು ನಡೆಗಳನ್ನು ಕಟುವಾಗಿ ಟೀಕಿಸುತ್ತಿರುವ ಕೆಲವರಿಗೆ ಹಾಗೂ ಇಡೀ ದೇಶಕ್ಕೆ ಒಂದು ಹೊಸ ಸಂದೇಶವನ್ನು ನೀಡುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆಯಾದರೂ, ಆ ತಂತ್ರ ಕರ್ನಾಟಕದಲ್ಲಿ ಸಫಲ ಆಗುತ್ತದೆಯೇ ಎ‍ನ್ನುವ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಎದ್ದಿದೆ.

ತಂದೆಗಾದ ಪರಿಸ್ಥಿತಿ ಮಗನಿಗೂ ಆಗಲಿದೆಯೇ..?   

ಈಗಿನ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಆರ್.  ಬೊಮ್ಮಾಯಿ ಅವರಿಗಾದ ಪರಿಸ್ಥಿತಿಯನ್ನೇ ಎದುರಿಸಬಹುದೆಂದೆನ್ನಿಸುತ್ತಿದೆ. ಬಿ ಎಸ್ ಯಡಿಯೂರಪ್ಪ ತಮ್ಮ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣ ಒಂದು ಮಹತ್ತರ ತಿರುವು ಕಂಡಿದೆ.  ರಾಜ್ಯ ರಾಜಕೀಯದಲ್ಲಿ ಒಂದು ಕ್ಷಿಪ್ರ ಕ್ರಾಂತಿಯಾಗಿದೆ. ಮುಂದೆ ಈ ಕ್ರಾಂತಿಯನ್ನು ಬಿಜೆಪಿ ಮೂಲದವರು ಒಪ್ಪಿಕೊಳ್ಳುತ್ತಾರೆಯೇ ಎನ್ನುವುದು ಕೂಡ ಇದುವರೆಗೆ ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು,  ಹಿಂದೆ ಇದ್ದ ಯಡಿಯೂರಪ್ಪ ಅವರ ವಿರೋಧಿ ಬಣ ಮತ್ತಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದೆ ಮತ್ತೆ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗಬಹುದು ಎನ್ನವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಹಿರಿಯ ನಾಯಕ ಈಶ್ವರಪ್ಪ ‘ಇನ್ನೂ  ಬದಲಾವಣೆ ಆಗಲಿದೆ” ಎಂದು ಬಂಡಾಯದ ಸೂಚನೆ ನೀಡಿದ್ದು, ಸರ್ಕಾರದ ರಚನೆಯಾಗಿ ಕೆಲವು ತಿಂಗಳುಗಳ ನಂತರದಲ್ಲಿ ಇದರ ಪರಿಣಾಮ ಒಂದೊಂದಾಗಿ ಕಾಣಿಸಿಕೊಳ್ಳಬಹುದು.  ವಿರೋಧಿ ಬಣದ ಅವಿಶ್ವಾಸ, ಶಾಸಕರ ಸಾಮೂಹಿಕ ರಾಜೀನಾಮೆ ಎಲ್ಲದರ ಸುಳಿವನ್ನು ಈಶ್ವರಪ್ಪ ಬಿಟ್ಟುಕೊಟ್ಟರೇ, ಮತ್ತೆ ‘ಬೊಮ್ಮಾಯಿ ಪ್ರಕರಣ’ ರಾಜ್ಯದಲ್ಲಿ ಆಗಬಹುದೇ..? ಎಂಬ ದೊಡ್ಡ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಏನದು “ಬೊಮ್ಮಾಯಿ ಪ್ರಕರಣ”..?

ಬೊಮ್ಮಾಯಿ ಪ್ರಕರಣ ಇಂದಿಗೂ ಚಾಲ್ತಿಯಲ್ಲಿದೆ. 2019ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ನೇತೃತ್ವದ ಸರ್ಕಾರ ಪತನವಾದಾಗ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಪತನವಾದಾಗ ‘ಬೊಮ್ಮಾಯಿ ಪ್ರಕರಣ’ ಸುದ್ದಿ ಮಾಡಿತ್ತು.

1989 ರ ಏಪ್ರಿಲ್ ತಿಂಗಳು. ಜನತಾ ಪಕ್ಷದಿಂದ ಎಸ್. ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಒಂಬತ್ತು ತಿಂಗಳಾಗಿತ್ತಂದು. ಆ ಸಂದರ್ಭದಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬೊಮ್ಮಾಯಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದರು. ಆಗ ಎಸ್. ಆರ್. ಬೊಮ್ಮಾಯಿ ಅವರ ಸ್ಥಾನ ಅಲುಗಾಡಿತ್ತು.

ಎಸ್. ಆರ್ ಬೊಮ್ಮಾಯಿ ಬಹುಮತ ಸಾಬೀತು ಪಡಿಸುವುದಕ್ಕೆ ಕಾಲಾವಕಾಶವನ್ನು ರಾಜ್ಯಪಾಲರಲ್ಲಿ ಕೋರಿದರಾದರೂ, ಸಫಲವಾಗಿಲ್ಲ.  ಮರುದಿನವೇ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯನವರು ಶಿಫಾರಸ್ಸು ಮಾಡಿದರು.

ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ತಮ್ಮ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಅಲ್ಲಿಗೆ ಎಸ್.ಆರ್‌ ಬೊಮ್ಮಾಯಿಯವರ ಸರ್ಕಾರ ಒಂಬತ್ತೇ ತಿಂಗಳಲ್ಲಿ ಪತನವಾಗಿತ್ತು.

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಎಸ್. ಆರ್ ಬೊಮ್ಮಾಯಿ ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ತ್ವರಿತ ವಿಚಾರಣೆ ಮಾಡಿದ್ದ ಹೈ ಕೋರ್ಟ್‌ ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಹೈ ಕೋರ್ಟ್ ನಲ್ಲಿಯೂ ಎಸ್. ಆರ್.  ಬೊಮ್ಮಾಯಿಯವರ ಪ್ರಯತ್ನ ವಿಫಲವಾಯಿತು. ಇದಾದ ಬಳಿಕ ಬೊಮ್ಮಾಯಿ ಸುಪ್ರೀಂ ಕೋರ್ಟ್‌ ಅಂಗಳಕ್ಕಿಳಿದರೂ ಕೂಡ ಮತ್ತದೇ ವಿಫಲ ಯತ್ನ. ಅಂದು ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು.

ತಂದೆ ಎಸ್. ಆರ್ ಬೊಮ್ಮಾಯಿ ಅವರ ಕಾಲದಲ್ಲಿದ್ದ ಸ್ಥಿತಿಗೂ, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿರುವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆದರೂ, ತಂದೆಗಾದ ಪರಿಸ್ಥಿತಿ ಆಗಬಹುದು ಎನ್ನುವುದನ್ನು ತೆಗೆದು ಹಾಕುವಂತಿಲ್ಲ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.