ಲಕ್ನೋ: ನಡೆದು ಹೋಗುವಾಗ ರಸ್ತೆಯಲ್ಲಿ ಒಂದು ನೂರರ ನೋಟು ಕಂಡರೆ ಅತ್ತಿತ್ತ ನೋಡಿ, ತಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಮಾಡಿಕೊಂಡು ಮೆತ್ತಗೆ ಆ ನೋಟು ಎತ್ತಿ ಜೇಬಿಗಿರಿಸಿಕೊಳ್ಳುವ ಕಾಲವೊಂದಿತ್ತು… ಆದರೆ ಈಗ ನೋಡಿ, ರೋಡಲ್ಲಿ 500 ರೂ.ಗಳ ಎರಡು ನೋಟು ಬಿದ್ದಿದ್ದರೆ ಜನ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ!
ಜನ ಇಷ್ಟೊಂದು ಪ್ರಾಮಾಣಿಕರಾದರಾ ಎಂದು ಯೋಚಿಸಬೇಡಿ. ಇದು ಪ್ರಾಮಾಣಿಕತೆಗೆ ನೀಡುತ್ತಿರುವ ಉದಾಹರಣೆಯಲ್ಲ. ಕೋವಿಡ್ ವೈರಸ್ ಸೋಂಕು ಸೃಷ್ಟಿಸಿರುವ ಭಯಕ್ಕೆ ಒಂದು ನಿದರ್ಶನ!
ಬುಧವಾರ ರಾತ್ರಿ ಲಕ್ನೋದ ಪೇಪರ್ ಮಿಲ್ ಕಾಲೋನಿಯಲ್ಲಿ ಬಿದ್ದಿದ್ದ 500 ರೂ. ಮೌಲ್ಯದ ಎರಡು ನೋಟುಗಳು ಭಾರೀ ಆತಂಕವನ್ನೇ ಸೃಷ್ಟಿಸಿವೆ. ನೋಟು ತಂದಿಟ್ಟ ಆತಂಕ ಎಷ್ಟರ ಮಟ್ಟಿಗಿತ್ತೆಂದರೆ ಇಡೀ ಕಾಲೋನಿಯ ಜನ ರಾತ್ರಿಯಿಡೀ ನಿದ್ದೆ, ನೀರು ಬಿಟ್ಟು ಕುಳಿತಿದ್ದರು.
ನೋಟು ಕಂಡ ಸಾರ್ವಜನಿಕರು ಕೂಡಲೇ ಸಹಾಯವಾಣಿಗೆ ಕರೆ ಮಾಡಿ, ಇಲ್ಲಿ ಎರಡು ನೋಟುಗಳು ಬಿದ್ದಿವೆ ದುಷ್ಕರ್ಮಿಗಳು ಅವುಗಳಿಗೆ ಕೋವಿಡ್ ವೈರಸ್ ಅಂಟಿಸಿ ಇರಿಸಿರುವ ಅನುಮಾನ ವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸುರಕ್ಷತಾ ಸಾಧನ ಬಳಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸ್ಥಳೀಯ ವೈದ್ಯರೊಬ್ಬರ ಸಲಹೆ ಮೇರೆಗೆ ನೋಟುಗಳನ್ನು 24 ಗಂಟೆಗಳವರೆಗೆ ಪ್ರತ್ಯೇಕವಾಗಿ ಇರಿಸಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ವೈರಲ್ ಆಗಿರುವ ವಿಡಿಯೋ ನೋಡಿದ ಜನ ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಕಂಡು ಆತಂಕಕ್ಕೊಳಗಾಗಿದ್ದರು.