Advertisement

ವಿಲ್ ಬರೆಯುವುದು ಹೇಗೆ ಗೊತ್ತಾ?

09:59 AM Jul 29, 2019 | keerthan |

‘ಮನಸ್ಸಿದ್ದಲ್ಲಿ ಮಾರ್ಗ, ಉಯಿಲಿದ್ದಲ್ಲಿ ನೆಂಟ.’ ಇದು ಹಿರಿಯರ ಮಾತು. ಒಬ್ಬ ವ್ಯಕ್ತಿ, ತಾನು ಸಂಪಾದಿಸಿದ ಆಸ್ತಿಯನ್ನು, ತನ್ನ ಮರಣಾನಂತರ ಅದು ಯಾರಿಗೆ ಹೋಗಬೇಕು ಎಂದು ಮನಸ್ಸು ಮಾಡಿ ನಿರ್ಧಾರ ತಾಳಿ, ಮನಸ್ಸಿನ ಆ ನಿರ್ಧಾರದಂತೆ ಬರೆದಿಡುವ ಒಂದು ದಾಖಲೆಗೆ ಇಂಗ್ಲೀಷಿನಲ್ಲಿ ‘ವಿಲ್’ ಎಂದು, ಕನ್ನಡದಲ್ಲಿ ‘ಉಯಿಲು’ ಎಂದು ಕರೆಯುತ್ತಾರೆ.

Advertisement

ಕಡ್ಡಾಯ ನಿಯಮಗಳು
ವಿಲ್ ಬರೆಯುವವರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವು ಯಾವುವೆಂದರೆ

1. ವಿಲ್ಲು ಬರೆಯುವವನಿಗೆ ಬುದ್ದಿ ಸ್ಥಿಮಿತದಲ್ಲಿರಬೇಕು.
2. ಆಸ್ತಿಯ ಪೂರ್ಣ ವಿವರ ಕೊಡಬೇಕು.
3. ಆಸ್ತಿಯನ್ನು ಯಾರಿಗೆ ಕೊಡುತ್ತಿದ್ದೇನೆ ಎಂಬುದನ್ನು ನಿಖರವಾಗಿ ಸೂಚಿಸಿರಬೇಕು.
4. ಉಯಿಲು ಪತ್ರ ಬರೆದವನು ಅದಕ್ಕೆ ಸಹಿ ಹಾಕಿರಬೇಕು.
5. ತನಗೋಸ್ಕರ ಉಯಿಲನ್ನು ಬರೆದಾತ, ಎಂದರೆ ಆಸ್ತಿಯ ಒಡೆಯ ಸಹಿ ಹಾಕಿರಬೇಕು. ಅವನು ಸಾಕ್ಷಿ ಆಗುವುದಿಲ್ಲ.
6. ಉಯಿಲನ್ನು ಬರೆದಾತ ಆ ಉಯಿಲಿಗೆ ತಾನೇ ಸಹಿ ಮಾಡಿದುದನ್ನು ನೋಡಿದ ಇಬ್ಬರು ಸಾಕ್ಷಿಗಳು ತಮ್ಮ ಸಾಕ್ಷಿ ರುಜುವನ್ನು ಉಯಿಲು ಪತ್ರದಲ್ಲಿ ಹಾಕಿರಬೇಕು.

ಉಯಿಲನ್ನು ಸಹಿ ಮಾಡುವವನು ಸಾಕ್ಷಿಗಳ ರೂಬು ಬೂಬು ಸಹಿ ಮಾಡಲೇ ಬೇಕೆಂದಿಲ್ಲ. ತಾನು ಸಹಿ ಮಾಡಿದುದಾಗಿ ಸಾಕ್ಷಿಗಳ ಮುಂದೆ ಒಪ್ಪಿಕೊಂಡರೆ ಸಾಕು. ಆದರೆ ಸಾಕ್ಷಿಗಳು ಮಾತ್ರ ಅವನ ಸಮಕ್ಷಮದಲ್ಲಿಯೇ ಸಹಿಹಾಕಿ ತಮ್ಮ ಹೆಸರು ವಿಳಾಸವನ್ನು ಬರೆಯಬೇಕು. ಇಬ್ಬರು ಸಾಕ್ಷಿಗಳು ಇದ್ದೇ ಇರಬೇಕು. ಇಬ್ಬರಿಗಿಂತ ಹೆಚ್ಚು ಸಾಕ್ಷಿಗಳು ಬೇಕಾದರೆ, ಸಾಕ್ಷಿ ರುಜು ಹಾಕಬಹುದು. ಆದರೆ ಇದರಲ್ಲಿ ಒಂದು ಅತಿ ಮುಖ್ಯವಾದ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ವಿಲ್ಲಿನಿಂದ ಪ್ರಯೋಜನ ಪಡೆಯುವ ಯಾವನೇ ವ್ಯಕ್ತಿ ಉಯಿಲಿಗೆ ಸಾಕ್ಷಿ ಹಾಕಬಾರದು. ಅಂಥ ವ್ಯಕ್ತಿ ಬಿಕ್ಕಲಂದಾರನೂ ಆಗಬಾರದು. ಅಪ್ರಾಪ್ತ ವಯಸ್ಕನಾಗಿರಬಾರದು.

Advertisement

ಉಯಿಲನ್ನು ಯಾವ ಕಾಗದದ ಮೇಲೆ ಬರೆಯಬೇಕು?
ಉಯಿಲನ್ನು ಛಾಪಾ ಕಾಗದದ ಮೇಲೆ ಬರೆಯಬೇಕೆ ಹೇಗೆ? ಇದು ಹಲವರ ಪ್ರಶ್ನೆ. ಉಯಿಲಿನಲ್ಲಿ ಕೊಡಲ್ಪಡುವ ಆಸ್ತಿಗಳೆಲ್ಲಾ, ವ್ಯಕ್ತಿಯ ಮರಣಾನಂತರ ಕೊಡಲ್ಪಟ್ಟವರಿಗೆ ಸೇರುವುದರಿಂದ ಉಯಿಲನ್ನು ಛಾಪಾ ಕಾಗದದ ಮೇಲೆ ಬರೆಯಬೇಕಾದ್ದಿಲ್ಲ. ಬರಿಯ ಹಾಳೆಯ ಮೇಲೂ ಬರೆಯಬಹುದು, ಬರಿಯ ಹಾಳೆಯೆಂದರೆ ಎಂಥಧ್ದೋ ಕಾಗದದಲ್ಲಿ ಬರೆಯುವುದು ಸರಿಯಲ್ಲ.

ಒಳ್ಳೆಯ ಗುಣವುಳ್ಳ ಕಾಗದದಲ್ಲಿ ಬರೆದರೆ ಅನೇಕ ವರ್ಷಗಳು ಅದು ಹಾಳಾಗದೆ, ಹರಿಯದೆ ಇರುತ್ತದೆ. ಇನ್ನು ಪೆನ್ಸಿಲಲ್ಲಿ ಬರೆಯಬಹುದೇ? ಬೇಡವೇ? ಬರೆದರೂ ಬರೆಯಬುದೇನೋ. ಆದರೆ ಅಳಿಸಲಾಗದ ಮಸಿಯಲ್ಲಿ ಬರೆದರೆ ಕ್ಷೇಮ. ಚಿತ್ತು ಮಾಡುವುದಾಗಲೀ ಬರೆದಿದ್ದನ್ನು ಹೊಡೆದು ಹಾಕಿ, ಹೊಡೆದುದರ ಮೇಲೆ ಬರೆಯವುದಾಗಲೀ ಮಾಡದಿದ್ದರೆ ಒಳ್ಳೆಯದು.

ಅಂಥ ಅನಿವಾರ್ಯ ಬಂದರೆ, ಉಯಿಲನ್ನು ಹೊಸದೊಂದು ಹಾಳೆಯಲ್ಲಿ ಬರೆದರೆ ಒಳಿತು. ಅಥವಾ ಚಿತ್ತಾಗಿರುವ ಕಡೆ, ಹೊಡೆಯಲ್ಪಟ್ಟ ಕಡೆ ಸಹಿ ಮಾಡಬೇಕು ಮತ್ತು ಕಡೆಯಲ್ಲಿ ,ಇಂಥ ಪುಟದಲ್ಲಿ ,ಇಂಥ ಸಾಲಿನಲ್ಲಿ ಹೊಡೆದು ಸಹಿ ಮಾಡಿದ್ದೇನೆ ಎಂದು ಸ್ಪಷ್ಟವಾಗಿ ಬರೆದುಬಿಟ್ಟರೆ, ಅನುಮಾನಕ್ಕೆ ಆಸ್ಪದವಿರುವುದಿಲ್ಲ.

•ಎಸ್‌.ಆರ್‌. ಗೌತಮ್‌(ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next