ಜನರ ಬಳಿ ಹೋಗಿ ಮತ ಕೇಳಲು ಪ್ರತಿಯೊಬ್ಬ ಅಭ್ಯರ್ಥಿಗೆ ಚುನಾವಣಾ ಚಿಹ್ನೆ ಇರಬೇಕಾದ್ದು ಕಡ್ಡಾಯ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷದ ಅಭ್ಯರ್ಥಿಗಳಿಗೆ ಈಗಾಗಲೇ ಆ ಪಕ್ಷಗಳಿಗೆ ಮೀಸಲಿಟ್ಟ ಅಥವಾ ನಿಗದಿಯಾದ ಚಿಹ್ನೆಗಳನ್ನು ಮಾತ್ರ ಹಂಚಲಾಗುತ್ತದೆ.
ಮಾನ್ಯತೆ ಹೊಂದಿದ ಪಕ್ಷದ ಅಭ್ಯರ್ಥಿಗಳು ನಾಮಪತ್ರದಲ್ಲಿ ಚಿಹ್ನೆ ನಮೂದಿಸಬೇಕಾಗಿಲ್ಲ. ಉಳಿದಂತೆ ನೋಂದಾಯಿತ ಮಾನ್ಯತೆ ಹೊಂದಿಲ್ಲದ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಮತ್ತು ಪಕ್ಷೇತರರು ತಮ್ಮ ನಾಮಪತ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ಹಂಚಲು ಮಕ್ತವಾಗಿ ಇಟ್ಟಿರುವ ಚಿಹ್ನೆಗಳ ಪೈಕಿ ಮೂರು ಚಿಹ್ನೆಗಳನ್ನು ನಮೂದಿಸಬೇಕು.
ಆ ಮೂರರಲ್ಲಿ ಯಾವುದಾದರೂ ಒಂದು ಚಿಹ್ನೆಯನ್ನು ಅಭ್ಯರ್ಥಿಗೆ ಹಂಚಲಾಗುತ್ತದೆ. ಲೋಕಸಭೆ ಅಥವಾ ವಿಧಾನಸಭೆಗಳಿಗೆ ಚುನಾವಣೆ ಘೋಷಿಸುವ ಮೊದಲು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ, ರಾಜ್ಯ ಮಟ್ಟದ ಪಕ್ಷಗಳು, ನೊಂದಾಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳು ಮತ್ತು ಅವುಗಳ ಚಿಹ್ನೆಗಳು ಹಾಗೂ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಬಗ್ಗೆ ಅಧಿಸೂಚನೆ ಹೊರಡಿಸುತ್ತದೆ.
ಆ ಪಟ್ಟಿಯಲ್ಲಿರುವ ಚಿಹ್ನೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದು ರಾಜ್ಯದ ಮಾನ್ಯತೆ ಪಡೆದು, ಬೇರೆ ಕೆಲವು ರಾಜ್ಯಗಳಲ್ಲೂ ಅಸ್ತಿತ್ವ ಹೊಂದಿರುವ ಪಕ್ಷಗಳಿಗೆ ಮೂಲ ನೊಂದಾಯಿತ ರಾಜ್ಯದಲ್ಲಿ ಸಿಕ್ಕಿರುವ ಚಿಹ್ನೆ ಉಳಿದ ರಾಜ್ಯಗಳಲ್ಲಿ ಸಿಗುತ್ತದೆ ಎಂದು ಹೇಳಲಿಕ್ಕಾಗದು.
ಮಾನ್ಯತೆ ಹೊಂದಿಲ್ಲದ ಮತ್ತು ಪಕ್ಷೇತರರ ಅಭ್ಯರ್ಥಿಗಳ ಚುನಾವಣಾ ಚಿಹ್ನೆ ಗುರುತಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದರೆ, ಅವರು ಹೆಚ್ಚುವರಿಯಾಗಿ ಸಲ್ಲಿಸಿರುವ ನಾಮಪತ್ರ ಅಂಗೀಕಾರಗೊಂಡಿದ್ದರೆ, ತಿರಸ್ಕೃತಗೊಂಡ ಮೊದಲ ನಾಮಪತ್ರದಲ್ಲಿ ಗುರುತಿಸಿದ್ದ ಚುನಾವಣಾ ಚಿಹ್ನೆಯನ್ನು ಅಧಿಕೃತವಾಗಿ ಪರಿಗಣಿಸಲಾಗುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಕ್ತವಾಗಿ ಹಂಚಲು 199 ಚುನಾವಣಾ ಚಿಹ್ನೆಗಳನ್ನು ಗುರುತಿಸಿದೆ.