ಬಾಲಕ ಗೋಪಿಗೆ ದೇವರಲ್ಲಿ ತುಂಬಾ ಭಕ್ತಿ. ದೇವರನ್ನು ನೋಡಬೇಕೆಂಬ ಮಹದಾಸೆ. ದೇವರು ಹೇಗಿರಬಹುದು? ಆಕಸ್ಮಿಕವಾಗಿ ನನಗೆ ಕಂಡರೆ ನಾನು ಅವನನ್ನು ಗುರುತಿಸಲಾಗುವುದೇ? ಮುಂತಾಗಿ ಭಗವಂತನ ಬಗ್ಗೆ ಯೋಚಿಸುತ್ತಾ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು - ನಾನು ನಿನ್ನ ಜೊತೆಯಲ್ಲೇ ಇದ್ದೇನೆ ಎಂದು. ಆಗ ಗೋಪಿ, ಅದು ತನ್ನ ಭ್ರಮೆ ಇರಬಹುದು ಎಂದುಕೊಂಡ.
ಪುನಃ- “ನಾನು ನಿನ್ನ ಜೊತೆಯಲ್ಲೇ ಇದ್ದೇನೆ’; ಎಂದಿತು ಆ ಧ್ವನಿ. “ನೀನು ನನ್ನ ಜೊತೆಯಲ್ಲಿರುವೆ ಎನ್ನುವುದಕ್ಕೇನು ಸಾಕ್ಷಿ?’ ಎಂದ ಗೋಪಿ. “ನೀನು ಮೂರು ಹೆಜ್ಜೆಯಿಟ್ಟು, ಹಿಂದೆ ತಿರುಗಿನೋಡು’ ಎಂಬ ಉತ್ತರ ಬಂತು ಆ ಕಡೆಯಿಂದ. ಗೋಪಿ ಹಾಗೆಯೇ ಮಾಡಿದ. ಅವನ ಮೂರೂ ಹೆಜ್ಜೆಗಳ ಪಕ್ಕಪಕ್ಕದಲ್ಲಿಯೇ ಮೂರು ಹೆಜ್ಜೆಗಳಿದ್ದವು. ನಂತರ ಅವನು ಅದನ್ನು ಪರೀಕ್ಷಿಸಲು, ಪುನಃ ಹಾಗೆ ಮಾಡಿ ಖಚಿತಪಡಿಸಿಕೊಂಡ. ಗೋಪಿಗೆ ತುಂಬಾ ಸಂತೋಷವಾಯಿತು.
ಹೀಗಿರಲು ಒಂದು ದಿನ ಅವನು ತಿರುಗಿ ನೋಡಿದಾಗ ಅವನ ಹೆಜ್ಜೆಗಳ ಜೊತೆ ಬೇರೆ ಹೆಜ್ಜೆಗಳೇ ಇರಲಿಲ್ಲ. ಅವನಿಗೆ ತುಂಬಾ ದುಃಖವಾಯಿತು. “ನಾನೇನು ತಪ್ಪು ಮಾಡಿದೆ? ನನ್ನನ್ನು ನೀನೇಕೆ ಬಿಟ್ಟುಹೋದೆ? ನಾನು ನಿನ್ನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ’ ಎನ್ನುತ್ತಾ ಕುಳಿತ. ಆಗ ಅವನ ಮನದಾಳದಿಂದ- “ನಾನು ನಿನ್ನೊಳಗೇ ಇದ್ದೇನೆ’ ಎನ್ನುವ ಧ್ವನಿ ಕೇಳಿಸಿತು. “ನಾನು ನಿನ್ನನು ಹೇಗೆ ನೋಡಲಿ?’ ಎಂದು ಗೋಪಿ ಕೇಳಿದ. ಆಗ ಪುನಃ ಒಳಗಿನಿಂದ ಧ್ವನಿ ಬಂತು- “ಕಣ್ಣುಮುಚ್ಚಿ, ಹೊರಜಗತ್ತನ್ನು ಮರೆತು ನಿನ್ನೊಳಗೆ ನೀನು ನೋಡು. ಆಗ ನನ್ನನ್ನು ನೋಡಬಹುದು. ನಾನು ಎಲ್ಲೆಲ್ಲಿಯೂ ಇದ್ದೇನೆ’… “ಹಾಗಾದರೆ ನೀನು ಯಾರಿಗೂ ಏಕೆ ಕಾಣುವುದಿಲ್ಲ?’ ಗೋಪಿಗೆ ಇನ್ನೂ ಅನುಮಾನ. ಆಗ ಭಗವಂತ ಹೇಳಿದ- “ಕಸದರಾಶಿಯ ಮಧ್ಯದಲ್ಲಿ, ಅಮೂಲ್ಯ ರತ್ನವೊಂದನ್ನಿಟ್ಟು, ಸಾವಿರಾರು ದೀಪಗಳನ್ನೇ ಹಚ್ಚಿರಲಿ ಅಥವಾ ಸೂರ್ಯನ ಬೆಳಕೇ ಇರಲಿ, ಆ ರತ್ನವು ಕಾಣದು. ಹಾಗೆಯೇ ಮನದಲ್ಲಿ ದ್ವೇಷ- ಅಸೂಯೆ- ಅಸಮಾಧಾನ- ಅಹಂಕಾರಗಳು ತುಂಬಿಕೊಂಡಿದ್ದರೆ ಭಗವಂತನನ್ನ ಕಾಣಲು ಸಾಧ್ಯವಿಲ್ಲ. ನಿರ್ಮಲವಾದ ಮನಸ್ಸು, ನೋಡಬೇಕೆಂಬ ಹಂಬಲ, ಅದಕ್ಕನುಗುಣವಾದ ಸಾಧನೆಗಳಿದ್ದರೆ ನನ್ನನ್ನು ನೋಡಬಹುದು…’ ದೇವರನ್ನು ನೋಡುವುದೆಂತು ಎಂಬ ಬಗ್ಗೆ ನಮ್ಮೆಲ್ಲರಿಗೂ ಈ ಕಥೆ ಪಾಠವಾಗಲಿ.